ನ.28: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್ ವರೆಗೆ ಪ್ರಧಾನಿ ಮೋದಿ ‘ರೋಡ್ ಶೋ’

Spread the love

ನ.28: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್ ವರೆಗೆ ಪ್ರಧಾನಿ ಮೋದಿ ‘ರೋಡ್ ಶೋ’

ಉಡುಪಿ: ನ.28 ಶುಕ್ರವಾರ ಬೆಳಿಗ್ಗೆ ಗಂಟೆ 11.40ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ‘ರೋಡ್ ಶೋ’. ಉಡುಪಿ-ಬನ್ನಂಜಿಯ ಡಾ|ವಿ.ಎಸ್. ಆಚಾರ್ಯ ಬಸ್ ನಿಲ್ದಾಣದ ಬಳಿ ಶ್ರೀ ನಾರಾಯಣ ಗುರು ಸರ್ಕಲ್ ನಿಂದ ಪ್ರಾರಂಭಗೊಂಡು ಸಿಟಿ ಬಸ್ ನಿಲ್ದಾಣ ಮಾರ್ಗವಾಗಿ ಕಲ್ಸಂಕ ಜಂಕ್ಷನ್ ವರೆಗೆ ಸಾಗಲಿದೆ.ಕಲ್ಸಂಕ ರಸ್ತೆಯಿಂದ ನೇರವಾಗಿ ಪಾರ್ಕಿಂಗ್ ಏರಿಯಾ-ರಥಬೀದಿ ಮೂಲಕ ಮಧ್ಯಾಹ್ನ ಗಂಟೆ 12.00ಕ್ಕೆ ಶ್ರೀ ಕೃಷ್ಣ ಮಠವನ್ನು ತಲುಪಿ, ಶ್ರೀ ಕೃಷ್ಣ ದರ್ಶನ ಪಡೆಯಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಹೇಳಿದರು.

ಅವರು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬಳಿಕ ಪ್ರಧಾನಿ ಮೋದಿ ಅವರು ಸಾಮೂಹಿಕ ‘ಲಕ್ಷ ಕಂಠ ಗೀತಾ ಪಾರಾಯಣ’ದಲ್ಲಿ ಪಾಲ್ಗೊಂಡು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ ಮಧ್ಯಾಹ್ನ ಗಂಟೆ 1.35ಕ್ಕೆ ಸಮಾರಂಭದ ಹೊರಟು 1.40ಕ್ಕೆ ಆದಿ ಉಡುಪಿ ಹೆಲಿಪ್ಯಾಡ್ ತಲುಪಿ 1.45ಕ್ಕೆ ಎಂಐ -17 ಹೆಲಿಕಾಪ್ಟರ್ ಮೂಲಕ ಮಂಗಳೂರಿಗೆ ತೆರಳಿ, ಮಧ್ಯಾಹ್ನ 2.15ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ವಿಮಾನದಲ್ಲಿ ಗೋವಾಕ್ಕೆ ಪ್ರಯಾಣ ಮಾಡಲಿದ್ದಾರೆ.

ಉಡುಪಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಅವರನ್ನು ಭವ್ಯವಾಗಿ ಸ್ವಾಗತಿಸಲು ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಪ್ರಧಾನಿ ಮೋದಿ ಅವರ ‘ರೋಡ್ ಶೋ’ ಮಾರ್ಗದ ಮೂರು ಕಡೆಗಳಲ್ಲಿ ಕರಾವಳಿಯ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಯಕ್ಷಗಾನ ವೇಷ, ಹುಲಿ ವೇಷ, ಶ್ರೀ ಕೃಷ್ಣ ವೇಷದಾರಿಗಳ ಪ್ರದರ್ಶನ ಇತ್ಯಾದಿ ಇರಲಿವೆ. ರಸ್ತೆ ಮಾರ್ಗದ ಒಂದು ಕಡೆ ಬ್ಯಾರಿಕೇಡ್ ಅಳವಡಿಸಲಾಗುತ್ತಿದ್ದು, ಆ ರಸ್ತೆಯ ಇಕ್ಕೆಲಗಳಲ್ಲಿ 30 ಸಾವಿರಕ್ಕೂ ಅಧಿಕ ಜನರು ನಿಂತು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲಿದ್ದಾರೆ. ರೋಡ್ ಶೋ ವೀಕ್ಷಣೆ ಮಾಡುವ ಸಮಸ್ತ ನಾಗರಿಕರು ನ.28ರ ಬೆಳಿಗ್ಗೆ ಗಂಟೆ 10.30ರೊಳಗೆ ಬನ್ನಂಜೆ-ಕಲ್ಸಂಕ ರಸ್ತೆಯ ಇಕ್ಕೆಲಗಳಲ್ಲಿ ಉಪಸ್ಥಿತರಿರುವಂತೆ ಕೋರಲಾಗಿದೆ.

ಕಾರ್ಯಕ್ರಮದಲ್ಲಿ ಜಿಲ್ಲೆಯ 1,112 ಮತಗಟ್ಟೆಗಳ ಪ್ರತೀ ಬೂತ್ ಗಳಿಂದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಜಿಲ್ಲಾ ಬಿಜೆಪಿಯಿಂದ ಕೋರಲಾಗಿದೆ. ನಗರ ಭಾಗದಿಂದ ಗರಿಷ್ಠ ಸಂಖ್ಯೆಯ ಜನತೆ ಪಾಲ್ಗೊಳ್ಳಲಿದ್ದಾರೆ..

2018ರ ಬಳಿಕ ಉಡುಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ತಿರದಿಂದ ನೋಡುವ ಸದವಕಾಶ ಜಿಲ್ಲೆಯ ಜನರಿಗೆ ಲಭಿಸುತ್ತಿದೆ. ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾ. ಬ್ರಿಜೇಶ್ ಚೌಟ ಸಹಿತ ಜಿಲ್ಲೆಯ ಶಾಸಕರು, ರಾಜ್ಯದ ಪ್ರಮುಖ ನಾಯಕರು ಈ ಭಾವನಾತ್ಮಕ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರು, ಮೋದಿ ಅಭಿಮಾನಿಗಳ ಸಹಿತ ಜಿಲ್ಲೆಯ ಮಹಾ ಜನತೆ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶ್ವ ನಾಯಕ, ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಸಂಭ್ರಮದಿಂದ ಸ್ವಾಗತಿಸಬೇಕು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರೇಶ್ಮಾ ಉದಯ್ ಶೆಟ್ಟಿ, ಶ್ರೀನಿಧಿ ಹೆಗ್ಡೆ, ಶಿವಕುಮಾರ್ ಇಂದ್ರಾಳಿ, ಶಿಲ್ಪಾಸುವರ್ಣ, ಶ್ರೀಕಾಂತ್ ನಾಯಕ್, ರತನ್ ರಮೇಶ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments