ಪಡುಬಿದ್ರಿ: ಉಚ್ಚಿಲ ಶ್ರೀಮಹಾಲಿಂಗೇಶ್ವರ ದೇವಳದ ಆಭರಣ ನಾಪತ್ತೆ ಪ್ರಕರಣ.ದ್ವಿತೀಯ ಆರೋಪಿ ಪೊಲೀಸ್ ವಶಕ್ಕೆ

Spread the love

ಪಡುಬಿದ್ರಿ: ಹದಿನಾಲ್ಕು ತಿಂಗಳ ಹಿಂದೆ ಉಚ್ಚಿಲ ಶ್ರೀಮಹಾಲಿಂಗೇಶ್ವರ ದೇವರ ಚಿನ್ನಾಭರಣ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ನಾಪತ್ತೆಯಾದ ಇನ್ನೋರ್ವ ಆರೋಪಿ ನಾಗರಾಜ್ ಭಟ್ನನ್ನು ಪಡುಬಿದ್ರಿ ಪೋಲಿಸರು ಸೆರೆ ಹಿಡಿದಿದ್ದು, ಇದೀಗ ಪಡುಬಿದ್ರಿ ಪೊಲೀಸರ ಅಥಿತಿಯಾಗಿದ್ದಾನೆ.

ಘಟನೆಯ ವಿವರ: ಉಚ್ಚಿಲ ದೇವಳದ 2014ರ ವಾರ್ಶಿಕ ಜಾತ್ರೆಯ ಸಂದರ್ಭ ದೇವರ ಆಭರಣಗಳು ನಾಪತ್ತೆಯಾಗಿತ್ತು. ಈ ವಿಚಾರ ತಂತ್ರಿ ವರ್ಗದವರ ಗಮನಕ್ಕೆ ಪ್ರಮುಖರಾದ ಕೆಲವರ ಗಮನಕ್ಕೆ ಬಂದಿತ್ತು. ರಥೋತ್ಸವದ ಪೂರ್ವ ತಯಾರಿ ಆಗುತ್ತಿದ್ದಾಗ ರಥಾರೋಹಣಕ್ಕೆ ಬಳಸುತ್ತಿದ್ದ ಎಲ್ಲಾ ಚಿನ್ನಾಭರಣ ಮಾಯವಾಗಿತ್ತು. ಕೋಟ್ಯಾಂತರ ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ಕಲಶಗಳು ನಾಪತ್ತೆ ಆಗಿತ್ತು. ದೇವಳದ ಆಡಳಿತ ನೋಡುತ್ತಿದ್ದ ಮತ್ತು ಪ್ರಮುಖ ಅರ್ಚಕ ಗಣೇಶ ಭಟ್ಟನಲ್ಲಿ ಈ ಬಗ್ಗೆ ವಿಚಾರಿಸಿದಾಗ ಅಡವಿರಿಸಿದ್ದನ್ನು ಒಪ್ಪಿಕೊಂಡ ಆತ, ಈ ಬಗ್ಗೆ ಹೆಚ್ಚಿನ ಪ್ರಶ್ನೆ ಮಾಡಿದರೆ ನಿಮ್ಮ ಹೆಸರು ಹೇಳಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೇಳಿ ಅಲ್ಲಿಂದ ನಾಪತ್ತೆ ಆಗಿದ್ದ. ಹಲವಾರು ಜನರ ಪ್ರಯತ್ಮದ ನಂತರ ಉತ್ಸವದ ಪೂರ್ವ ಸಂಜೆ ಆತ ಬಂದನಾದರೂ, ಯಾವುದೇ ಚಿನ್ನಾಭರಣ ತನ್ನೊಂದಿಗೆ ತಂದಿಲ್ಲ.

ರಥೋತ್ಸವದಂದು ಮದ್ಯಾಹ್ನ ದೇವರ ಸಾಲಂಕೃತ ಮೂರ್ತಿಯನ್ನು ತಲೆ ಮೇಲಿರಿಸಿ ರಥಾರೋಹಣ ಮಾಡುವುದು ಇಲ್ಲಿಯ ಸಂಪ್ರದಾಯ. ಈ ಪುಣ್ಯ ಕೆಲಸವನ್ನು ಇಲ್ಲಿಯ ಪ್ರಮುಖ ಅರ್ಚಕರು ಮಾಡುವುದು ಇಲ್ಲಿಯ ವಾಡಿಕೆ. ದೇವರ ಮೂತರ್ಿಯಲ್ಲಾಗಲೀ, ಗಣೇಶ ಭಟ್ಟನ ಮೈಮೇಲಾಗಲೀ ಯಾವುದೇ ಚಿನ್ನಾಭರಣ ಇರಲಿಲ್ಲ. ಈ ಎಲ್ಲಾ ಚಿನ್ನಾಭರಣ ದೇವಳಕ್ಕೆ ಭಕ್ತಾಧಿಗಳು ನೀಡಿದ ಹರಕೆಯದ್ದಾಗಿದೆ. ಈ ತನಕ ಚಿನ್ನಾಭರಣ ನಾಪತ್ತೆ ಪ್ರಕರಣ ಕೇವಲ ವಿಪ್ರ ವರ್ಗದವರಿಗೆ ಮಾತ್ರ ತಿಳಿದಿತ್ತು. ಆದರೆ ಈ ವಿಷಯ ರಥೋತ್ಸವಕ್ಕೆ ಬಂದಿದ್ದ ಸಾವಿರಾರು ಜನರಿಗೆ ಗೊತ್ತಾಯಿತು.

ರಥೋತ್ಸವಕ್ಕೆ ಬಂದಿದ್ದವರೆಲ್ಲರೂ ಚಿನ್ನಾಭರಣ ಮಾಯೆ ಆದ ಬಗ್ಗೆಯೇ ಮಾತನಾಡಿದ್ದೇ ಮಾತನಾಡಿದ್ದು, ಆಗಲೇ ರಥೋತ್ಸವ ಮುಗಿದಿತ್ತು!

 

ಗ್ರಾಮಸ್ಥರು ಒಟ್ಟಾಗಿ ಒಮ್ಮತದ ನಿರ್ಣಯಕ್ಕೆ ಬಂದಿದ್ದು, ಗಣೇಶ್ ಭಟ್ಟನಲ್ಲಿ ಈ ಬಗ್ಗೆ ವಿಚಾರಿಸಲು ಪ್ರಯತ್ನಿಸಿದಾಗ, ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದೇ ವೇಳೆ ಧಾರ್ಮಿಕ ದತ್ತಿ ಇಲಾಖಾಧಿಕಾರಿ ದೊಡ್ಡಮನಿಯವರು ಆಗಮಿಸಿ ದೇವಳದ ಚಿನ್ನಾಭರಣಗಳನ್ನು ಪರಿಶೀಲಿಸಿದಾಗ, ಯಾವೊಂದೂ ಚಿನ್ನಾಭರಣಗಳ ಸುಳಿವಿರಲಿಲ್ಲ. ಇದೇ ವೇಳೆ ದೇವಳಕ್ಕೆ ಆಗಮಿಸಿದ ಗಣೇಶ ಭಟ್ಟನಲ್ಲಿ ವಿಚಾರಿಸಿದಾಗ, ಚಿನ್ನಾಭರಣವನ್ನು ರಿಪೇರಿಗೆಂದು ನಾಗರಾಜ ಭಟ್ಟನಿಗೆ ನೀಡಿದ್ದು, ಆತ ನಾಪತ್ತೆ ಆಗಿದ್ದಾನೆಂದು ಹೇಳಿದ್ದ. ಧಾರ್ಮಿಕ ದತ್ತಿ ಇಲಾಖೆಯು ದೇವಳದಲ್ಲಿ 880 ಗ್ರಾಂ. ಚಿನ್ನಾಭರಣ ನಾಪತ್ತೆ ಆದ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ದೂರು ದಾಖಲಿಸಿ ಕೈತೊಳೆದುಕೊಂಡಿದೆ. ಈ ಘಟನೆಯ ಮರುದಿನದಿಂದ ನಾಗರಾಜ ಭಟ್ಟನೊಂದಿಗೆ ಗಣೇಶ ಭಟ್ಟನೂ ನಾಪತ್ತೆ ಆಗಿದ್ದ!

ಈ ಘಟನೆಯ ಕೆಲವು ತಿಂಗಳ ನಂತರ ಪಡುಬಿದ್ರಿ ಪೋಲಿಸರು ಪುತ್ತೂರು ದೇವಳದ ಬಳಿ ಗಣೇಶ ಭಟ್ಟನನ್ನು ಬಂಧಿಸಿ ಆತನಿಂದ ಹೆಚ್ಚಿನ ಚಿನ್ನಾಭರಣ ವಶ ಪಡಿಸಿಕೊಂಡಿದ್ದಾರೆ. ಗಣೇಶ ಭಟ್ಟ ಮೊದಲು ನೀಡಿದ ಹೇಳಿಕೆಯಲ್ಲಿ ಚಿನ್ನಾಭರಣವನ್ನು ನಾಗರಾಜ ಭಟ್ಟನಿಗೆ ನೀಡಿದ್ದೇನೆಂದು ಹೇಳಿದ್ದ. ಆದರೆ ಚಿನ್ನಾಭರಣ ಗಣೇಶ ಭಟ್ಟನ ಮನೆಯಲ್ಲಿ ಪತ್ತೆ ಆಗಿತ್ತು! ಈ ಘಟನೆಯ ನಂತರ ಗಣೇಶ ಭಟ್ಟ ಕೆಲ ಸಮಯ ಉಡುಪಿ ಜಿಲ್ಲಾ ಕಾರಗಾರದಲ್ಲಿದ್ದು, ಜಾಮೀನಿನಲ್ಲಿ ಹೊರ ಬಂದಿದ್ದ. ತಾನು ಗ್ರಾಮ ದೇವರ ದೇವಳದಲ್ಲಿ ಚಿನ್ನಾಭರಣ ಕದ್ದಿದ್ದೇನೆಂಬ ಯಾವುದೇ ಕೀಳರಿಮೆ ಇಲ್ಲದೆ ರಾಜಾರೋಷವಾಗಿ ತಿರುಗಾಡುತ್ತಿದ್ದ.

9

ನಾಗರಾಜ್ ಭಟ್ ನ ಪತ್ತೆಗಾಗಿ ಪಡುಬಿದ್ರಿ ಪೊಲೀಸರು ವ್ಯಾಪಕ ಬಲೆ ಬೀಸಿದ್ದು ಶುಕ್ರವಾರ ಮಂಗಳೂರು ಕೆಎಸ್ಆರ್ಟಿಸಿ ಬಸ್ಸು ನಿಲ್ದಾಣ ಬಳಿ ಆತನ ಇರುವಿಕೆ ಬಗ್ಗೆ ಮಾಹಿತಿ ಪಡೆದು ಆತನನ್ನು ಬಂಧಿಸಿದ್ದಾರೆ. ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಚಿನ್ನಾಭರಣಗಳನ್ನು ಉಡುಪಿ ಗುಂಡಿಬೈಲ್ನ ಜಯೇಶ್ ಶೇಟ್ ಎಂಬವರಿಗೆ ನೀಡಿದ್ದಾಗಿ ತಿಳಿಸಿದ್ದ. ಶನಿವಾರ ಪೊಲೀಸರು ಜಯೇಶ್ ಶೇಟ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ನಾಗರಾಜ್ ನೀಡಿದ್ದ ಚಿನ್ನಾಭರಣಗಳನ್ನು ಕರಗಿಸಿ ಇತರ ಚಿನ್ನಾಭರಣ ವ್ಯಾಪಾರಿಗಳಿಗೆ ಮಾರಾಟ ಮಾಡಿದ್ದನ್ನು ಒಪ್ಪಿಕೊಂಡಿದ್ದ. ಪೊಲೀಸರು ಸತೀಶ್ ಎಂಬವರಿಂದ 110 ಗ್ರಾಂ, ಜಯೇಶ್ ಬಳಿ ಇದ್ದ 30 ಗ್ರಾಂ ವಶಪಡಿಸಿಕೊಂಡಿದ್ದು ಬಾಲು ಎಂಬವರಿಗೆ ನೀಡಿದ್ದ 160 ಗ್ರಾಂ ಮತ್ತು ಫೈನಾನ್ಸ್ ಒಂದರಲ್ಲಿ ಅಡವಿಟ್ಟಿರುವ 70 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲು ಬಾಕಿ ಇದೆ.

ಗಣೇಶ್ ಭಟ್ನನ್ನು ಬಂಧಿಸಿದ್ದ ಸಂದರ್ಭ ಮಾರಾಟ ಮಾಡಿ ಉಳಿದ 400 ಗ್ರಾಂ ಚಿನ್ನಾಭರಣವನ್ನು ಪೊಲೀಸರಿಗೆ ನೀಡಿದ್ದನ್ನು. ಉಳಿದಂತೆ 420 ಗ್ರಾಂ ತೂಕದ ಚಿನ್ನಾಭರಣಗಳಾದ ಈಶ್ವರನ ಬಲಿ ಮೂರ್ತಿ ಕವಚ, ಚಿನ್ನದ ಬಳೆ, ರುದ್ರಾಕ್ಷಿ ಸರ, ನೆಲ್ಲಿಕಾಯಿ ಸರ, ಕಣ್ಣು ದೃಷ್ಟಿ ಹಾಗೂ ಬೆಳ್ಳಿಯ 13 ತಂಬಿಗೆಗಳನ್ನು ದೇವಸ್ಥಾನಕ್ಕೆ ತಪ್ಪೊಪ್ಪಿಗೆ ನೀಡಲಿಕ್ಕಾಗಿ ಜಯೇಶ್ ಶೇಟ್ ಬಳಿ ಇರಿಸಿದ್ದು ಅದನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೋಲೀಸರು ವಶ ಪಡಿಸಿಕೊಂಡ ಚಿನ್ನಾಭರಣಗಳನ್ನು ಹೊರತು ಪಡಿಸಿ ಬಾಕಿ ಉಳಿದ ಎಲ್ಲಾ ಚಿನ್ನಾಭರಣ ನಮ್ಮ ವಶದಲ್ಲಿದೆ. ಈ ಚಿನ್ನಾಭರಣವನ್ನು ಹೇಗೆ ನೀಡಬೇಕೆಂಬ ಗೊಂದಲ ಇದೆ. ನಾವು ಚಿನ್ನಾಭರಣವನ್ನು ಹೇಗೆ ಎಲ್ಲಿ ನೀಡಬೇಕು? ಎಂದು ಗ್ರಾಮಸ್ಥರ ಒಂದು ಸಭೆಯಲ್ಲಿ ಸ್ಥಳೀಯ ಶ್ರೀಧರ ಭಟ್ ದೇವಳದ ಅಡಳಿತಾಧಿಕಾರಿ ಬಾಲಕೃಷ್ಣ ರೈ ಅವರನ್ನು ಪ್ರಶ್ನಿಸಿದ್ದರು. ಅದಕ್ಕೆ ಅವರು ನಿರುತ್ತರರಾಗಿದ್ದರು.

ಇದೀಗ ನಾಗರಾಜ ಪೋಲಿಸರ ಅತಿಥಿಯಾಗಿದ್ದು, ಈ ಪ್ರಕರಣದಲ್ಲಿ ಉಡುಪಿಯ ಜಯೇಶ್ ಶೇಟ್ ಎಂಬಾತನೂ ಭಾಗಿ ಆಗಿದ್ದು, ಆತನನ್ನೂ ಪೋಲಿಸರು ಬಂಧಿಸಿದ್ದಾರೆ.

ನಾಗರಾಜ ಮತ್ತು ಜಯೇಶ್ ಶೇಠ್ನಿಂದ ಬಾಕಿಯುಳಿದ ಎಲ್ಲಾ ಚಿನ್ನಾಭರಣವನ್ನು ವಶ ಪಡಿಸಿಕೊಂಡಿದ್ದೇವೆ ಎಂದು ಪಡುಬಿದ್ರಿ ಪೋಲಿಸರು ಹೇಳಿದ್ದು, ಆದಿನ ಸಭೆಯಲ್ಲಿ ಶ್ರೀಧರ ಭಟ್ಟ ಹೇಳಿದ ಚಿನ್ನಾಭರಣ ಯಾವುದೆಂದು ಪೋಲಿಸರು ನಿಷ್ಪಕ್ಷಪಾತ ತನಿಖೆ ನಡೆಸಿದರೆ ಮಾತ್ರಾ ತಿಳಿಯಲಿದೆ.


Spread the love