ಪರಿಹಾರ ನೀಡಿ, ಇಲ್ಲವೇ ಭೂಮಿ ವಾಪಸ್ ಕೊಡಿ : ಪದವು ಗ್ರಾಮ ರಾ.ಹೆ.169 ಭೂ ಮಾಲಕರ ಆಗ್ರಹ
ಮಂಗಳೂರು: ಮಂಗಳೂರು-ಸಾಣೂರು ರಾಷ್ಟ್ರೀಯ ಹೆದ್ದಾರಿ 169ರ ಪದವು ಗ್ರಾಮದಲ್ಲಿ ಭೂ ಸ್ವಾಧೀನಕ್ಕೆ ನೋಟಿಫಿಕೇಶನ್ ಆಗಿರುವ ಜಮೀನನ್ನು ಸ್ವಾಧೀನಪಡಿಸಿ ಸೂಕ್ತ ಪರಿಹಾರ ನೀಡಬೇಕು. ಇಲ್ಲವಾದರೆ ಡಿನೋಟಿಫೈ ಮಾಡಿ ಜಮೀನನ್ನು ಮಾಲಕರಿಗೆ ವಾಪಸ್ ನೀಡಬೇಕೆಂದು ಪದವು ಗ್ರಾಮದ ಭೂ ಮಾಲಕರು ಒತ್ತಾಯಿಸಿದ್ದಾರೆ.
ಶುಕ್ರವಾರದಂದು ಮಂಗಳೂರು ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭೂಮಾಲಕರ ಹೋರಾಟ ಸಮಿತಿಯ ಅಧ್ಯಕ್ಷೆ ಮರಿಯಮ್ಮ ಥೋಮಸ್ ಅವರು, ಮಂಗಳೂರು-ಮೂಡುಬಿದಿರೆ – ಸಾಣೂರು ರಸ್ತೆ ಅಗಲೀಕರಣದ ಬಗ್ಗೆ ಕೇಂದ್ರ ಸರಕಾರ 2016ರಲ್ಲಿ ಅಧಿಸೂಚನೆ ಹೊರತುಪಡಿಸಿ 2017 ರಲ್ಲಿ ಮಂಗಳೂರಿನ ಪದವು ಗ್ರಾಮವನ್ನು ಹೊರತುಪಡಿಸಿ ಅಂತಿಮ ಅಧಿಸೂಚನೆಯನ್ನು ಹೊರಡಿಸಿತ್ತು. ಪದವು ಗ್ರಾಮ ಹಾಗೂ ಉಳಿದ 19 ಗ್ರಾಮಗಳಲ್ಲಿ ಬಿಟ್ಟು ಹೋದ ಜಮೀನುಗಳ ಭೂಸ್ವಾಧೀನತೆಗಾಗಿ 2020 ರಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿತ್ತು.
ಪದವು ಗ್ರಾಮಕ್ಕೆ ಸಂಬಂಧಪಟ್ಟಂತೆ, 2016 ರಲ್ಲಿ ಸೆಂಟ್ಸು ಒಂದಕ್ಕೆ ಸಿವಿಸಿ ಗೈಡ್ಲೈನ್ ಪ್ರಕಾರ 3,50,000 ರೂ. ಮೌಲ್ಯವಿತ್ತು. 2020 ರಲ್ಲಿ ಸೆಂಟ್ಸ್ ಒಂದಕ್ಕೆ ಸಿವಿಸಿ ಗೈಡ್ ಲೈನ್ ಪ್ರಕಾರ 10,11,700 ರೂ. ಆಗಿದೆ. ಪ್ರಸ್ತುತ ಸಿವಿಸಿ ಗೈಡ್ಲೈನ್ 13,35,444 ರೂ. ಮೌಲ್ಯವಿದೆ. ಭೂಮಿ ಕಳಕೊಂಡವರಿಗೆ 2020ರ ದರದಂತೆ ಪರಿಹಾರ ನೀಡಬೇಕಾಗಿದೆ. ಇದರ ವಿರುದ್ಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಆರ್ಬಿಟ್ರೇಶನ್ಗೆ ಅಪೀಲು ಸಲ್ಲಿಸಿದ್ದು, ಅಪೀಲು ವಜಾ ಆಗಿದೆ. ತದನಂತರ ಆಬ್ರಿಟ್ರೇಶನ್ನ ಮೇಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅಪೀಲು ಮಾಡಿದ್ದು, ಪ್ರಕರಣವು ಕಳೆದ 2 ವರ್ಷದಿಂದ ಮಂಗಳೂರಿನ ಜಿಲ್ಲಾ ನ್ಯಾಯಾಲಯದಲ್ಲಿ ತನಿಖಾ ಹಂತದಲ್ಲಿದೆ. ಇದರಿಂದಾಗಿ ಪದವು ಗ್ರಾಮದ ಭೂಸ್ವಾಧೀನತೆಗೆ ಒಳಪಟ್ಟ ಜಮೀನಿನ ಮಾಲಕರು ಕಳೆದ 9 ವರ್ಷಗಳಿಂದ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ಆದರೆ ಸಾಮಾಜಿಕವಾಗಿ ಭೂ ಮಾಲಕರು ಭೂಮಿ ಬಿಡದ ಕಾರಣ ಹೆದ್ದಾರಿ ಅಗಲೀಕರಣಕ್ಕೆ ತೊಂದರೆಯಾಗಿದೆ ಎಂದು ಬಿಂಬಿಸಲಾಗಿದೆ. ಆದರೆ ಎನ್ಎಚ್ಎಐನಿಂದ ಸೂಕ್ತ ಪರಿಹಾರ ದೊರಕದೆ ರಸ್ತೆ ಅಭಿವೃದ್ಧಿಗೆ ತೊಡಕಾಗಿದೆ. ಇಲಾಖೆಯ ಈ ಪರಿಯ ಕಾರ್ಯ ವಿಧಾನವನ್ನು ಜಿಲ್ಲೆಯ ಜನಪ್ರತಿನಿಧಿಗಳು ಗಮನಿಸದಿರುವುದು ಅತ್ಯಂತ ದೌರ್ಭಾಗ್ಯವಾಗಿದೆ.
ಕುಡುಪು ಗ್ರಾಮದಿಂದ ಸಾಣೂರು ತನಕ ಭೂಸ್ವಾಧೀನಪಡಿಸಿದರೂ ಈ ತನಕ ಶೇ. 50 ಕೆಲಸ ಪೂರ್ತಿ ಆಗಿಲ್ಲ. ಒಂದು ವೇಳೆ ಪದವು ಗ್ರಾಮ ಭೂ ಮಾಲಕರಿಗೆ ಪರಿಹಾರ ನೀಡಲು ಸಾಧ್ಯವಾಗದಿದ್ದರೆ ಡಿ ನೋಟಿಫೈ ಭೂ ಮಿ ವಾಪಸ್ ನೀಡಬೇಕು. ಭೂ ಮಾಲಕರಿಗೆ ಹಿಂಸೆ ನೀಡಬಾರದು. ಸಮಸ್ಯೆಗೆ ಪರಿಹಾರ ನೀಡದಿದ್ದಲ್ಲಿ ಮಗದೊಮ್ಮೆ ಹೋರಾಟ ಮಾಡಿ ನಮ್ಮ ಹಕ್ಕನ್ನು ಪಡೆಯುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು.
ಸಮಿತಿಯ ಖಜಾಂಚಿ ರತ್ನಾಕರ್ ಶೆಟ್ಟಿ ಅವರು ಮಾತನಾಡಿ, ಹೆದ್ದಾರಿ ಪ್ರಾಧಿಕಾರವು ಉದ್ದೇಶಪೂರ್ವಕವಾಗಿ ನ್ಯಾಯಾಲಯದಲ್ಲಿ ಪ್ರಕರಣ ಮುಂದಕ್ಕೆ ಹೋಗುವಂತೆ ಮಾಡುತ್ತಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ವಿಶ್ವಜಿತ್, ಸದಸ್ಯ ಜಯರಾಮ ಪೂಜಾರಿ ಉಪಸ್ಥಿತರಿದ್ದರು.
ಸಮಿತಿಯ ಸಂಚಾಲಕ ಪ್ರಕಾಶ್ಚಂದ್ರ ಆವರು ಮಾತನಾಡಿ, ಒಂದು ತಿಂಗಳೊಳಗೆ ಪರಿಹಾರ ಪಾವತಿ ಮಾಡದಿದ್ದರೆ, ಕೋರ್ಟ್ ವ್ಯಾಜ್ಯ ವಾಪಸ್ ಪಡೆಯದಿದ್ದರೆ ಮುಂದೆ ಭೂಮಿ ಬಿಟ್ಟು ಕೊಡದಿರಲು ನಿರ್ಧರಿಸಿದ್ದೇವೆ ಎಂದರು.













