ಪಲಿಮಾರು ಮಠದ ಉತ್ತರಾಧಿಕಾರಿಯಾಗಿ ಶ್ರೀ ವಿದ್ಯಾ ರಾಜೇಶ್ವರ ತೀರ್ಥ ಸ್ವಾಮೀಜಿಗೆ ಪಟ್ಟಾಭಿಷೇಕ

Spread the love

ಪಲಿಮಾರು ಮಠದ ಉತ್ತರಾಧಿಕಾರಿಯಾಗಿ ಶ್ರೀ ವಿದ್ಯಾ ರಾಜೇಶ್ವರ ತೀರ್ಥ ಸ್ವಾಮೀಜಿಗೆ ಪಟ್ಟಾಭಿಷೇಕ

ಉಡುಪಿ: ಶ್ರೀಕೃಷ್ಣಮಠದ ಸರ್ವಜ್ಞ ಪೀಠದಲ್ಲಿ, ಶ್ರೀ ಪಲಿಮಾರು ಮಠದ ಉತ್ತರಾಧಿಕಾರಿಯಾಗಿ ಸನ್ಯಾಸ ಆಶ್ರಮ ಸ್ವೀಕರಿಸಿದ ನೂತನ ಯತಿಗಳಿಗೆ ಮಧ್ಯಾಹ್ನ 12.20 ಗಂಟೆಗೆ ಪರ್ಯಾಯ ಶ್ರೀ ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ವೇದಾಂತ ಸಾಮ್ರಾಜ್ಯಕ್ಕೆ ಪಟ್ಟಾಭಿಷೇಕ ಮಾಡಿ ಪಲಿಮಾರು ಮಠದ 31 ನೇ ಯತಿಗಳಾಗಿ ಶ್ರೀ ವಿದ್ಯಾರಾಜೇಶ್ವರತೀರ್ಥ ಎಂದು ನಾಮಕರಣ ಮಾಡಿದರು.

ಉಡುಪಿಯ ಅಷ್ಟಮಠಗಳಲ್ಲಿ ಪಲಿಮಾರು ಮಠವೂ ಒಂದು. ಕಳೆದ ಎಂಟ್ನೂರು ವರ್ಷಗಳಲ್ಲಿ 30 ಯತಿಗಳು ಇಲ್ಲಿಗೆ ಮಠಾಧೀಶರಾಗಿದ್ದಾರೆ. ಸದ್ಯ ಕೃಷ್ಣಪೂಜೆಯನ್ನು ನಡೆಸುತ್ತಿರುವ ಪಲಿಮಾರು ವಿದ್ಯಾದೀಶ ತೀರ್ಥರು ಈ ಪರಂಪರೆಯ ಮೂವತ್ತನೆಯ ಯತಿ. ಇದೀಗ ಅವರು ಶಿಷ್ಯ ಸ್ವೀಕಾರ ಮಾಡಿದ್ದು 31 ನೇ ಯತಿಯ ಪಟ್ಟಾಭಿಷೇಕ ಇಂದು ನಡೆಯಿತು.

ಕಳೆದ ನಾಲ್ಕು ದಿನಗಳಿಂದಲೂ ವಿವಿಧ ಧಾರ್ಮಿಕ ಕಾಯಕ್ರಮಗಳು ಏರ್ಪಾಟಾಗಿತ್ತು. ಇಂದು ನವಯತಿಯ ರಾಜಗಾಂಭೀರ್ಯದ ಪಟ್ಟಾಭಿಷೇಕ ಜರುಗಿತು. ಕೃಷ್ಣ ದೇವರಿಗೆ ಮಹಾಪೂಜೆಯ ನಂತರ ಸನ್ನಿಧಾನದಲ್ಲಿ ಚತುರ್ವೇದ, ಭಾಗವತ, ಭಗವದ್ಘಿತೆ, ರಾಮಾಯಣ ಮೊದಲಾದ ಗ್ರಂಥಗಳ ಪಾರಾಯಣ ನಡೆಯಿತು. ಮಹಿಳೆಯರು ಲಕ್ಷ್ಮೀ ಶೋಭಾನೆ ಪಠಿಸಿದರು. ಇದೇ ವೇಳೆಯಲ್ಲಿ ಪಲಿಮಾರು ಮಠದ ಹಿರಿಯ ಸ್ವಾಮೀಜಿ ವಿದ್ಯಾಧೀಶ ತೀರ್ಥರು, ಕೃಷ್ಣ-ವೇದವ್ಯಾಸರ ವಿಗ್ರಹ ಹಾಗೂ ವಿಶ್ವಂಭರ ಸಾಲಿಗ್ರಾಮವನ್ನು ನೂತನ ಶಿಷ್ಯನ ತಲೆಯ ಮೇಲಿಟ್ಟು ಅಭಿಷೇಕ ಮಾಡಿದರು. ಭಕ್ತರ ಜಯಘೋಷದ ನಡುವೆ, ಪಲಿಮಾರು ಮಠದ ಉತ್ತರಾಧಿಕಾರಿಗೆ ‘ವಿದ್ಯಾ ರಾಜೇಶ್ವರ ತೀರ್ಥ’ ಎಂಬ ನಾಮಕರಣ ಮಾಡಲಾಯ್ತು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಪರ್ಯಾಯ ಶ್ರೀ ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಯತಿ ಪರಂಪರೆಯಲ್ಲಿ ಇದೊಂದು ಅಪೂರ್ವ ಸಂದರ್ಭ, ಪರ್ಯಾಯದ ಸಂದರ್ಭದಲ್ಲೇ ಸರ್ವಜ್ಞಪೀಠದ ಸಮ್ಮುಖದಲ್ಲಿ ಉತ್ತರಾಧಿಕಾರಿ ನೇಮಕವಾಗಿದ್ದು ವಿಶೇಷ. ಈ ವೇಳೆಯಲ್ಲಿ ಪೇಜಾವರ ಸ್ವಾಮಿಗಳ ಹಿರಿತನದಲ್ಲಿ ಕೃಷ್ಣಾಪುರ, ಕಾಣಿಯೂರು, ಸೋದೆ, ಅದಮಾರು, ಸುಬ್ರಹ್ಮಣ್ಯ, ಭೀಮನಕಟ್ಟೆ ಮಠದ ಸ್ವಾಮಿಗಳು ಹಾಜರಿದ್ದು ನವಯತಿಯನ್ನು ಹರಸಿದರು. ಮಾದ್ವಪೀಠಗಳ ಗಣ್ಯ ಮಠಾಧೀಶರು ಸರ್ವಜ್ಞ ಪೀಠದ ಸುತ್ತಲೂ ಕುಳಿತು ನವಯತಿಗೆ ಶುಭಕೋರಿದ ಗಳಿಗೆ ಮತ್ತೊಂದು ಪರ್ಯಾಯ ಮಹೋತ್ಸವಕ್ಕೆ ಸರಿಸಾಟಿಯಾದಂತಿತ್ತು. ಧಾರ್ಮಿಕ ಉದ್ದೇಶಗಳ ಜೊತೆಗೆ ಲೋಕಕಲ್ಯಾಣಾರ್ಥ ಪ್ರಾರ್ಥನೆಯೂ ಏರ್ಪಾಟಾಗಿತ್ತು. ದೇಶ ಮತ್ತು ಈ ದೇಶವನ್ನು ಮುಂದಕ್ಕೆ ಆಳಲಿರುವ ಪ್ರಧಾನ ಮಂತ್ರಿಗೆ ಒಳಿತಾಗಲಿ ಎಂದು ಸಾಮೂಹಿಕ ಮಂಗಲಾಷ್ಟಕ ಪಠನವೂ ನಡೆಯಿತು. ಕಳೆದ ಕೆಲವು ದಿನಗಳಿಂದ ಕೃಷ್ಣಮಠ ಹಾಗೂ ಅಷ್ಟಮಠಗಳ ರಥಬೀದಿಯಲ್ಲಿ ಹೊಸ ಯತಿಯನ್ನು ಬರಮಾಡಿಕೊಳ್ಳುವ ಸಂಭ್ರಮ ಮನೆಮಾಡಿದೆ. ಶೈಲೇಶ ಉಪಾಧ್ಯಾಯ ಎಂಬ ವಟು ಇನ್ನು ಮುಂದೆ ವಿದ್ಯಾ ರಾಜೇಶ್ವರನಾಗಿ ದೇವರು ಹಾಗೂ ಭಕ್ತರ ಸೇವೆಗೆ ಲಭ್ಯರಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಪೇಜಾವರ ಹಿರಿಯ ಮಠಾಧೀಶರಾದ ಶ್ರೀ ವಿಶ್ವೇಶ ತೀರ್ಥ ಶ್ರಿಪಾದರು, ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರಿಪಾದರು,ಅದಮಾರು ಹಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರಿಪಾದರು,ಪೇಜಾವರ ಕಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರಿಪಾದರು, ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರಿಪಾದರು, ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭತೀರ್ಥ ಶ್ರಿಪಾದರು,ಭೀಮನಕಟ್ಟೆ ಮಠಾಧೀಶರಾದ ಶ್ರೀ ರಘುವರೇಂದ್ರತೀರ್ಥ ಶ್ರಿಪಾದರು, ಅದಮಾರು ಕಿರಿಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರಿಪಾದರು ಉಪಸ್ಥಿತರಿದ್ದರು.

ಧಾರ್ಮಿಕ ಕಾರ್ಯಕ್ರಮಗಳನ್ನು ವಿದ್ವಾಂಸರಾದ ಸುಬ್ರಮಣ್ಯ ಭಟ್ ಗುಂಡಿಬೈಲ್ ನಡೆಸಿಕೊಟ್ಟರು, ಹಾಗೂ ಪರ್ಯಾಯ ಮಠದ ದಿವಾನರಾದ ವೇದವ್ಯಾಸ ತಂತ್ರಿ,ಕಂಬ್ಲಕಟ್ಟ ಸುರೇಂದ್ರ ಉಪಾದ್ಯಾಯ,ಕಂಬ್ಲಕಟ್ಟ ಉಪಾದ್ಯಾಯ ಮೊದಲಾದವರು ಉಪಸ್ಥಿತರಿದ್ದರು.


Spread the love