ಪಾದುವ ಹೈಸ್ಕೂಲಿನ ಅಮೃತ ಮಹೋತ್ಸವ ಪ್ರಯುಕ್ತ ಗುರುವಂದನ

Spread the love

ಪಾದುವ ಹೈಸ್ಕೂಲಿನ ಅಮೃತ ಮಹೋತ್ಸವ ಪ್ರಯುಕ್ತ ಗುರುವಂದನ

ಮಂಗಳೂರು: ಪಾದುವ ಹೈಸ್ಕೂಲಿನ ಅಮೃತಮಹೋತ್ಸವ ವರ್ಷದ ಪ್ರಯುಕ್ತ ನವಂಬರ್ 23ರಂದು ಗುರುವಂದನ ಏರ್ಪಡಿಸಲಾಗಿತ್ತು. ಹಳೆಯ ವಿದ್ಯಾರ್ಥಿಗಳು ಹಾಗೂ ಅವರಿಗೆ ಶಿಕ್ಷಣ ನೀಡಿದ ಶಿಕ್ಷಕರ ಸಮಾಗಮ ಭಾವನಾತ್ಮಕ ಕ್ಷಣಗಳನ್ನು ಕಂಡಿತು.

ಕಥೊಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಅ|ವಂ|ಆಂಟನಿ ಶೆರಾರವರು ಮಾತನಾಡಿ‘ಹಿಂದಿನ ಕಾಲದ ಶಿಕ್ಷಕರು ಮಕ್ಕಳ ಬುದ್ಧಿಯನ್ನು ತಿದ್ದಿದ ವಿಧಾನವನ್ನು ಇಂದು ಅವರು ಕೃತಜ್ಞತೆಯಿಂದ ಸ್ಮರಿಸುತ್ತಾರೆ; ಆದರೆ ಅದೇ ವಿಧಾನವನ್ನು ಇಂದಿನ ಶಿಕ್ಷಕರು ಬಳಸಲಾಗದೆ ನಿಸ್ಸಾಹಯಕರಾಗುತ್ತಿದ್ದಾರೆ. ಪಾದುವ ಹೈಸ್ಕೂಲ್ ಮೌಲ್ಯಯುತವಾದ ಸಮಾಜವನ್ನು ನಿರ್ಮಿಸಲು ಸಾಗಿದ ಹಾದಿ ಶ್ಲಾಘನೀಯ’ ಎಂದು ತಿಳಿಸಿದರು.

ಕರ್ನಾಟಕ ಪ್ರೌಢ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕಿ ಫಿಲೊಮಿನಾ ಲೊಬೋರವರು ಪಾದುವ ಹೈಸ್ಕೂಲಿನ ಶಿಕ್ಷಕರು ಮಕ್ಕಳ ಮೇಲೆ ತೋರುವ ಕಾಳಜಿಯನ್ನು ವಿವರಿಸಿದರು.

ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಡೆನಿಸ್ ಲೋಬೊರವರು ಸ್ವಾಗತಿಸಿ ಗಣ್ಯ ಸಾಧನೆಯನ್ನು ಗೈದ ಸಾಧಕ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಕ್ಕಾಗಿ ಪರಿಚಯಿಸಿದರು.

ದಿವಂಗತ ಶಿಕ್ಷಕರಿಗೆ ಅವಿತ್ ಬಾರ್ಬೊಜಾರವರು ಶೃದ್ಧಾಂಜಲಿ ಸಲ್ಲಿಸಿದರು. ಶಾಲಾ ಮುಖ್ಯಸ್ಥರಾಗಿರುವ ಫ್ರಾನ್ಸಿಸ್ ಡಿ ಕೂನ್ಹಾರವರು ಶಿಕ್ಷಕಗಣವನ್ನು ಪರಿಚಯಿಸಿ ಸಂವಾದವನ್ನು ನಡೆಸಿಕೊಟ್ಟರು. ಈ ಶಿಕ್ಷಕರನ್ನು ಶಾಲಾ ಸಂಚಾಲಕರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.

ಒಲಿವಿಯಾ ಫೆರ್ನಾಂಡಿಸ್ ಕಾರ್ಯಕ್ರಮ ನಿರ್ವಹಿಸಿದರು. ಹೆರಾಲ್ಡ್ ಮೊಂತೇರೊ ವಂದಿಸಿದರು.


Spread the love