ಪಿಎಫ್ಐ ಪರ ಪ್ರಚಾರ: ಉಪ್ಪಿನಗಂಡಿಯ ವ್ಯಕ್ತಿಯ ಬಂಧನ
ಮಂಗಳೂರು: ನಿಷೇಧಿತ ಪಿಎಫ್ಐ (Popular Front of India) ಸಂಘಟನೆಯ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ನಡೆಸಿದ ಆರೋಪದ ಮೇರೆಗೆ ಉಪ್ಪಿನಗಂಡಿಯ ವ್ಯಕ್ತಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ದಿನಾಂಕ 09-10-2025 ರಂದು, ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಸೈಯ್ಯದ್ ಇಬ್ರಾಹಿಂ ತಂಙಳ್ (55), ವಾಸ: ರಾಮಕುಂಜ ಗ್ರಾಮ, ಉಪ್ಪಿನಗಂಡಿ, ದಕ್ಷಿಣ ಕನ್ನಡ ಜಿಲ್ಲೆ ಇವರ ವಿರುದ್ಧ UAPA ಕಾಯ್ದೆಯ ಸೆಕ್ಷನ್ 10 (a), (i), 13, 18 ಅಡಿ ಪ್ರಕರಣ (ಅ.ಕ್ರ. 113/2025) ದಾಖಲಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ವಾಟ್ಸಾಪ್ ಸಾಮಾಜಿಕ ಜಾಲತಾಣದ ಮೂಲಕ ಕೇಂದ್ರ ಸರ್ಕಾರದಿಂದ ನಿಷೇಧಿತ ಪಿಎಫ್ಐ ಸಂಘಟನೆಯ ಪರವಾಗಿ ಪೋಸ್ಟ್ಗಳನ್ನು ಹಂಚಿಕೊಂಡು, ಆ ಸಂಘಟನೆಯ ಕಾರ್ಯಚಟುವಟಿಕೆಗಳ ಬಗ್ಗೆ ಪ್ರಚಾರ ಮಾಡಿದ್ದಾನೆಂದು ತಿಳಿದುಬಂದಿದೆ. ಈ ಮೂಲಕ ಆತ ಸಮಾಜದಲ್ಲಿ ಆತಂಕ ಉಂಟು ಮಾಡುವ ಉದ್ದೇಶದಿಂದ ಅಪರಾಧಿಕ ಬಲ ಪ್ರದರ್ಶನ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ಉತ್ತರ ಠಾಣೆಯ ಪಿಎಸ್ಐ ಅವರು ಸಲ್ಲಿಸಿದ ದೂರು ಆಧರಿಸಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ.
ಅದೇ ದಿನ, ಅಂದರೆ 09 ಅಕ್ಟೋಬರ್ 2025ರಂದು ಮಂಗಳೂರು ನಗರದ ಉರ್ವ ಸ್ಟೋರ್ ಪ್ರದೇಶದಿಂದ ಆರೋಪಿ ಸೈಯ್ಯದ್ ಇಬ್ರಾಹಿಂ ತಂಙಳ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆತನ ವಶದಲ್ಲಿದ್ದ ಮೊಬೈಲ್ ಫೋನ್ ಅನ್ನು ಪೊಲೀಸರು ಅಮಾನತ್ತು ಪಡಿಸಿಕೊಂಡು, ತನಿಖೆಗೆ ಒಳಪಡಿಸಿದ್ದಾರೆ.
ಅನಂತರ 10 ಅಕ್ಟೋಬರ್ 2025ರಂದು ಆರೋಪಿಯನ್ನು ಮಾನ್ಯ 49ನೇ ಹೆಚ್ಚುವರಿ ಸಿವಿಲ್ ಹಾಗೂ ಸತ್ರ ನ್ಯಾಯಾಲಯ (CCH-50) ಮತ್ತು ಎನ್ಐಎ ಪ್ರಕರಣಗಳ ವಿಶೇಷ ನ್ಯಾಯಾಲಯ, ಬೆಂಗಳೂರು ಇಲ್ಲಿಗೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಯನ್ನು ಅಕ್ಟೋಬರ್ 24, 2025ರವರೆಗೆ ನ್ಯಾಯಾಂಗ ವಶಕ್ಕೆ ನೀಡಿದೆ.