ಪುಂಜಾಲಕಟ್ಟೆ: ಮದ್ಯದ ಅಮಲಿನಲ್ಲಿ ಚಿಕ್ಕಪ್ಪನ ಕುತ್ತಿಗೆಗೆ ಬಿಯರ್ ಬಾಟಲಿಯಿಂದ ಇರಿದು ಕೊಂದ ಪಾಪಿ ಸೋದರಳಿಯ!

Spread the love

ಪುಂಜಾಲಕಟ್ಟೆ: ಮದ್ಯದ ಅಮಲಿನಲ್ಲಿ ಚಿಕ್ಕಪ್ಪನ ಕುತ್ತಿಗೆಗೆ ಬಿಯರ್ ಬಾಟಲಿಯಿಂದ ಇರಿದು ಕೊಂದ ಪಾಪಿ ಸೋದರಳಿಯ!

ಮಂಗಳೂರು: ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಕಾಡಬೆಟ್ಟು ಎಂಬಲ್ಲಿ ರವಿವಾರ ರಾತ್ರಿ ಅತ್ಯಂತ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ಮನೆಯಲ್ಲಿ ದೈವಿಕ ಕಾರ್ಯಕ್ರಮ ನಡೆಯುತ್ತಿದ್ದಾಗಲೇ, ಮದ್ಯದ ಅಮಲಿನಲ್ಲಿ ಗಲಾಟೆ ಮಾಡಬೇಡಿ ಎಂದಿದ್ದಕ್ಕೆ ಯುವಕನೋರ್ವ ತನ್ನ ಸ್ವಂತ ಚಿಕ್ಕಪ್ಪನ ಕುತ್ತಿಗೆಗೇ ಬಿಯರ್ ಬಾಟಲಿಯಿಂದ ಇರಿದು ಕೊಲೆಗೈದಿದ್ದಾನೆ.

ಇಲ್ಲಿನ ನಿವಾಸಿ ಮಧುಸೂಧನ ( 38) ಅವರು ಮೃತಪಟ್ಟವರಾಗಿದ್ದು, ಅವರ ಅಣ್ಣ ಕೇಶವ ಪೂಜಾರಿ ಅವರ ಪುತ್ರ ರಾಹುಲ್ (23) ಕೊಲೆಗೈದವನಾಗಿದ್ದಾನೆ.

ಕಾಡಬೆಟ್ಟು ನಿವಾಸಿ ಕೇಶವ ಪೂಜಾರಿ ಅವರ ಮನೆಯಲ್ಲಿ ರವಿವಾರ ರಾತ್ರಿ ದೈವಕ್ಕೆ ‘ತಂಬಿಲ’ ಸೇವೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕೇಶವ ಪೂಜಾರಿ ಅವರ ಪುತ್ರ ರಾಹುಲ್ (23 ವರ್ಷ) ಮತ್ತು ಆತನ ಸ್ನೇಹಿತರು ಮನೆಯಿಂದ ಹೊರಗಡೆ ಮದ್ಯಸೇವನೆ ಮಾಡಿ ಜೋರಾಗಿ ಗದ್ದಲ ಎಬ್ಬಿಸುತ್ತಿದ್ದರು. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿರುವುದರಿಂದ ಹೊರಗೆ ಗಲಾಟೆ ಮಾಡದಂತೆ ರಾಹುಲ್‌ನ ಚಿಕ್ಕಪ್ಪ, ಇಲೆಕ್ಟ್ರಿಷಿಯನ್ ಆಗಿದ್ದ ಮಧುಸೂಧನ (38 ವರ್ಷ) ಅವರು ಆಕ್ಷೇಪ ವ್ಯಕ್ತಪಡಿಸಿ ಬುದ್ಧಿವಾದ ಹೇಳಿದ್ದಾರೆ.

ಚಿಕ್ಕಪ್ಪ ತನಗೆ ಬುದ್ಧಿವಾದ ಹೇಳಿದ್ದರಿಂದ ತೀವ್ರ ಕೋಪಗೊಂಡ ರಾಹುಲ್, ತಕ್ಷಣವೇ ಕೈಯಲ್ಲಿದ್ದ ಬಿಯರ್ ಬಾಟಲಿಯಿಂದ ಮಧುಸೂಧನ ಅವರ ಕುತ್ತಿಗೆಯ ಭಾಗಕ್ಕೆ ಬಲವಾಗಿ ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ. ಬಿಯರ್ ಬಾಟಲಿ ಚುಚ್ಚಿದ ರಭಸಕ್ಕೆ ತೀವ್ರ ರಕ್ತಸ್ರಾವ ಉಂಟಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಮಧುಸೂಧನ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಮೃತ ಮಧುಸೂಧನ ಅವರು ಅವಿವಾಹಿತರಾಗಿದ್ದು, ಇಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಇನ್ನು ಕೊಲೆಗಡುಕ ಸೋದರಳಿಯ ರಾಹುಲ್ ಪೆಟ್ರೋಲ್ ಬಂಕ್‌ ಉದ್ಯೋಗಿಯಾಗಿದ್ದ ಎನ್ನಲಾಗಿದೆ. ಮೃತದೇಹವನ್ನು ಸದ್ಯ ಮರಣೋತ್ತರ ಪರೀಕ್ಷೆಗಾಗಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಘಟನಾ ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ಆರೋಪಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.


Spread the love
Subscribe
Notify of

0 Comments