ಪೊಲೀಸ್ ಇಲಾಖೆಯನ್ನು ಮುಂದಿಟ್ಟು ಹಿಂದೂ ಹಬ್ಬಗಳ ಆಚರಣೆಗೆ ಅಡ್ಡಿ: ಸಂಸದ ಬ್ರಿಜೇಶ್ ಚೌಟ
ನವದೆಹಲಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಪೊಲೀಸ್ ಇಲಾಖೆಯ ಮೂಲಕ ಹಬ್ಬಗಳ ಆಚರಣೆಗೆ ಮನಸೋ-ಇಚ್ಛೆ ನಿಯಮಗಳನ್ನು ಹೇರಿ ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸುವ ಹುನ್ನಾರ ಮಾಡುತ್ತಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಆರೋಪಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಸೇರಿದಂತೆ ಹಲವು ಹಬ್ಬದ ಆಚರಣೆ ಸಂದರ್ಭ ಧ್ವನಿವರ್ಧಕ ಬಳಸುವುದಕ್ಕೆ ಪೊಲೀಸರು ಅವಕಾಶ ನೀಡದೆ ಷರತ್ತುಗಳನ್ನು ವಿಧಿಸಿ ತೊಂದರೆ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದರು, ತುಳುನಾಡು ದೈವಾರಾಧನೆ, ಧಾರ್ಮಿಕ ಆಚರಣೆಗಳು, ಸಾಂಸ್ಕೃತಿಕ ಮುಂತಾದ ಶ್ರೀಮಂತ ಆಚರಣೆಗೆ ಹೆಸರುವಾಸಿಯಾಗಿದೆ. ಕೋಲ, ನೇಮ, ಯಕ್ಷಗಾನ, ಬ್ರಹ್ಮಕಲಶದಂಥ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತವೆ. ಆದರೆ, ಪೊಲೀಸರು ಇತ್ತೀಚೆಗೆ ಹಲವೆಡೆ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಧ್ವನಿವರ್ಧಕ ಬಳಕೆ ಮಾಡಿರುವುದಕ್ಕೆ ಆಯೋಜಕರು ಹಾಗೂ ಸೌಂಡ್ ಸಿಸ್ಟಮ್‌ನವರ ಮೇಲೆ ಪ್ರಕರಣ ದಾಖಲಿಸಿರುವುದು ನಿಜಕ್ಕೂ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಬ್ಬ-ಹರಿದಿನಗಳನ್ನು ಸಂತೋಷ, ಭಕ್ತಿ-ಭಾವದಿಂದ ಆಚರಿಸುತ್ತಿರಬೇಕಾದರೆ, ಪೊಲೀಸರಿಗೆ ಈ ರೀತಿ ಏಕಾಏಕಿ ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡುವ ರೀತಿಯ ನಿಯಮಗಳನ್ನು ರೂಪಿಸುವುದಕ್ಕೆ ನಿರ್ದೇಶನಗಳನ್ನು ಕೊಟ್ಟವರು ಯಾರು? ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಧ್ವನಿವರ್ಧಕ ಬಳಕೆಗೆ ಕೆಲವೊಂದು ಷರತ್ತುಗಳು ಇದ್ದರೂ ಹಬ್ಬಗಳ ಆಚರಣೆಗೆ ಪೊಲೀಸರು ಯಾವುದೇ ಅಡ್ಡಿ ಮಾಡುತ್ತಿರಲಿಲ್ಲ. ಹಾಗಾದರೆ, ಸಿದ್ದರಾಮಯ್ಯ ಸರ್ಕಾರವೇ ಹಿಂದೂಗಳ ಧಾರ್ಮಿಕ ಆಚರಣೆಗೆ ಪೊಲೀಸರ ಮೂಲಕ ಈ ರೀತಿಯ ನಿಯಮಗಳನ್ನು ತಂದು ಜನರಿಗೆ ತೊಂದರೆ ಮಾಡುತ್ತಿದೆಯೇ ಎನ್ನುವ ಅನುಮಾನ ಮೂಡುತ್ತದೆ ಎಂದು ಆರೋಪಿಸಿದ್ದಾರೆ.
ಪೊಲೀಸರು ಈಗಾಗಲೇ ಕೆಲವೆಡೆ ಧ್ವನಿವರ್ಧಕ ಮಾಲೀಕರ ಮೇಲೆ ಪ್ರಕರಣ ದಾಖಲಿಸುವುದು, ಅವರ ಸೌಂಡ್ ಸಿಸ್ಟಮ್ ವಶಪಡಿಸಿಕೊಂಡಿರುವ ಹಿನ್ನಲೆಯಲ್ಲಿ ಅವರೆಲ್ಲ ರೋಸಿ ಹೋಗಿದ್ದಾರೆ. ಅಲ್ಲದೆ, ಇನ್ನುಮುಂದೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಧ್ವನಿವರ್ಧಕ ಬಳಸುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದ ಈ ಉದ್ಯಮ ನಂಬಿಕೊಂಡಿರುವ ಜನರಿಗೂ ಆರ್ಥಿಕವಾಗಿ ಬಹಳಷ್ಟು ತೊಂದರೆಯಾಗುತ್ತದೆ. ಪರಿಸ್ಥಿತಿ ಹೀಗೆ ಮುಂದುವರಿಗೆ ಇನ್ನು ಚೌತಿ, ಹುಲಿವೇಷ, ನವರಾತ್ರಿಯಂಥ ಹಬ್ಬದ ಆಚರಣೆಗೂ ಸಾಕಷ್ಟು ತೊಂದರೆಯಾಗಲಿದೆ. ಹೀಗಿರುವಾಗ, ಸರ್ಕಾರವು ಕೂಡಲೇ ಮಧ್ಯಪ್ರವೇಶ ಮಾಡಿ ಜನರಿಗೆ ಯಾವುದೇ ಸಮಸ್ಯೆ ಆಗದ ಹಬ್ಬದ ಕಾರ್ಯಕ್ರಮಗಳನ್ನು ಆಚರಿಸುವಂತೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಗೃಹ ಸಚಿವ ಪರಮೇಶ್ವರ್ ಅವರು ಈ ಹಿಂದೆ ಜಿಲ್ಲೆಗೆ ಬಂದಾಗಲೂ ಈ ವಿಚಾರದ ಬಗ್ಗೆ, ಇಲ್ಲಿನ ಆಚರಣೆಗಳ ಬಗ್ಗೆ ಮನವರಿಕೆ ಮಾಡಿ ಶಾಸಕರೊಡಗೂಡಿ ಈ ಬಗ್ಗೆ ಚರ್ಚೆ ನಡೆಸಿದ್ದೆವು. ಇಂದು ನಮ್ಮ ಭಾಗದ ಶಾಸಕರಾದ ಭರತ್ ವೈ. ಶೆಟ್ಟಿ, ವೇದವ್ಯಾಸ್ ಕಾಮತ್, ಹರೀಶ್ ಪೂಂಜಾ ಅವರು ಕೂಡ ಈ ಬಗ್ಗೆ ಸದನದಲ್ಲಿಯೂ ಧ್ವನಿಯೆತ್ತಿದ್ದಾರೆ. ಹಿಂದೂ ಸಮಾಜದ ಧಾರ್ಮಿಕ ಭಾವನೆಗಳನ್ನು ಗೌರವಿಸಿ, ಈ ಮೊದಲಿನಂತೆ ನಿರ್ಬಂಧಗಳಿಲ್ಲದೆ ಹಬ್ಬಗಳನ್ನು ಆಚರಿಸಲು ಅವಕಾಶ ನೀಡಬೇಕು. ಅದುಬಿಟ್ಟು, ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಪ್ರಯತ್ನ ಮುಂದುವರಿಸಿದರೆ ಅದರಿಂದ ಉಂಟಾಗುವ ಪರಿಣಾಮಗಳಿಗೆ ಸಿದ್ದರಾಮಯ್ಯ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಕ್ಯಾ. ಚೌಟ ಎಚ್ಚರಿಸಿದ್ದಾರೆ.