ಪ್ರಧಾನಮಂತ್ರಿ ಉಡುಪಿ ಜಿಲ್ಲಾ ಭೇಟಿ ಸಂದರ್ಭದಲ್ಲಿ ಶಿಷ್ಠಾಚಾರ ಪಾಲಿಸಿ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ
ಉಡುಪಿ: ಪ್ರಧಾನಮಂತ್ರಿಯವರು ನವೆಂಬರ್ 28 ರಂದು ಉಡುಪಿ ಜಿಲ್ಲೆಗೆ ಭೇಟಿ ನೀಡುವ ಸಂದರ್ಭದಲ್ಲಿ ಸರಕಾರದ ನಿಯಮಾನುಸಾರ ಶಿಷ್ಠಾಚಾರ ಪಾಲಿಸುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾರತದ ಪ್ರಧಾನಮಂತ್ರಿಯವರು ಉಡುಪಿ ಜಿಲ್ಲಾ ಭೇಟಿ ಸಂದರ್ಭದಲ್ಲಿ ಜಿಲ್ಲಾಡಳಿತದ ವತಿಯಿಂದ ಸೂಕ್ತ ಶಿಷ್ಠಾಚಾರವನ್ನು ಪಾಲಿಸುವ ಸಲುವಾಗಿ ಆಯೋಜಿಸಲಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪ್ರಧಾನಮಂತ್ರಿಯವರು ನವೆಂಬರ್ 28 ರಂದು ಆದಿಉಡುಪಿಯ ಹೆಲಿಪ್ಯಾಡ್ನಿಂದ ಕರಾವಳಿ ಬೈಪಾಸ್, ಸಿಟಿ ಬಸ್ ನಿಲ್ದಾಣ, ಕಲ್ಸಂಕ ಮಾರ್ಗವಾಗಿ ಶ್ರೀಕೃಷ್ಠನ ಮಠಕ್ಕೆ ಭೇಟಿ ನೀಡಿ, ಲಕ್ಷ ಕಂಠ ಗೀತಾ ಕಾರ್ಯಕ್ರಮ-ಗೀತೋತ್ಸವದಲ್ಲಿ ಭಾಗವಹಿಸಲಿದ್ದು, ಭೇಟಿ ಸಂದರ್ಭದಲ್ಲಿ ಭದ್ರತೆಗೆ ಅಗತ್ಯವಿರುವ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಭದ್ರತೆಗೆ ಅನುಕೂಲವಾಗುವಂತೆ ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ, ರಸ್ತೆಯಲ್ಲಿ ಹಾಗೂ ಮತ್ತಿತರ ಕಡೆಗಳಲ್ಲಿ ಸಿ.ಸಿ.ಟಿವಿ ಅಳವಡಿಸಬೇಕು. ಅನಧಿಕೃತ ಬ್ಯಾನರ್, ಬಂಟಿಂಗ್ಸ್ ಗಳನ್ನು ಈ ಕೂಡಲೇ ತೆರವುಗೊಳಿಸಬೇಕು ಎಂದ ಅವರು, ಕಾರ್ಯಕ್ರಮಕ್ಕೆ ಕೇಂದ್ರ ಹಾಗೂ ರಾಜ್ಯ ಸಚಿವರುಗಳು ಆಗಮಿಸುವ ನಿರೀಕ್ಷೆಯಿದ್ದು, ಅವರುಗಳ ಸುರಕ್ಷತೆಗೂ ಸಹ ಒತ್ತು ನೀಡಬೇಕು ಎಂದರು.
ಪ್ರಧಾನಮಂತ್ರಿಗಳು ಹೆಲಿಪ್ಯಾಡ್ನಿಂದ ಕೃಷ್ಣ ಮಠಕ್ಕೆ ಚಲಿಸುವ ರಸ್ತೆಯ ಎರಡೂ ಬದಿಯಲ್ಲಿ ಬ್ಯಾರಿಕೇಡ್ ಅಳವಡಿಸಿ, ಪೊಲೀಸರನ್ನು ನಿಯೋಜನೆಗೊಳಿಸಬೇಕು. ಕೋಲುಗಳನ್ನೊಳಗೊಂಡAತೆ ಬಾವುಟಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ ಎಂದರು.
ಕಾರ್ಯಕ್ರಮ ನಡೆಯುವ ಸುತ್ತಮುತ್ತಲಿನ ಸ್ಥಳಗಳಲ್ಲಿ ಹಾಗೂ ರಸ್ತೆಗಳಲ್ಲಿನ ಅಪಾಯಕಾರಿ ಮರಗಳನ್ನು, ರೆಂಬೆ-ಕೊAಬೆಗಳನ್ನು ತೆರವುಗೊಳಿಸಬೇಕು. ಕಾರ್ಯಕ್ರಮ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರು ಯಾವುದೇ ಬ್ಯಾಗ್, ನೀರಿನ ಬಾಟಲ್, ಧ್ವಜ ಸೇರಿದಂತೆ ಯಾವುದೇ ವಸ್ತುಗಳನ್ನು ತರುವುದನ್ನು ನಿಷೇಧಿಸಲಾಗಿದ್ದು, ಈ ಕುರಿತು ಜನರಿಗೆ ಮೊದಲೇ ಮಾಹಿತಿ ನೀಡಿರಬೇಕು ಎಂದರು.
ಪ್ರಧಾನಿ ಭೇಟಿ ಸಂದರ್ಭದಲ್ಲಿ ನಿರಂತರ ವಿದ್ಯುಚ್ಛಕ್ತಿ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ರಸ್ತೆ ಕಾಮಗಾರಿ ಸೇರಿದಂತೆ ಕಾಮಗಾರಿಗಳನ್ನು ಕೈಗೊಳ್ಳಲು ಶೇಖರಿಸಿರುವ ಜಲ್ಲಿ ಸೇರಿದಂತೆ ಮತ್ತಿತರ ವಸ್ತುಗಳನ್ನು ತೆರವುಗೊಳಿಸುವುದರೊಂದಿಗೆ ನಗರವನ್ನು ಶುಚಿತ್ವವಾಗಿರುವಂತೆ ಕ್ರಮ ವಹಿಸಬೇಕು ಎಂದು ಪೌರಾಯುಕ್ತರು ಹಾಗೂ ಮೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸುವ ಜನರ ವಾಹನಗಳ ಸಂಚಾರ ಮಾರ್ಗ, ಅವುಗಳ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಮತ್ತಿತರ ಮೂಲ ಸೌಕರ್ಯಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು ಎಂದ ಅವರು, ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಅಗ್ನಿಶಾಮಕ ವಾಹನವನ್ನು ನಿಯೋಜಿಸಬೇಕು ಎಂದರು.
ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ರಸ್ತೆ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಆದ್ಯತೆಯ ಮೇಲೆ ಕೈಗೊಳ್ಳಬೇಕು. ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಜೊತೆಗೆ ಪ್ರಯಾಣಿಕರಿಗೆ ಬದಲಿ ಮಾರ್ಗ ಅನುಸರಿಸುವ ಬಗ್ಗೆ ಹಾಗೂ ಜನ ದಟ್ಟಣೆ ನಿಯಂತ್ರಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪ್ರಧಾನಿ ಭೇಟಿ ಸಂದರ್ಭದಲ್ಲಿ ಜಿಲ್ಲಾಡಳಿತದೊಂದಿಗೆ ಇತರೆ ಇಲಾಖೆಗಳು ಸಮನ್ವಯದಿಂದ ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡಬೇಕು ಎಂದ ಅವರು, ತುಳುನಾಡು ಜಾನಪದ ಕಲೆ, ಹುಲಿ ವೇಷ ಕುಣಿತ, ಯಕ್ಷಗಾನ, ಡೊಳ್ಳು ಕುಣಿತ ಸೇರಿದಂತೆ ಸಂಪ್ರದಾಯ ವಾದ್ಯಗಳ ಪ್ರದರ್ಶನ ನಡೆಯಲಿದೆ ಎಂದರು.
ಸಭೆಯಲ್ಲಿ ಶಾಸಕರಾದ ಯಶ್ಪಾಲ್ ಎ ಸುವರ್ಣ ಮಾತನಾಡಿ, ಜಿಲ್ಲೆಗೆ ಪ್ರಧಾನಿ ಭೇಟಿ ನೀಡಲಿರುವ ಹಿನ್ನೆಲೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಮತ್ತಷ್ಟು ಬಲ ದೊರಕಲಿದೆ ಎಂದ ಅವರು, ನಗರದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸದರಿ ದಿನದಂದು ಮಣಿಪಾಲ, ಮಲ್ಪೆ ಹಾಗೂ ಉಡುಪಿ ಟೌನ್ ವ್ಯಾಪ್ತಿಯ ಮಕ್ಕಳಿಗೆ ರಜೆ ಘೋಷಿಸುವಂತೆ ಸಭೆಯ ಗಮನಕ್ಕೆ ತಂದ ಅವರು, ಗಣ್ಯ ವ್ಯಕ್ತಿಗಳಿಗೆ, ಲಕ್ಷ ಕಂಠ ಗೀತಾ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಪಾಸ್ ವಿತರಣೆ ಮಾಡಬೇಕು ಎಂದರು.
ಸಭೆಯಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ, ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.












