ಪ್ರಸಾದ್ ಕಾಂಚನ್ ತಾಕತ್ತಿದ್ದರೆ ಶಾಸಕರ ಮನೆಗೆ ಮುತ್ತಿಗೆ ಹಾಕಲಿ : ಹಿಂದೂ ಯುವ ಸೇನೆ
ಉಡುಪಿ: ಕಾಂಗ್ರೆಸ್ ಪಕ್ಷದಲ್ಲಿ ಬಾಲಿಶ ಹೇಳಿಕೆಗಳಿಂದಲೇ ಕುಖ್ಯಾತನಾದ ಪ್ರಸಾದ್ ಕಾಂಚನ್ ಶಾಸಕರನ್ನು ಟೀಕಿಸುವ ಭರದಲ್ಲಿ ಶಾಸಕರ ಮನೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದು, ಅವನಿಗೆ ತಾಕತ್ ಇದ್ದರೆ ಶಾಸಕರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಲಿ ಅದಕ್ಕೆ ತಕ್ಕ ಉತ್ತರ ನೀಡಲು ಜಿಲ್ಲೆಯ ಹಿಂದೂ ಕಾರ್ಯಕರ್ತರು ಸಿದ್ಧ ಎಂದು ಹಿಂದೂ ಯುವ ಸೇನೆ ಉಡುಪಿ ಜಿಲ್ಲಾ ಘಟಕ ಎಚ್ಚರಿಕೆ ನೀಡಿದೆ.
ಸದಾ ಹಿಂದೂ ಧಾರ್ಮಿಕ ಭಾವನೆಗಳನ್ನು ಅವಹೇಳನ ಮಾಡುತ್ತಾ ಬಂದಿರುವ ಪ್ರಸಾದ್ ಕಾಂಚನ್ ಕರಾವಳಿ ಜಿಲ್ಲೆಯಲ್ಲಿ ಹಿಂದುತ್ವದ ವಿಚಾರದಲ್ಲಿ ಸದಾ ಮುಂಚೂಣಿಯಲ್ಲಿರುವ ಉಡುಪಿ ಶಾಸಕರನ್ನು ಏಕವಚನದಲ್ಲಿ ಟೀಕಿಸುತ್ತಾ ಬಿಟ್ಟಿ ಪ್ರಚಾರ ಬಯಸುವ ಚಟವನ್ನು ತಕ್ಷಣ ನಿಲ್ಲಿಸಲಿ.
ತುಳುನಾಡಿನ ದೈವಾರಾಧನೆಯ ಧಾರ್ಮಿಕ ಆಚರಣೆಯ ಭಾಗವಾದ ಕೋಳಿ ಅಂಕಕ್ಕೆ ಕಾನೂನಾತ್ಮಕ ಅವಕಾಶ ನೀಡುವಂತೆ ಸದನದಲ್ಲಿ ಶಾಸಕರು ಪ್ರಶ್ನಿಸಿದಾಗ ಜಿಲ್ಲೆಯ ಜನತೆಗೆ ಅವಮಾನವಾಗಿದೆ ಎಂದು ಭಾಷಣ ಮಾಡುವ ಪ್ರಸಾದ್ ಕಾಂಚನ್ ಗೆ ಮೊನ್ನೆ ಹಿಂದೂಗಳ ಪೂಜ್ಯ ಗೋಮಾತೆಯ ರುಂಡವನ್ನು ರಸ್ತೆಯಲ್ಲಿ ಎಸೆದು ಹೋಗಿ ಹಿಂದೂಗಳ ಭಾವನೆಗೆ ಧಕ್ಕೆ ತಂದಾಗ ಮಾತ್ರ ಯಾವುದೇ ಅವಮಾನವಾಗಿಲ್ಲ.
ಉಡುಪಿ ಶಾಸಕರು ಹಿಂದೂತ್ವ, ರಾಷ್ಟ್ರೀಯತೆ, ಅಭಿವೃದ್ಧಿ ವಿಚಾರದಲ್ಲಿ ಎಂದಿಗೂ ರಾಜೀ ಮಾಡಿಲ್ಲ. ಮುಸ್ಲಿಂ ಗುತ್ತಿಗೆದಾರರಿಗೆ ಮೀಸಲಾತಿ ಮಸೂದೆ ಬಗ್ಗೆ ಸದನದಲ್ಲಿ ವಿರೋಧ ಪಕ್ಷದ ಶಾಸಕನಾಗಿ ವಿರೋಧ ಮಾಡಿದಕ್ಕೆ ಸದನದಿಂದ ಅಮಾನತುಗೊಂಡರೂ ತಮ್ಮ ಸಿದ್ಧಾಂತದ ಬಗ್ಗೆ ಬದ್ಧತೆ ಮೆರೆದಿದ್ದಾರೆ.
ಮಂಗಳೂರು, ಸುರತ್ಕಲ್ ನಲ್ಲಿ ಸುತ್ತಾಡಿಕೊಂಡಿದ್ದ ಈತ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಲಾಟರಿ ಕ್ಯಾಂಡಿಡೇಟ್ ಆಗಿ ಉಡುಪಿಗೆ ಬಂದು, ಹಿಂದುತ್ವದ ಭದ್ರಕೋಟೆಯಲ್ಲಿ ಹೀನಾಯವಾಗಿ ಸೋತು ಸುಣ್ಣವಾದ ಈತನ ಎಡಬಿಡಂಗಿ ಮಾತುಗಳು ಇದೀಗ ಉಡುಪಿ ಕಾಂಗ್ರೆಸ್ ನಾಯಕರಿಗೆ ಅಸಹನೀಯವಾಗಿದೆ.
ಉಡುಪಿ ಶಾಸಕರು ಕೇವಲ ಓರ್ವ ಶಾಸಕ ಮಾತ್ರ ಅಲ್ಲ ಹಿಂದೂತ್ವದ ರಕ್ಷಣೆಗೆ ಸಂಘಟನೆಯಲ್ಲಿ ಗುರುತಿಸಿಕೊಂಡ ಪ್ರತಿಯೊಬ್ಬ ಹಿಂದೂ ಕಾರ್ಯಕರ್ತನ ಪ್ರತಿನಿಧಿಯಾಗಿ ವಿಧಾನಸಭೆಯನ್ನು ಪ್ರವೇಶ ಮಾಡಿದ್ದು, ಅವರ ಕಾರ್ಯಕ್ಷಮತೆ, ಬದ್ಧತೆಯನ್ನು ಗುರುತಿಸಿಯೇ ಉಡುಪಿಯ ಜನತೆ ತಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಿದ್ದಾರೆ. ಅವರ ಯೋಗ್ಯತೆಯನ್ನು ಅರಿಯದೇ ಮೊನ್ನೆ ಮೊನ್ನೆ ಉಡುಪಿಗೆ ಬಂದು ಬಂಟ್ವಾಳ ಮೂಲದ ಕಾಂಗ್ರೆಸ್ ನಾಯಕನ ಕೃಪೆಯಿಂದ ರಾಜಕೀಯ ಪ್ರವೇಶಿಸಿದ ಯೋಗ್ಯತೆ ಇಲ್ಲ.
ಸಾಮಾನ್ಯ ಹಿಂದೂ ಕಾರ್ಯಕರ್ತರಾಗಿ, ಸಹಕಾರಿ,.ಮೀನುಗಾರಿಕ, ಧಾರ್ಮಿಕ ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಗರಸಭಾ ಸದಸ್ಯರಾಗಿ ಓರ್ವ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಹಂತ ಹಂತವಾಗಿ ಪಕ್ಷ ಹಾಗೂ ಸಂಘ ಪರಿವಾರದ ಹಿರಿಯರ ಮಾರ್ಗದರ್ಶನದಿಂದ ಶಾಸಕರಾಗಿ ಆಯ್ಕೆಯಾಗಿ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಾ ಸದಾ ಕಾಲ ಜನರ ಜೊತೆ ಇರುವ ಉಡುಪಿ ಶಾಸಕರು ನಿನ್ನಂತಹ ಅವಿವೇಕಿ ವ್ಯಕ್ತಿಗಳ ಟೀಕೆಯನ್ನು ಎಂದಿಗೂ ಗಂಭೀರವಾಗಿ ಪರಿಗಣಿಸಿಲ್ಲ ಎಂಬುದನ್ನು ಮರೆಯಬೇಡ.
ಮುಂದಿನ ದಿನಗಳಲ್ಲಿ ಇಂತಹ ಮತಿಗೇಡಿ, ಹಿಂದೂ ಧರ್ಮದ ಭಾವನೆಗೆ ಧಕ್ಕೆ ತರುವ ಹೇಳಿಕೆ ನೀಡಿದಲ್ಲಿ ನಿನ್ನ ಮನೆಗೆ ಮುತ್ತಿಗೆ ಹಾಕುವ ಅವಕಾಶ ನೀಡಬೇಡ ಎಂದು ಹಿಂದೂ ಯುವ ಸೇನೆ ಉಡುಪಿ ಗೌರವಾಧ್ಯಕ್ಷ ಶೇಖರ್ ಶೆಟ್ಟಿ ಹಿರಿಯಡ್ಕ, ಜಿಲ್ಲಾಧ್ಯಕ್ಷ ಅಜಿತ್ ಕೊಡವೂರು, ಉಡುಪಿ ನಗರ ಅಧ್ಯಕ್ಷ ಸುನೀಲ್ ಪೂಜಾರಿ ನೇಜಾರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.