ಬಂಟ್ವಾಳ: ಅಕ್ರಮ ಗೋಹತ್ಯೆ ರಹಸ್ಯ ಭೇದಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು
ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಅಕ್ರಮ ಗೋಹತ್ಯೆ ಪ್ರಕರಣವೊಂದನ್ನು ಭೇದಿಸಿ, ಒಬ್ಬ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ನವೆಂಬರ್ 16, 2025 ರಂದು ಬಂಟ್ವಾಳ ತಾಲೂಕಿನ ಅರಳ ಗ್ರಾಮದ ನಿವಾಸಿ ಮೈಯದಿ (57) ಅವರು ತಮ್ಮ ಮನೆಯ ಆವರಣದಲ್ಲಿರುವ ಶೆಡ್ನಲ್ಲಿ ಜಾನುವಾರುಗಳನ್ನು ಕಟ್ಟಿ, ವಧೆ ಮಾಡಿ ಮಾಂಸ ತಯಾರಿಸುತ್ತಿದ್ದಾರೆ ಎಂಬ ನಿಖರ ಮಾಹಿತಿ ಪೊಲೀಸರಿಗೆ ಲಭಿಸಿತು. ಬಳಿಕ ಬಂಟ್ವಾಳ ಗ್ರಾಮಾಂತರ ಠಾಣೆಯ ಪಿಎಸ್ಐ ಮತ್ತು ಸಿಬ್ಬಂದಿ ಸ್ಥಳಕ್ಕೆ ದಾಳಿ ನಡೆಸಿದರು.
ದಾಳಿ ಸಮಯದಲ್ಲಿ ಶೆಡ್ನಲ್ಲಿ ಮೂವರು ವ್ಯಕ್ತಿಗಳು ದನವನ್ನು ವಧೆ ಮಾಡಿ ಮಾಂಸ ಮಾಡುತ್ತಿರುವುದು ಕಂಡುಬಂತು. ಇವರಲ್ಲಿ ಇಬ್ಬರು ಗಲಭೆಯಲ್ಲಿ ಪರಾರಿಯಾಗಿದ್ದು, ಒಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ವಿಚಾರಣೆ ವೇಳೆ ಬಂಧಿತ ವ್ಯಕ್ತಿ ಮೈಯದಿ (57) ಎಂಬುದು ದೃಢಪಟ್ಟಿದೆ.

ಪೊಲೀಸರು ಶೆಡ್ನಲ್ಲಿದ್ದ ಮೂರು ಹಸುಗಳು ಹಾಗೂ ಒಂದು ಕರುವನ್ನು ರಕ್ಷಿಸಿದ್ದು, ವಧೆ ಮಾಡಿದ ಸುಮಾರು 150 ಕೆಜಿ ದನದ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಕ್ರ 172/2022 ಅಡಿಯಲ್ಲಿ ಕರ್ನಾಟಕ ಜಾನುವಾರು ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆ 2020ರ ಕಲಂ 4, 5, 7, 12 ಜೊತೆಗೆ ಪ್ರಾಣಿ ಹಿಂಸೆ ನಿಷೇಧ ಕಾಯಿದೆ ಕಲಂ 11(1)(ಡಿ) ಹಾಗೂ ಬಿಎನ್ಎಸ್ ಕಾಯಿದೆ ಕಲಂ 303(2), 307 ಅನ್ವಯ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರಿದಿದೆ.
ಬಂಧಿತ ಆರೋಪಿ ಮೈಯದಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ. ಪರಾರಿಯಾದ ಇಬ್ಬರು ಆರೋಪಿಗಳ ಪತ್ತೆ ಕಾರ್ಯ ತೀವ್ರಗೊಳಿಸಲಾಗಿದೆ.
ಅದೇ ವೇಳೆ, ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೇ ಮನೆಯ ಶೆಡ್ನಲ್ಲೇ ಕಸಾಯಿಖಾನೆಯನ್ನು ನಿರ್ಮಿಸಿ, ಮನೆಯಿಂದಲೇ ವಿದ್ಯುತ್ ಸಂಪರ್ಕ ಪಡೆದು ಅನಧಿಕೃತವಾಗಿ ಜಾನುವಾರುಗಳ ವಧೆ ನಡೆಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ಆ ಮನೆಯನ್ನು ಹಾಗೂ ಶೆಡ್ ಪರಿಸರವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಸಂಬಂಧಿಸಿದ ವರದಿಯನ್ನು ಮಂಗಳೂರು ಉಪವಿಭಾಗದ ಮಾನ್ಯ ಸಹಾಯಕ ಆಯುಕ್ತರು ಹಾಗೂ ಉಪವಿಭಾಗೀಯ ದಂಡಾಧಿಕಾರಿಗಳಿಗೆ ಮುಟ್ಟುಗೋಲು ಮಾಡುವುದಕ್ಕಾಗಿ ಸಲ್ಲಿಸಲಾಗಿದೆ.












