ಬಜ್ಪೆ – ಕಿನ್ನಿಗೋಳಿ ಪ.ಪಂ. ಚುನಾವಣೆ: ನಿಷೇಧಾಜ್ಞೆ ಜಾರಿ

Spread the love

ಬಜ್ಪೆ – ಕಿನ್ನಿಗೋಳಿ ಪ.ಪಂ. ಚುನಾವಣೆ: ನಿಷೇಧಾಜ್ಞೆ ಜಾರಿ

ಮಂಗಳೂರು: ಬಜ್ಪೆ ಮತ್ತು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಡಿ.21 ರಂದು ನಡೆಯಲಿರುವ ಚುನಾವಣೆಯ ಮತ ಎಣಿಕೆ ಡಿ. 24 ರಂದು ಮಂಗಳೂರು ತಾಲೂಕು ಆಡಳಿತ ಸೌಧ ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಕಟ್ಟಡದಲ್ಲಿ ನಡೆಯಲಿರುವುದರಿಂದ, ಮತ ಎಣಿಕೆ ಕಾರ್ಯವು ಸುಸೂತ್ರವಾಗಿ ನಡೆಯಲು ಹಾಗೂ ಮತ ಎಣಿಕೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಯ್ದುಕೊಂಡು ಶಾಂತಿ ಕಾಪಾಡುವ ಸಲುವಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಮತ ಎಣಿಕೆ ಕೇಂದ್ರದ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಆದೇಶಿಸಿದ್ದಾರೆ.

ಮತ ಎಣಿಕೆ ಸಂದರ್ಭದಲ್ಲಿ ಸಾರ್ವಜನಿಕರು 5 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರುವುದು ಅಥವಾ ತಿರುಗುವುದನ್ನು ಅಥವಾ ಮೆರವಣಿಗೆ, ಸಭೆ ಸಮಾರಂಭ, ವಿಜಯೋತ್ಸವ ಜರುಗಿಸುವುದನ್ನು ನಿಷೇಧಿಸಲಾಗಿದೆ. ಅಪಾಯವನ್ನು ಉಂಟು ಮಾಡಬಹುದಾದ ಯಾವುದೇ ಮಾರಕಾಸ್ತ್ರಗಳನ್ನು ಹಾಗೂ ಸ್ಪೋಟಕ ವಸ್ತುಗಳನ್ನು ಕೊಂಡೊಯ್ಯುವುದನ್ನು ಪ್ರತಿಬಂಧಿಸಲಾಗಿದೆ. ಚುನಾವಣೆಯ ಮತ ಎಣಿಕೆ ಫಲಿತಾಂಶದ ವಿಜಯೋತ್ಸವದ ಸಮಯದಲ್ಲಿ ಪಟಾಕಿ/ಸಿಡಿಮದ್ದು ಸಿಡಿಸುವುದನ್ನು ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ಧ್ವನಿವರ್ಧಕಗಳನ್ನು ಬಳಸಬಾರದು ಎಂದು ಆದೇಶಿಸಲಾಗಿದೆ.

ಮದ್ಯದಂಗಡಿ ಮುಚ್ಚಲು ಆದೇಶ: ಬಜ್ಪೆ ಮತ್ತು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯು ಸುಗಮವಾಗಿ, ಶಾಂತಿಯುತವಾಗಿ ನಡೆಯುವ ಸದುದ್ದೇಶದಿಂದ ಹಾಗೂ ಈ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ‘ಶುಷ್ಕ ದಿನ’ ಎಂದು ಘೋಷಿಸಿ ಮತ ಎಣಿಕೆ ನಡೆಯುವ ಕೇಂದ್ರದಿಂದ 100 ಮೀ. ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಿಧದ ಮದ್ಯದಂಗಡಿಗಳನ್ನು, ಮದ್ಯ ತಯಾರಿಕಾ ಘಟಕಗಳನ್ನು, ಶೇಂದಿ ಅಂಗಡಿಗಳನ್ನು ಮುಚ್ಚುವಂತೆ ಹಾಗೂ ಎಲ್ಲಾ ವಿಧದ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಆದೇಶಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments