ಬಜ್ಪೆ | ಪಟಾಕಿ ಅಂಗಡಿಗಳಿಂದ ಸುಲಿಗೆ: ಇಬ್ಬರ ವಿರುದ್ಧ ಪ್ರಕರಣ ದಾಖಲು

Spread the love

ಬಜ್ಪೆ | ಪಟಾಕಿ ಅಂಗಡಿಗಳಿಂದ ಸುಲಿಗೆ: ಇಬ್ಬರ ವಿರುದ್ಧ ಪ್ರಕರಣ ದಾಖಲು

ಮಂಗಳೂರು: ಪಟಾಕಿ ಅಂಗಡಿಗಳ ಮಾಲಕರಿಗೆ ಬೆದರಿಕೆ ಹಾಕಿ ಸುಲಿಗೆ ಮಾಡಿರುವ ಆರೋಪದಲ್ಲಿ ಇಬ್ಬರ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುರತ್ಕಲ್ ಮಂಗಳಪೇಟೆಯ ಫಾಝಿಲ್ ಕೊಲೆ ಆರೋಪಿ, ರೌಡಿ ಶೀಟರ್ ಪ್ರಶಾಂತ್ ಯಾನೆ ಪಚ್ಚು ಮತ್ತು ಅಶ್ವಿತ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.

ಆರೋಪಿಗಳು ಬಜ್ಪೆಯ ಪಟಾಕಿ ಮಾರಾಟ ಮಳಿಗೆಗಳಿಗೆ ತೆರಳಿ ಹಣ ಕೊಡುವುದಿಲ್ಲ, ಆದರೆ ಎಲ್ಲರೂ ಪಟಾಕಿ ಕೊಡಲೇಬೇಕು ಎಂದು ಬೆದರಿಸಿ ಸುಲಿಗೆ ಮಾಡಿದ್ದಾರೆ.

ಈ ಘಟನೆ ಅ.22ರಂದು ನಡೆದಿದ್ದು, ಪಟಾಕಿ ಅಂಗಡಿಗಳ ಮಾಲಕರು ಹೆದರಿ ಪೊಲೀಸ್ ದೂರು ನೀಡಲು ಹಿಂದೇಟು ಹಾಕಿದ್ದರು.

ಇತ್ತೀಚೆಗೆ ವಿಚಾರ ತಿಳಿದು ಪೊಲೀಸರು ರಕ್ಷಣೆ ನೀಡುವ ಭರವಸೆ ನೀಡಿದ ಬಳಿಕ ಪಟಾಕಿ ಅಂಗಡಿಯೊಂದರ ಮಾಲಕ ದಾಮೋದರ ಎಂಬವರು ಬಜ್ಪೆ ಪೊಲೀಸ್ ಠಾಣೆಯಲ್ಲಿ ಗುರುವಾರ ರಾತ್ರಿ ದೂರು ದಾಖಲಿಸಿದ್ದರು.

ಈ ದೂರನ್ನು ಆಧರಿಸಿ ಪ್ರಕರಣ ದಾಖಲಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ. ರೌಡಿ ಶೀಟರ್ ಪ್ರಶಾಂತ್ ಇತ್ತೀಚೆಗೆ ಕೊಲೆಯಾದ ರೌಡಿ ಶೀಟರ್ ಸುಹಾಸ್ ಶೆಟ್ಟಿಯ ಆಪ್ತ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ, ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳ ಜೊತೆಗೆ ತಿರುಗಾಡದಂತೆ ಈ ಮೊದಲೇ ಹೇಳಿದ್ದೆ. ರೌಡಿಗಳ ಜೊತೆಗಿದ್ದು ಅಪರಾಧದಲ್ಲಿ ಸಿಲುಕಬೇಡಿ ಎಂದೂ ಹೇಳಿದ್ದೆ. ನೀವು ನಮ್ಮ ಮಾತು ಕೇಳ್ತಾ ಇಲ್ಲ ಎನಿಸತ್ತೆ. ನಮ್ಮ ಮಾತು ಕೇಳಲ್ಲಾಂದ್ರೆ ನಾವು ಏನು ಮಾಡಬೇಕೆಂದು ಗೊತ್ತಿದೆ. ನಾವು ನಮ್ಮ ಕೆಲಸ ಮಾಡ್ತೀವಿ. ನಿಮ್ಮ ಇಷ್ಟದಂತೆ ಮಾಡ್ಕೊಂಡ್ರೆ ನಮ್ಗೆ ತೊಂದರೆ ಇಲ್ಲ. ಏನು ಬೇಕಾದರೂ ಮಾಡ್ಕೊಂಡು ಹೋಗಿ‌. ಪೊಲೀಸರು ತಮ್ಮ ಕೆಲಸ ಮಾಡುತ್ತಾರೆ ಎಂದು ವಾರ್ನಿಂಗ್ ಮಾಡಿದ್ದಾರೆ.


Spread the love