ಬಿಜೆಪಿಗರು ನನ್ನ ಮೇಲೆ ಮಾಡಿರುವ ಆರೋಪ ನಿರಾಧಾರ – ಬೊಮ್ಮರಬೆಟ್ಟು ಪಂಚಾಯತ್ ಅಧ್ಯಕ್ಷೆ ಮಾಲತಿ ಆಚಾರ್ಯ

Spread the love

ಬಿಜೆಪಿಗರು ನನ್ನ ಮೇಲೆ ಮಾಡಿರುವ ಆರೋಪ ನಿರಾಧಾರ – ಬೊಮ್ಮರಬೆಟ್ಟು ಪಂಚಾಯತ್ ಅಧ್ಯಕ್ಷೆ ಮಾಲತಿ ಆಚಾರ್ಯ

ಉಡುಪಿ: ನೂತನವಾಗಿ ಆಯ್ಕೆಯಾದ ಶಾಸಕ ಲಾಲಾಜಿ ಮೆಂಡನ್ ಅವರು 40ನೇ ಬೊಮ್ಮರಬೆಟ್ಟು ಗ್ರಾಮಪಂಚಾಯತಿನಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವಲ್ಲಿ ರಾಜಕೀಯ ಮಾಡುವುದಲ್ಲದೆ ಬಹುಮತದಿಂದ ಆಯ್ಕೆಯಾದ ಪಂಚಾಯತ್ ಅಧ್ಯಕ್ಷರನ್ನು ಪದಚ್ಯುತಗೊಳಿಸುವುದಕ್ಕಾಗಿ ಪಂಚಾಯತ್ ಸದಸ್ಯರಿಗೆ ಹಣದ ಆಮಿಷವೊಡ್ಡಿ ಅಪರೇಶನ್ ಕಮಲ ನಡೆಸಲು ಹುನ್ನಾರ ನಡೆಸಿದ್ದಾರೆ ಎಂದು ಪಂಚಾಯತಿನ ಅಧ್ಯಕ್ಷೆ ಬಿ ಮಾಲತಿ ಆಚಾರ್ಯ ಆರೋಪಿಸಿದರು.

ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 40ನೇ ಬೊಮ್ಮರಬೆಟ್ಟು ಗ್ರಾಮ ಪಂಚಾಯತಿನಲ್ಲಿ ಮಾಜಿ ಶಾಸಕರಾದ ವಿನಯ್ ಕುಮಾರ್ ಸೊರಕೆಯವರ ಶಿಫಾರಸಿನ ಮೇರೆಗೆ ಅಲ್ಲದೇ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಸದಸ್ಯರ ಹಾಗೂ ಗ್ರಾಮಪಂಚಾಯತ್ ಅನುದಾನವನ್ನು ಪಂಚಾಯತ್ ಉಪಾಧ್ಯಕ್ಷ ಹಾಗೂ ಸದಸ್ಯರ ಸಹಕಾರದಿಂದ ಸುಮಾರು 18 ಕೋಟಿಗಿಂತನಲೂ ಹೆಚ್ಚಿನ ಮೊತ್ತದ ಕಾಮಗಾರಿಗಳು ಮತ್ತು ಸರಕಾರದ ಸೌಲಭ್ಯಗಳನ್ನು ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಜನತೆಗೆ ಒದಗಿಸಿ ಕೊಡುವುಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ, ಆದರೆ ಇಂದು ಈ ಅಭಿವೃದ್ಧಿ ಕೆಲಸಗಳೇ ನನ್ನ ಅಧ್ಯಕ್ಷ ಸ್ಥಾನಕ್ಕೆ ಮುಳುವಾಗುತ್ತಿದೆ ಎಂದರು.

ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಅಭಿವೃದ್ಧಿಯನ್ನು ನೋಡಿ ಸಹಿಸಲಾಗದ ಬಿಜೆಪಿ ಬೆಂಬಲಿತ ಸದಸ್ಯರು ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯದ ವಿರುದ್ಧ ಬಿಜೆಪಿ ಬೆಂಬಲಿತ ನಾಗರಿಕರ ಮೂಲಕ ತಾಲೂಕು ಪಂಚಾಯತ್ ಅಧ್ಯಕ್ಷರ ನ್ಯಾಯಾಲಯಕ್ಕೆ ದೂರು ನೀಡಿ ತಡೆಯಾಜ್ಞೆ ತರಲು ಯಶಸ್ವಿಯಾಗಿದ್ದಾರೆ. ಪಂಚಾಯತ್ ವ್ಯಾಪ್ತಿಯಲ್ಲಿ ನಡೆಸಲು ಉದ್ದೇಶಿಸಿದ ಅಭಿವೃದ್ಧಿ ಕಾಮಗಾರಿಗಳಾದ ನೂತನ ಬಸ್ಸು ತಂಗುದಾಣದ ರಚನೆ, ಅಂಗಡಿ ಕೋಣೆಗಳ ಏಲಂ, ಮಾರ್ಕೆಟ್ ಏಲಂಗೆ ತಡೆಯುಂಟು ಮಾಡುವುದರ ಮೂಲಕ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆರೋಪಿಸಿದ ಮಾಲತಿ ಬಿ ಅಚಾರ್ಯ ಅವರು ಯಾವುದೇ ಅಭಿವೃದ್ಧಿ ಕೆಲಸದ ಬಗ್ಗೆ ವಿಚಾರಣೆ ನಡೆಸದೆ ರಾಜಕೀಯವಾಗಿ ತಡೆಯಾಜ್ಞೆ ನೀಡುತ್ತಿರುವ ತಾಲೂಕು ಪಂಚಾಯತ್ ಅಧ್ಯಕ್ಷರ ಕ್ರಮದಿಂದ ರೂಪಾಯಿ ನಷ್ಟ ಉಂಟಾಗಿದೆ ಎಂದು ತಿಳಿಸಿದ ಅಧ್ಯಕ್ಷರು, ಸ್ಥಳೀಯ ಸಂಸ್ಥೆಗಳ ಮೇಲೆ ಈ ರೀತಿ ರಾಜಕೀಯ ದ್ವೇಷದಿಂದ ಸವಾರಿ ಮಾಡುತ್ತಿರುವುದು ಖಂಡನೀಯ ಎಂದರು.

ಹೇಗಾದರೂ ಮಾಡಿ ನನ್ನನ್ನು ಅಧ್ಯಕ್ಷ ಸ್ಥಾನದಿಂದ ಇಳಿಸುವ ಸಲುವಾಗಿ ಬಿಜೆಪಿ ಬೆಂಬಲಿತ ಸದಸ್ಯರು ಭ್ರಷ್ಟಾಚಾರದ ಆರೋಪ ಹೊರಿಸಿ ಸಹಾಯಕ ಕಮೀಷನರ್ ಕುಂದಾಪುರ ಇವರಿಗೆ ದೂರು ನೀಡಿರುತ್ತಾರೆ. ಇದನ್ನು ತನಿಖೆ ನಡೆಸಿ ಎಲ್ಲಾ ಕಾಮಗಾರಿಗಳು ನಿಯಮ ಬದ್ದವಾಗಿ ನಡೆಸಿದ್ದು ಅಧ್ಯಕ್ಷರಿಂದ ಯಾವುದೇ ರೀತಿಯ ಲೋಪವಾಗಲಿ, ಭ್ರಷ್ಠಾಚಾರವಾಗಲಿ ನಡೆದಿಲ್ಲ ಎಂದು ಸಹಾಯಕ ಕಮೀಷನರ್ ಅವರು ತನ್ನವರದಿಯನ್ನು ಪಂಚಾಯತಿಗೆ ನೀಡಿರುತ್ತಾರೆ.

ಆದರೂ ಇದರ ಮೊದಲು ಸಾಮಾಜಿಕ ಜಾಲತಾಣ ಹಾಗೂ ಇತರ ಮಾಧ್ಯಮಗಳ ಮೂಲಕ ನನ್ನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ನನ್ನ ತೇಜೋವಧೆ ಮಾಡಿರುತ್ತಾರೆ. ಸಾರ್ವಜನಿಕವಾಗಿಯೂ ನನ್ನ ವಿರುದ್ದ ಪ್ರತಿಭಟನೆ ನಡೆಸಿ ಭ್ರಷ್ಟಾಚಾರದ ಆರೋಪವನ್ನು ಹೊರಿಸಿರುತ್ತಾರೆ ಎಂದರು.

ಕಳೆದ ಮೂರು ವರ್ಷಗಳಿಂದಲೂ ನನ್ನನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಸಿಲು ಶತ ಪ್ರಯತ್ನ ನಡೆಸಿದ ಬಿಜೆಪಿಗರಿಗೆ ಇದು ಅಸಾಧ್ಯವೆಂದು ಕಂಡಾಗ ಹಣದ ಆಮಿಷವೊಡ್ಡಿ ಕೆಲವು ಸದಸ್ಯರನ್ನು ಆಪರೇಶನ್ ಕಮಲದ ಮೂಲಕ ಖರಿದೀಸಿ ನನ್ನ ವಿರುದ್ದ ಅವಿಶ್ವಾಸ ನಿರ್ಣಯಕ್ಕೆ ಬೇಡಿಕೆ ಸಲ್ಲಿಸಿದ್ದು, ಇದೇ ನವೆಂಬರ್ 14 ರಂದು ಬುಧವಾರ ಚುನಾವಣಾ ಅಧಿಕಾರಿಯವರ ಸಮಕ್ಷಮದಲ್ಲಿ ಮಂಡನೆಯಾಗಲಿದೆ. ಇದರಲ್ಲಿ ನಮಗೆ ಸೋಲಾಗಲಿ ಅಥವಾ ಗೆಲುವಾಗಲಿ ಈ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಅಧಿಕಾರ ಯಾರಿಗೂ ಶಾಶ್ವತವಲ್ಲ ಬದಲು ನನ್ನ ಅವಧಿಯಲ್ಲಿ ಪ್ರಾಮಾಣಿಕ ಸೇವೆ ನೀಡಿರುತ್ತೇನೆ ಎಂದರು. ಆರೋಪಗಳಿಗೆ ಹೆದರಿ ಪಲಾಯನ ಮಾಡುವ ಜಾಯಮಾನ ನನ್ನಂದಲ್ಲ ಎಂದರು.

ಜಿಲ್ಲಾ ಪಂಚಾಯತ್ ಸದಸ್ಯೆ ಚಂದ್ರಿಕಾ ಕೇಳ್ಕರ್ ಮಾತನಾಡಿ ಬೊಮ್ಮರಬೆಟ್ಟು ಪಂಚಾಯತ್ ಅಧ್ಯಕ್ಷರು ನಿಯಮಾವಳಿಗಳ ಪ್ರಕಾರವೇ ನಡೆದುಕೊಂಡರೂ ಸಹ ಅವರ ವಿರುದ್ದ ಸುಳ್ಳು ಆರೋಪಗಳನ್ನು ಹೊರಿಸಿದ್ದು ಇದು ಕೇವಲ ಬಿಜೆಪಿಗರು ತಮ್ಮ ರಾಜಕೀಯ ಲಾಭಕ್ಕಾಗಿ ಮಾಡಿದ ಷಡ್ಯಂತ್ರವಾಗಿದೆ. ಪಂಚಾಯತ್ ಅಧ್ಯಕ್ಷರು ಯಾವುದೇ ರೀತಿಯ ನಿಧಿಯನ್ನು ದುರುಪಯೋಗಪಡಿಸದೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದ್ದಾರೆ ಎಂದರು.

ಹಿಂದಿನ ಶಾಸಕರು ಅಭಿವೃದ್ಧಿಯಲ್ಲಿ ಯಾವುದೇ ರಾಜಕೀಯ ಮಾಡುತ್ತಿರಲಿಲ್ಲ ಆದರೆ ನೂತನ ಶಾಸಕರಾದ ಲಾಲಾಜಿ ಮೆಂಡನ್ ಪ್ರತಿಯೊಂದು ವಿಚಾರದಲ್ಲಿ ಮೂಗು ತೂರಿಸುವುದಲ್ಲದೆ ರಾಜಕೀಯ ಮಾಡುತ್ತಿದ್ದಾರೆ. ಕೇವಲ ಪಂಚಾಯತ್ ವಿಚಾರದಲ್ಲಿ ಮಾತ್ರವಲ್ಲದೆ ಶಾಲೆಗಳ ಮೇಲುಸ್ತುವಾರಿ ಸಮಿತಿ ರಚನೆಯ ಸಂದರ್ಭದಲ್ಲಿ ಮಕ್ಕಳ ಹೆತ್ತವರನ್ನು ಕರೆಸಿ ಯಾವುದೇ ಸೂಚನೆ ಅನುಮೋದನೆಗಳಿಲ್ಲದೆ ತಾನೇ ಬರೆದು ತಂದ ಪಟ್ಟಿಯನ್ನು ಶಾಸಕರು ನೇರವಾಗಿ ಒದಿ ಹೇಳಿ ಏಕಪಕ್ಷಿಯವಾಗಿ ನಿರ್ಣಯ ತೆಗೆದುಕೊಂಡು ಸಮಿತಿ ರಚನೆ ಮಾಡಿರುತ್ತಾರೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಚಂದ್ರಶೇಖರ್, ಲಕ್ಷ್ಮೀನಾರಾಯಣ ಪ್ರಭು, ವಿನೋದ್ ಕುಮಾರ್, ಸುರೇಶ್ ನಾಯಕ್ ಚರಣ್ ವಿಠಲ್ ಹಾಗೂ ಇತರರು ಉಪಸ್ಥಿತರಿದ್ದರು


Spread the love