ಬಿಜೆಪಿ ಮುಖಂಡನ ಪುತ್ರನಿಂದ ಅತ್ಯಾಚಾರ, ವಂಚನೆ ಪ್ರಕರಣ: ಆರೋಪಿ ಶ್ರೀಕೃಷ್ಣರಾವ್ ಜಾಮೀನು ಅರ್ಜಿ ತಿರಸ್ಕೃತ
ಪುತ್ತೂರು: ಸಹಪಾಠಿಯನ್ನು ವಿವಾಹವಾಗುವುದಾಗಿ ನಂಬಿಸಿ ಗರ್ಭಿಣಿಯಾಗಿಸಿ ಬಳಿಕ ಮದುವೆಯಾಗದೆ ವಂಚಿಸಿದ ಪ್ರಕರಣದಲ್ಲಿ ಬಂಧಿತನಾಗಿರುವ ಬಿಜೆಪಿ ಮುಖಂಡ ಪಿ.ಜಿ. ಜಗನ್ನಿವಾಸ್ ರಾವ್ ಪುತ್ರ ಶ್ರೀಕೃಷ್ಣ ಜೆ. ರಾವ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಮಂಗಳೂರು 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕೃತಗೊಳಿಸಿ ಆದೇಶಿಸಿದೆ.
ಆರೋಪಿ ಶ್ರೀಕೃಷ್ಣರಾವ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಶುಕ್ರವಾರ ತನಿಖೆಗೆತ್ತಿಕೊಂಡ ನ್ಯಾಯಾಲಯವು ವಾದ-ವಿವಾದವನ್ನು ಆಲಿಸಿ ತನ್ನ ಅಂತಿಮ ತೀರ್ಪನ್ನು ಪ್ರಕಟಿಸಿದ್ದು ಜಾಮೀನು ನಿರಾಕರಿಸಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಆರೋಪಿ ಶ್ರೀಕೃಷ್ಣರಾವ್ ಮತ್ತು ಸಂತ್ರಸ್ತ ವಿದ್ಯಾರ್ಥಿನಿಯು ಪ್ರೌಢಶಾಲೆಯಿಂದಲೂ ಸಹಪಾಠಿಗಳಾಗಿದ್ದು, ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ಶ್ರೀಕೃಷ್ಣರಾವ್ ಯಾರೂ ಇಲ್ಲದ ವೇಳೆಯಲ್ಲಿ ತನ್ನ ಮನೆಗೆ ಕರೆಸಿಕೊಂಡು ಅತ್ಯಾಚಾರ ನಡೆಸಿದ್ದ. ನಂತರ ಯುವತಿ ಗರ್ಭಿಣಿಯಾಗಿದ್ದಳು. ಬಳಿಕ ಆರೋಪಿ ಶ್ರೀಕೃಷ್ಣರಾವ್ ಮದುವೆಯಾಗಲು ನಿರಾಕರಿಸಿದ್ದ ಈ ಹಿನ್ನಲೆಯಲ್ಲಿ ಸಂತ್ರಸ್ತ ವಿದ್ಯಾರ್ಥಿನಿಯು ಜೂನ್ 24ರಂದು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ನಂಬಿಕೆ ದ್ರೋಹದ ಪ್ರಕರಣ ದಾಖಲಿಸಿದ್ದರು. ಬಳಿಕ ಜೂನ್ 27ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು.
ಜುಲೈ 4ರಂದು ಪೊಲೀಸರು ಆರೋಪಿ ಶ್ರೀಕೃಷ್ಣರಾವ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಲಯವು ಆತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಈ ನಡುವೆ ಆರೋಪಿಯು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಜು.19ರಂದು ಪ್ರಕರಣವು ವಿಚಾರಣೆಗೆ ಬಂದಾಗ, ಅರ್ಜಿದಾರರ ಪರ ವಕೀಲರು ಹಾಗೂ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರು (ಪಿ.ಪಿ) ಹಾಜರಾಗಿ ವಾದ ಮಂಡಿಸಿದರು.
ಈ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರು ಹಾಗೂ ಸರ್ಕಾರಿ ಅಭಿಯೋಜಕರು ತಲಾ ಮೂರು ಪ್ರಮುಖ ಕಾನೂನು ಉಲ್ಲೇಖಗಳೊಂದಿಗೆ ತಮ್ಮ ಲಿಖಿತ ವಾದಾಂಶಗಳನ್ನು (ಮೆಮೊ) ನ್ಯಾಯಾಲಯಕ್ಕೆ ಸಲ್ಲಿಸಿದರು. ಪ್ರಕರಣದ ಅಂತಿಮ ತೀರ್ಪನ್ನು ಜುಲೈ 25ಕ್ಕೆ ನಿಗದಿಗೊಳಿಸಿತ್ತು. ಆರೋಪಿಯು ಜು. 4 ರಂದು ಮೈಸೂರಿನಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದು, ಅಂದಿನಿಂದ ನ್ಯಾಯಾಂಗ ಬಂಧನದಲ್ಲಿದ್ದಾನೆ.