ಬೆಂಗಳೂರು: ಬಿಷಪ್ ಬರ್ನಾಡ್ ಮೋರಸ್ ರನ್ನು ಏಕವಚನದಲ್ಲಿ ಸಂಭೋಧಿಸಿದ ಕರವೇ ಅಧ್ಯಕ್ಷ ನಾರಾಯಣಗೌಡ ಕ್ಷಮೆಯಾಚಿಸಬೇಕು: ಟಿ ಜೆ ಅಬ್ರಹಾಂ

Spread the love

ಬೆಂಗಳೂರು: ಆರ್ಚ್ ಬಿಷಪ್ ಅತಿ ವಂ. ಡಾ.ಬರ್ನಾಡ್ ಮೋರಸ್ ಅವರನ್ನು ಏಕವಚನದಲ್ಲಿ ಸಂಭೋಧಿಸಿದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡರು ಕೂಡಲೇ ಬಿಷಪ್ ಬರ್ನಾಡ್ ಅವರಲ್ಲಿ ಕ್ಷಮೆಯಾಚಿಸಬೇಕು ಎಂದು ಇಂಡಿಯನ್ ಕ್ರಿಶ್ಚಿಯನ್ ಯುನೈಟೆಡ್ ಫೋರಂ ನ ಅಧ್ಯಕ್ಷ ಅಬ್ರಹಾಂ ಟಿ.ಜೆ ಆಗ್ರಹಿಸಿದ್ದಾರೆ.

abrahamtj

ಬೆಂಗಳೂರು ಪ್ರೆಸ್ ಕ್ಲಬ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ  ಅವರು, ನಾರಾಯಣ ಗೌಡರು ಕರ್ನಾಟಕ ಕನ್ನಡ ಧರ್ಮಗುರುಗಳ ಬಳಗವು ನಡೆಸಿದ ಚಿಂತನಾ ಸಭೆಯಲ್ಲಿ ಬೆಂಗಳೂರು ಮಹಾ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ ಬರ್ನಾಡ್ ಮೋರಸ್ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ. ಕನ್ನಡದ ನೆಲಕ್ಕೆ ಬರ್ನಾಡ್ ಮೋರಸ್ ದ್ರೋಹ ಬಗೆಯುತ್ತಿದ್ದು, ಅವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ನಾರಾಯಣ ಗೌಡರು ಹೇಳಿದ್ದಾರೆ.
ಈ ರೀತಿ ಏಕವಚನದಲ್ಲಿ ಮಾತನಾಡುವ ನಾರಾಯಣಗೌಡ ಕೆಳಮಟ್ಟದ ಶೈಲಿ ಹೊಂದಿದ್ದಾರೆ. ಇಂತಹವರು ನಮ್ಮ ಧರ್ಮಗುರುಗಳ ಬಗ್ಗೆ ಏಕವಚನದಲ್ಲಿ ಮಾತಾಡಿರುವುದು ಸರಿಯಲ್ಲ. ಕೂಡಲೇ ಅವರು ಸಾರ್ವಜನಿಕವಾಗಿ ಬರ್ನಾಡ್ ಮೋರಸ್ ಅವರನ್ನು ಕ್ಷಮೆಯಾಚಿಸಬೇಕು. ಇಲ್ಲವಾದರೇ, ಅವರ ವಿರುದ್ಧ ನಾವು ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಧರ್ಮಾಧ್ಯಕ್ಷ ಬರ್ನಾಡ್ ಮೋರಸ್ ಹೊರಡಿಸಿರುವ ಸುತ್ತೋಲೆ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಟೀಕಿಸಿರುವುದು ಸರಿಯಲ್ಲ. ಸುತ್ತೋಲೆಯಲ್ಲಿ ಏನಿದೆ ಎಂಬುದನ್ನು ತಿಳಿಯದೇ, ಸುತ್ತೋಲೆ ಬಗ್ಗೆ ಟೀಕಿಸಿದ್ದಾರೆ. ನಾರಾಯಣ ಗೌಡರು ಬರೆದುಕೊಟ್ಟಂತೆ ಪುಂಡಲೀಕ ಹಾಲಂಬಿ ಹೇಳಿಕೆ ನೀಡಿದ್ದಾರೆ. ಹಾಲಂಬಿ ಅವರ ಈ ನಡೆ ಸರಿಯಲ್ಲ. ಬರ್ನಾಡ್ ಮೋರಸ್ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕು ಹಾಲಂಬಿ ಅವರಿಗೆ ಇಲ್ಲ ಎಂದು ಅಬ್ರಹಾಂ ಟಿ.ಜೆ ಹೇಳಿದ್ದಾರೆ.

ಟಿಜೆ ಅಬ್ರಾಹಾಂ ನಡೆಸಿದ ಸುದ್ದಿಗೋಷ್ಟಿಯ ಸಂಪೂರ್ಣ ವಿವರ ಯಥಾವತ್ತಾಗಿ ಒದುಗರಿಗೆ ನೀಡಲಾಗಿದೆ

ಇತ್ತೀಚೆಗೆ ಕರ್ನಾಟಕ ಕನ್ನಡ ಧರ್ಮಗುರುಗಳ ಬಳಗವು ನಡೆಸಿದ ಚಿಂತನಾ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ.ಪುಂಡಲೀಕ ಹಾಲಂಬಿ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಶ್ರೀ ಟಿ.ಎ.ನಾರಾಯಣಗೌಡ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಕವಿ ಡಾ.ಸಿದ್ಧಲಿಂಗಯ್ಯ ಮತ್ತು ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘದ ಕಾರ್ಯದರ್ಶಿಯಾದ ಶ್ರೀ.ರಫಾಯಲ್ ರಾಜ್, ಮತ್ತಿತರ ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಈ ಚಿಂತನಾ ಸಭೆಯನ್ನು ಏರ್ಪಡಿಸಿದ ಕ್ಯಾಥೋಲಿಕ್ ಕರ್ನಾಟಕ ಕನ್ನಡ ಧರ್ಮಗುರುಗಳ ಬಳಗವನ್ನು ನಡೆಸುತ್ತಿರುವ ಇಬ್ಬರು ಪ್ರಮುಖ ಧರ್ಮಗುರುಗಳಾದವರು ತಮಿಳು ಮೂಲದ ಶ್ರೀ. ಚಳ್ಳಕೆರೆ ಚೌಡಪ್ಪ ಸೆಲ್ವರಾಜ್   [ಚ-ಸೆ-ರಾ (ಸೆಲ್ವರಾಜ್)], ಸಂತ ಜೋಸೆಫ್ ಚರ್ಚ್, ಚಾಮರಾಜಪೇಟೆಯ ಪ್ರಧಾನ ಧರ್ಮಗುರುಗಳಾಗಿರುತ್ತಾರೆ ಮತ್ತು ಕಾರ್ಮೆಲ್ ಸೇವಾ ಸಂಘವು ನಡೆಸುತ್ತಿರುವ ಕ್ರೈಸ್ಟ್ ಶಾಲೆ, ಮರಿಯನಪಾಳ್ಯ ರಸ್ತೆ, ಕಗ್ಗಲೀಪುರ ಇದರ ಪ್ರಧಾನ ಟ್ರಸ್ಟೀ, ಫಾದರ್ ಎ.ಥಾಮಸ್ ರವರಾಗಿರುತ್ತಾರೆ.

          ಇವರ ಎಲ್ಲಾ ಚಟುವಟಿಕೆಗಳಿಗಾಗಿ, ಅಖಿಲ ಕರ್ನಾಟಕ ಕನ್ನಡ ಧರ್ಮಗುರುಗಳ ಬಳಗದ ಅಧ್ಯಕ್ಷರಾದ ಫಾದರ್ ಥಾಮಸ್ ರವರು ನಡೆಸುತ್ತಿರುವ ಕಾರ್ಮೆಲ್ ಸೇವಾ ಸಂಘದ ಟ್ರಸ್ಟ್ ಗೆ FODERVEREIN BEDEN, GERMANY ಎಂಬ ವಿದೇಶಿ ಸಂಸ್ಥೆಯಿಂದ ಹಣ ಬರುತ್ತಿದ್ದು. ಈ ವಿದೇಶಿ ಸಂಸ್ಥೆಗೆ ಹಣ ಒದಗಿಸುವವರೇ Billy Graham Evangelist Association, P.O. Box.1270, Charlotte, 28201, 1270 USA ಹಾಗೂ AGAPE Ministries India ಇವರುಗಳಿಗೆ ಹಣ ಮೂಲಭೂತವಾಗಿ ಒದಗಿಸುವ Living Word Fellowship, 512, Beach Pond Road, Voluntown, CT 06384, Box, 36, USA ಮತ್ತು In Asian Mission, Box 531011, Birmingham, Al-35253, USA ರವರುಗಳಾಗಿರುತ್ತಾರೆ. ವಿದೇಶಿ ಹಣ ಒದಗಿಸಿತ್ತಿರುವ ಈ ಎಲ್ಲ ಸಂಘ/ಸಂಸ್ಥೆಗಳಿಗೂ ಒಂದೇ ಸಂಘಟನೆಯಿಂದಲೇ ಹಣ ಬರುತ್ತಿದೆ ಎಂಬುದು ಅಧಿಕೃತ ಮೂಲಗಳಿಂದ ತಿಳಿದು ಬಂದಿರುತ್ತದೆ. ಈಗಾಗಲೇ ಇದನ್ನೂ ತನಿಖೆಗೆ ಒಳಪಡಿಸಿ, ಎಲ್ಲ ವಿವರಗಳನ್ನು ಬಹಿರಂಗ ಪಡಿಸಲು ಕೇಂದ್ರ ಗೃಹ ಇಲಾಖೆಯನ್ನು ಆಗ್ರಹಿಸಲಾಗಿದೆ.

ಈ ಎಲ್ಲಾ ವಿದೇಶಿ ಸಂಸ್ಥೆಗಳು ಹಣ ಒದಗಿಸುವ ಅನಧಿಕೃತ ಉದ್ದೇಶ ಒಂದೇ ಆಗಿರುತ್ತದೆ. ಅದೇನೆಂದರೆ, ಧರ್ಮಗುರುಗಳ ನಿರ್ವಹಣೆ ಮತ್ತು ಇತರೆ ಧಾರ್ಮಿಕ ಪ್ರಚಾರಕ್ಕಾಗಿ (Maintenance of Priests/Other Religious Functionaries) ಬಳಸುವುದು. ಆದರೆ ಅಧಿಕೃತವಾಗಿ ಮೇಲ್ನೋಟಕ್ಕೆ ಫಾದರ್ ಥಾಮಸ್ ರವರ ಟ್ರಸ್ಟಿಗೆ ವಿದೇಶಿ ಮೂಲದಿಂದ ಬರುತ್ತಿರುವ/ಕಳುಹಿಸುತ್ತಿರುವ ಹಣವನ್ನು ಶಿಕ್ಷಣ ಹಾಗೂ ಬುದ್ದಿಮಾಂಧ್ಯ ಮಕ್ಕಳ ಶಾಲೆಯನ್ನು ನಡೆಸಲು ಮಾತ್ರವೇ ಎಂದು ತೋರಿಸಲಾಗಿರುತ್ತದೆ. ಇವರು ಹೀಗೆ ವಿದೇಶಿ ಮೂಲದಿಂದ ಸಂಗ್ರಹಿಸಿದ ಹಣವನ್ನು ಶಿಕ್ಷಣ ಹಾಗೂ ಬುದ್ದಿಮಾಂಧ್ಯ ಮಕ್ಕಳ ಶಾಲೆಯನ್ನು ನಡೆಸುವ ಉದ್ದೇಶಕ್ಕೆ ಬಳಸದೇ, ಇತರೆ ಕಾನೂನು ಬಾಹಿರ ಚಟುವಟಿಕೆಗಳಿಗೆ/ಕ್ಯಾಥೋಲಿಕ್ ಧರ್ಮ ವಿರೋಧಿ ಚಟುವಟಿಕೆಗಳಿಗೆ ಬಳಸುತ್ತಿರುವುದು FCRA ಕಾಯಿದೆ, ಕಲಂ 3.6.1 ರ ಪ್ರಕಾರ ಕ್ರಿಮಿನಲ್ ಅಪರಾಧವಾಗಿರುತ್ತದೆ. ಇದರ ಬಗ್ಗೆ ಸಂಪೂರ್ಣ ತನಿಖೆಗಾಗಿ ನಾವು ಈಗಾಗಲೇ ಕೇಂದ್ರ ಸರ್ಕಾರದ ಗೃಹ ಇಲಾಖೆಗೂ ದೂರನ್ನು ನೀಡಿರುತ್ತೇವೆ.

ಅಧಿಕೃತವಾಗಿ ವಿದೇಶಿ ಮೂಲದ ಹಣಕಾಸು ಸಂಸ್ಥೆಗಳಿಂದ ದಿನಾಂಕ 31-03-2013ರವರೆಗೆ ಸುಮಾರು ರೂ.2,67,48,999.00/- (ಎರಡು ಕೋಟಿ ಅರವತ್ತೇಳು ಲಕ್ಷದ ನಲವತ್ತೆಂಟು ಸಾವಿರದ ಒಂಭೈನೂರ ತೊಂಭತ್ತೊಂಭತ್ತು ರೂಪಾಯಿಗಳು) ರಷ್ಟು ಹಣ ಹರಿದು ಬಂದಿರುತ್ತದೆ.

          ಒಂದು ನಾಚಿಕೆಗೇಡಿನ ಸಂಗತಿ ಏನೆಂದರೆ, ತಮಿಳುನಾಡಿನ ಮೂಲದವರಾಗಿದ್ದು (ಚ-ಸೆಲ್ವರಾಜ್-ರ ರಂತೆ) ಮತ್ತು  ಕೆಲವರು ಆಂಧ್ರ ಮೂಲದವರಾಗಿರುವವರುಗಳು ತಮ್ಮ ತಮ್ಮ ಮನೆಗಳಲ್ಲಿ ತಮ್ಮ ಮಾತೃ ಭಾಷೆಗಳಾದ ತಮಿಳು ಮತ್ತು ತೆಲಗನ್ನು ಬಳಸುತ್ತಿದ್ದು, ಹೊರನೋಟಕ್ಕೆ ತಮ್ಮನ್ನು ತಾವೇ ಕನ್ನಡ ಪರ ಹೋರಾಟಗಾರರೆಂದು ಬಿಂಬಿಸಿಕೊಂಡು ಕಪಟ ನಾಟಕ ಮಾಡುತ್ತಾ ಬೆಂಗಳೂರು ಧರ್ಮಕ್ಷೇತ್ರದಲ್ಲಿ ಶಾಂತಿಯನ್ನು ಕದಡುವುದೇ ಇವರ ಉದ್ದೇಶವಾಗಿರುತ್ತದೆ. ಅದರಿಂದಲೇ ಈ ಡೋಂಗಿ ಕನ್ನಡ ಕ್ರೈಸ್ತರ ಪರ ಹೋರಾಟಗಾರರು ಕರ್ನಾಟಕ ರಾಜ್ಯದ ಸ್ವಂತ ಪ್ರಾದೇಶಿಕ ಭಾಷೆಯಾದ ಕೊಂಕಣಿ ಬಳಸುವವರನ್ನು ಕಡೆಗಣಿಸುವ ಉದ್ದೇಶದಿಂದ ಮತ್ತು ಕರ್ನಾಟಕದಲ್ಲೇ ಹುಟ್ಟಿದ ಕನ್ನಡಿಗರಾದ ಕೊಂಕಣಿಗರನ್ನು ಇವರು ವಿರೋಧಿಸುತ್ತಿರುವುದಕ್ಕೆ ಕಾರಣವಾಗಿರುತ್ತದೆ.

ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶ್ರೀ.ನಾರಾಯಣ ಗೌಡರು “ಬರ್ನಾಡ್ ಮೋರಸ್ ರವರು ಕನ್ನಡ ನೆಲದ ಆಹಾರ ಮತ್ತು ನೀರನ್ನು ಸೇವಿಸಿ ಕನ್ನಡಕ್ಕೆ ದ್ರೋಹ ಬಗೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ಅಂತಹವರಿಗೆ ತಕ್ಕಪಾಠ ಕಲಿಸಲೇಬೇಕಾಗುತ್ತದೆ” ಎಂದು ಬೆಂಗಳೂರು ಧರ್ಮಾಧ್ಯಕ್ಷರಾದ ಪರಮಪೂಜ್ಯ ಬರ್ನಾಡ್ ಮೋರಸ್ ರವರನ್ನು ಕುರಿತು ಏಕವಚನದಲ್ಲಿ ಸಂಭೋಧಿಸಿರುವುದು, ಶ್ರೀ.ನಾರಾಯಣ ಗೌಡರು ಸಾರ್ವಜನಿಕ ಜೀವನದಲ್ಲಿ ಅಳವಡಿಸಿಕೊಂಡಿರುವ ಕೆಳಮಟ್ಟದ ಶೈಲಿ ಹಾಗೂ ಅವರು ನಡೆದು ಬಂದಂತಹ ಹಾದಿ ಮತ್ತವರ ಇತಿಹಾಸ ತಿಳಿದವರಿಗೆ ಅಶ್ಚರ್ಯಕರ ಅಥವಾ ಹೊಸತೇನಲ್ಲ.

ಶ್ರೀ.ನಾರಾಯಣ ಗೌಡರಿಗೆ, ತಮ್ಮ ಪರವಾಗಿ ಮಾತನಾಡಲು ಕರ್ನಾಟಕ ಕನ್ನಡ ಧರ್ಮಗುರುಗಳ ಬಳಗದವರು ರೂ.5,00,000/- (ಐದು ಲಕ್ಷ ರೂಪಾಯಿಗಳು) ಗಳನ್ನು ಕೇಳಿದ್ದು ಚೌಕಾಶಿಯ ನಂತರ ರೂ.3,00,000/- (ಮೂರು ಲಕ್ಷ ರೂಪಾಯಿ) ಗಳನ್ನು ನೀಡಬೇಕಾಗುತ್ತದೆ ಎಂಬ ವಿಷಯವನ್ನು ಪಾದ್ರಿಗಳ ಸಭೆಯಲ್ಲಿ ಚರ್ಚಿಸಲಾಗಿ, ಅದನ್ನು ಆ ಪಾದ್ರಿಗಳು ಗೌಡರು ಕೇಳಿದಷ್ಟು ಹಣವನ್ನು ನೀಡುಲು ತಮ್ಮ ಸಭೆಯಲ್ಲಿ ಅನುಮೋದಿಸಿರುತ್ತಾರೆಂಬುದು ಎಲ್ಲರಿಗೂ ತಿಳಿದಿರುವಂತಹಾ ವಿಷಯವಾಗಿರುತ್ತದೆ. ಶ್ರೀ.ನಾರಾಯಣ ಗೌಡರಿಗೆ ನೀಡಿರುವ ಹಣದ ಮಾಹಿತಿಯನ್ನು ಸಹ ಕೇಂದ್ರ ಗೃಹ ಇಲಾಖೆಯ ಗಮನಕ್ಕೆ ತರಲು ಕ್ರಮ ಕೈಗೊಳ್ಳುತ್ತಿದ್ದೇವೆ. ಇದರೊಂದಿಗೆ ಶ್ರೀ.ನಾರಾಯಣ ಗೌಡರಿಗೆ ಅಥವಾ ಅವರ ಸಂಘಟನೆಯಾದ ಕರ್ನಾಟಕ ರಕ್ಷಣಾ ವೇದಿಕೆಯ ಬೊಕ್ಕಸೆಗೆ ಕರ್ನಾಟಕ ಸರ್ಕಾರದ ಯಾವ ಯಾವ ಸಂಸ್ಥೆಗಳಿಂದ ಹಣ ಬಂದಿರುತ್ತದೆ/ಸಂಗ್ರಹಣೆಯಾಗಿರುತ್ತದೆ ಎಂಬುವ ಮಾಹಿತಿಯನ್ನು ಸಂಗ್ರಹಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭಿಸಿದ್ದು, ಅತಿ ಶೀಘ್ರದಲ್ಲೇ ಅದರ ಬಳಕೆ/ದುರ್ಬಳಕೆಯ ಬಗೆಗಿನ ತನಿಖೆಗೆ ನ್ಯಾಯಾಲಯದ ಮೂಲಕ ಆದೇಶಕ್ಕೆ ಮುಂದುವರೆಯುತ್ತಿದ್ದೇವೆ.

ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ.ಪುಂಡಲೀಕ ಹಾಲಂಬಿ ರವರು “ಬರ್ನಾರ್ಡ್ ಮೊರಾಸ್ ಬೇರೆ ಬೇರೆ ಭಾಷೆಗಳಲ್ಲಿ ಪ್ರಾರ್ಥನೆ ಸಲ್ಲಿಸಬಹುದು ಎಂದು ಹೊರಡಿಸಿರುವ ಸುತ್ತೋಲೆ ಯಾವುದೇ ಕಾರಣಕ್ಕೂ ಒಪ್ಪುವಂತಹದ್ದಲ್ಲ” ಎಂದು ಹೇಳಿಕೆ ನೀಡಿರುತ್ತಾರೆ ಮತ್ತು ಮುಂದುವರೆದು “ನಾವು ಇಲ್ಲಿ ಭಾಷೆಯ ವಿಚಾರವಾಗಿ ಹೋರಾಟ ಮಾಡಲು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದೇವೆ. ದುರಾದೃಷ್ಟದ ಸಂಗತಿ ಎಂದರೆ, ಈ ಚಿಂತನಾ ಸಭೆಯಲ್ಲಿ ಪಾಲ್ಗೊಳ್ಳಬಾರದು ಎಂದು ಕೇಂದ್ರದ ಮಾಜಿ ಸಚಿವರು ದೂರವಾಣಿಯಲ್ಲಿ ಬೆದರಿಕೆ ಒಡ್ಡುತ್ತಾರೆ ಎಂದರೆ, ಇದರಿಂದಲೇ ತಿಳಿಯುತ್ತದೆ ಬರ್ನಾರ್ಡ್ ರ ಸುತ್ತೋಲೆಯಲ್ಲಿನ ಕಪಟತನ” ಎಂದು ಟೀಕಿಸಿರುವುದು ಹಾಸ್ಯಾಸ್ಪದವಗಿರುತ್ತದೆ. ನಿಜವಾಗಿಯೂ ಇಂತಹ ಒಂದು ಬೆದರಿಕೆ ಕರೆ ಬಂದಿದ್ದರೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಅಂತಹವರ ವಿರುದ್ದ ಪೊಲೀಸರಿಗೆ ದೂರನ್ನು ಕೊಟ್ಟು ತನಿಖೆ ಆಗ್ರಹಿಸಬೇಕೆಂಬುವ ಕನಿಷ್ಠ ಪರಿಜ್ಞಾನವೂ ಇಲ್ಲವೇ?

ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ.ಪುಂಡಲೀಕ ಹಾಲಂಬಿ ರವರು “ಬರ್ನಾರ್ಡ್ ಮೊರಾಸ್ ಬೇರೆ ಬೇರೆ ಭಾಷೆಗಳಲ್ಲಿ ಪ್ರಾರ್ಥನೆ ಸಲ್ಲಿಸಬಹುದು ಎಂದು ಹೊರಡಿಸಿರುವ ಸುತ್ತೋಲೆ ಯಾವುದೇ ಕಾರಣಕ್ಕೂ ಒಪ್ಪುವಂತಹದ್ದಲ್ಲ” ಎಂದು ಹೇಳಲು ಇವರಿಗೆ ಯಾರು ಯಾವ ಅಧಿಕಾರ ನೀಡಿದ್ದಾರೆ?

  1. ಇವರೊಬ್ಬ ಕ್ಯಾಥೋಲಿಕರೇ? ಅಲ್ಲದಿದ್ದರೆ ಅವರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿ ಎಂದು ಆಗ್ರಹಿಸುತ್ತೇವೆ. ಅಲ್ಲದಿದ್ದರೆ ಈ ರೀತಿ ಕೇವಲವಾದ ಕೆಳಮಟ್ಟದ ಹೇಳಿಕೆಯನ್ನು ನೀಡುವುದನ್ನು ನಿಲ್ಲಿಸುವಂತೆ ಹೇಳುತ್ತೇವೆ.

ಇವರುಗಳಿಗೆ ತಮ್ಮ ದೇವಸ್ಥಾನಗಳಲ್ಲಿ ಪೂಜಾರಿ ಅಥವಾ ಅರ್ಚಕರು ಸಂಸ್ಕೃತದಲ್ಲಿ ಪಠಿಸುವ ಮಂತ್ರಗಳು ಯಾರಿಗೂ ಅರ್ಥವಾಗದಿದ್ದರೂ ಅದರ ಬಗ್ಗೆ ಏನೂ ಮಾತನಾಡದೇ ಅಥವಾ ಅದನ್ನು ಕನ್ನಡದಲ್ಲಿ ಅರ್ಥಬರಿತವಾಗಿ ಪಠಿಸಲು ಆಗ್ರಹಿಸದೇ ನಮ್ಮ ಚರ್ಚುಗಳಲ್ಲಿ ಬಳಸುವ ಭಾಷೆಯ ಬಗ್ಗೆ ಮಾತನಾಡಲು ಯಾವ ನೈತಿಕ ಹಕ್ಕನ್ನು ಹೊಂದಿರುತ್ತಾರೆ?

  1. ಶ್ರೀ.ಪುಂಡಲೀಕ ಹಾಲಂಬಿ ರವರಿಗೆ ಕನ್ನಡದಲ್ಲಿ ಮಂತ್ರೋಚ್ಛಾರ ಮಾಡಲು ತಿಳಿದಿದೆಯೇ?

ಇಲ್ಲದೇ ಇದ್ದರೆ ಇವರುಗಳು ದಯವಿಟ್ಟು ಶಿವಮೊಗ್ಗ ಜಿಲ್ಲೆಗೆ ಒಂದು ಭೇಟಿಯನ್ನು ನೀಡಿ ಅಲ್ಲಿ ತಮಿಳು ನಾಡಿನ ತಮಿಳು ಮೂಲದ ಶ್ರೀ.ಕಣ್ಣನ್ ರವರಿಂದ ದೇವಸ್ಥಾನಗಳಲ್ಲಿ ಕನ್ನಡದಲ್ಲಿ ಹೇಗೆ ಮಂತ್ರೋಚ್ಛಾರ ಮಾಡುವುದೆಂದು ಕಲಿತು ಬರಲಿ.

  1. ಶ್ರೀ.ಪುಂಡಲೀಕ ಹಾಲಂಬಿ ರವರು ಬೆಂಗಳೂರು ಧರ್ಮಾಧ್ಯಕ್ಷರಾದ ಪರಮಪೂಜ್ಯ ಬರ್ನಾರ್ಡ್ ಮೋರಾಸ್ ರವರು ಹೊರಡಿಸಿರುವ ಸುತ್ತೋಲೆಯನ್ನು ಟೀಕಿಸುವ ಮುನ್ನ ಅದನ್ನು ಓದಿದ್ದಾರೆಯೇ?

ಆ ಸುತ್ತೋಲೆಯಲ್ಲಿ ಕನ್ನಡವನ್ನು ಖಡ್ಡಾಯಗೊಳಿಸಿರುವುದು ಅವರಿಗೆ ಕಂಡುಬರಲಿಲ್ಲವೇ?

ಆ ಸುತ್ತೋಲೆಯಲ್ಲಿ ಕನ್ನಡಕ್ಕೆ ಪ್ರಾತಿನಿಧ್ಯ ನೀಡಿರುವುದನ್ನು ನೋಡದೇ ಕರ್ನಾಟಕ ಕನ್ನಡ ಧರ್ಮಗುರುಗಳ ಬಳಗದವರು ತಮ್ಮನ್ನು ಸಹ ಶ್ರೀ.ನಾರಾಯಣ ಗೌಡರಂತೆ ಬರೆದುಕೊಟ್ಟ ಹೇಳಿಕೆಯಂತೆ ಮಾತನಾಡಲು ಕರೆತಂದಿರುತಂದು ಬಿಟ್ಟಿರುತ್ತಾರೆಯೇ?

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಕವಿ ಡಾ.ಸಿದ್ಧಲಿಂಗಯ್ಯನವರು ಇವರೊಂದಿಗೆ ವೇದಿಕೆಯನ್ನು ಅಲಂಕರಿಸುವ ಸಂಧರ್ಬದಲ್ಲಿ ಪಕ್ಕದಲ್ಲಿ ಕುಳಿತಿರುವ ಶ್ರೀ.ನಾರಾಯಣ ಗೌಡರ ಮಕ್ಕಳು ಯಾವ ಕನ್ನಡ ಮಾಧ್ಯಮದ ಶಾಲೆಯಲ್ಲಿ ಓದುತ್ತಿದ್ದಾರೆಂದು ಕನಿಷ್ಠ ಸೌಜನ್ಯತೆಯನ್ನು ತೋರಿರುತ್ತಾರೆಯೇ? ಅಲ್ಲದಿದ್ದರೆ ಕೇಂದ್ರೀಯ ವಿದ್ಯಾಲಯಕ್ಕೆ ಸೇರಿದ ನ್ಯಾಷನಲ್ ಹಿಲ್ ವ್ಯೂ ಶಾಲೆಯವರಿಗೆ ಕೇಳಿದ್ದರೂ ಮಾಹಿತಿ ದೊರಕುತ್ತಿತ್ತು.

ನಾವು ಇಂದು ಇವರುಗಳು ನಿಜವಾದ ಕನ್ನಡ ಪ್ರಿಯರೇ ಆಗಿದ್ದು ಕನ್ನಡ ಪರ ಹೋರಾಟಗಾರರಾಗಿದ್ದರೆ, ಇವರುಗಳಿಗೆ ನೇರ ಸವಾಲನ್ನು ಹಾಕುತ್ತಿದ್ದೇವೆ-

  1. ನಿಮಗೆ ನಮ್ಮ ಚರ್ಚುಗಳಲ್ಲಿನ ಭಾಷಾನೀತಿಯ ಬಗ್ಗೆ ಮಾತನಾಡಲು, ಮೊದಲು ತಾವುಗಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುತ್ತೀರೆಯೇ? ಅಲ್ಲದಿದ್ದರೆ;
  2. ನಿಮಗೆ ಹಿಂದೂ ದೇವಸ್ಥಾನಗಳ ಪ್ರಾರ್ಥಾನ ವಿಧಿ ವಿಧಾನವನ್ನು ಕಡ್ಡಾಯವಾಗಿ ಕನ್ನಡದಲ್ಲಿ ಮಾತ್ರ ನಡೆಸುವಂತೆ ಒತ್ತಾಯಿಸಿ ಅದಕ್ಕಾಗಿ ಹೋರಾಟನಡೆಸುವ ಧೈರ್ಯವಿದೆಯೇ? ಅಲ್ಲದಿದ್ದರೆ;
  3. ಕನಿಷ್ಠ ಒಂದು ಹತ್ತು ಮಸೀದಿಗಳಲ್ಲಿ ಪ್ರಾರ್ಥಾನ ವಿಧಿ ವಿಧಾನವನ್ನು ಕಡ್ಡಾಯವಾಗಿ ಕನ್ನಡದಲ್ಲಿ ನಡೆಸಲು ಬಹಿರಂಗವಾಗಿ ಒಂದು ಹೇಳಿಕೆ ನೀಡಲು ಧೈರ್ಯವಿದೆಯೇ?

ನಾವುಗಳು ಶಾಂತಿಪ್ರಿಯರು ಎಂಬುವ ಒಂದೇ ಕಾರಣಕ್ಕಾಗಿ ನಮ್ಮ ಬಗ್ಗೆ ಮಾತನಾಡಲು ಹೋಗಿಬರುತ್ತಿರುವವರೆಲ್ಲರಿಗೂ ಧೈರ್ಯ ಬರುತ್ತದೆ. ಆದರೆ, ದೇವಸ್ಥಾನ, ಮಸೀದಿ ಮತ್ತು ಗುರುದ್ವಾರಗಳ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ.

ಕಪಟ ಕರ್ನಾಟಕ ಕನ್ನಡ ಕ್ರೈಸ್ತ ಧರ್ಮಗುರುಗಳ ಬಳಗವು ಅಥವಾ ಡೋಂಗಿ ಹೋರಾಟಗಾರರು ವಿದೇಶಿ ಹಣದ ಪ್ರಭಾವದಿಂದ ಕ್ಯಾಥೋಲಿಕ್ ಸಭೆಯನ್ನು ಒಡೆಯಲು ಮಾಡುತ್ತಿರುವ ಸಂಚನ್ನು ಅರಿತು ಇವರ ಸುಳ್ಳು ಭರವಸೆ/ಮಾತುಗಳಿಂದ ಮಾರುಹೋಗದೇ ಬೇರೆ ಸಭೆಗಳಿಗೆ ಒಲೈಸದೇ ಇರಲು ನಮ್ಮ ಕ್ಯಾಥೋಲಿಕ್ ಜನಾಂಗದವರನ್ನು ಎಚ್ಚರಿಸುತ್ತೇವೆ.


Spread the love