ಬೆಳ್ತಂಗಡಿ | ಧರ್ಮಸ್ಥಳ ದೇವಸ್ಥಾನದಲ್ಲಿ ಚಿನ್ನಾಭರಣ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಬಂಧನ
ಬೆಳ್ತಂಗಡಿ: ಧರ್ಮಸ್ಥಳ ದೇವಸ್ಥಾನದ ಒಳಗಡೆ ಆಂಧ್ರಪ್ರದೇಶದ ಭಕ್ತಾದಿಗಳ ಬ್ಯಾಗ್ ನಿಂದ ಚಿನ್ನಾಭರಣ ಕಳ್ಳತನ ಮಾಡಿದ ತಾಯಿ-ಮಗಳನ್ನು ಐದು ತಿಂಗಳ ಬಳಿಕ ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಸಮರ್ಥ್ ಆರ್ ಗಾಣಿಗೇರ ತಂಡ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ವಿವರ :
ಆಂಧ್ರಪ್ರದೇಶ ರಾಜ್ಯದ ನೆಲ್ಲೂರು ನಿವಾಸಿ ಜೆ.ಲತಾ ಅವರು ಕುಟುಂಬ ಸಮೇತ ಮೇ.2 ರಂದು ಮನೆಯಿಂದ ಹೊರಟು ಮೇ.3 ರಂದು ಸಂಜೆ 5 ಗಂಟೆಗೆ ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನಕ್ಕೆ ದರ್ಶನಕ್ಕೆ 5:15 ರಿಂದ 6 ಗಂಟೆ ಸಮಯಕ್ಕೆ ಬ್ಯಾಗ್ ನಲ್ಲಿ 6,79,000 ರೂಪಾಯಿ ಮೌಲ್ಯದ 97 ಗ್ರಾಂ ಚಿನ್ನಾಭರಣವನ್ನು ಇಟ್ಟುಕೊಂಡು ಹೋಗಿದ್ದರು. ಬಳಿಕ ಉಡುಪಿ ಕಡೆ ಕೆಲಸದ ವಿಚಾರವಾಗಿ ಹೋಗುವಾಗ ಬ್ಯಾಗ್ ಒಳಗಡೆ ಇಟ್ಟಿದ ಚಿನ್ನಾಭರಣ ನೋಡಿದಾಗ ಯಾರೋ ಕಳ್ಳರು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಉಡುಪಿಯಿಂದ ವಾಪಸ್ ಧರ್ಮಸ್ಥಳ ಪೊಲೀಸ್ ಠಾಣೆಗೆ ಬಂದು ಮೇ.4 ರಂದು ಜೆ.ಲತಾ ಅವರು ಪ್ರಕರಣ ದಾಖಲಿಸಿದ್ದರು.
ಧರ್ಮಸ್ಥಳ ಪೊಲೀಸರು ಪ್ರಕರಣದ ಬಗ್ಗೆ ಕಳೆದ ಐದು ತಿಂಗಳಿನಿಂದ ವಿವಿಧ ಅಯಾಮಗಳಲ್ಲಿ ತನಿಖೆ ಮಾಡುತ್ತಿರುವಾಗ ಚಿನ್ನಾಭರಣ ಕಳ್ಳತನ ಮಾಡಿದ ಆರೋಪಿಗಳಿಬ್ಬರು ವಿವಿಧ ಕಡೆ ಪ್ರಯಾಣ ಮಾಡಿಕೊಂಡು ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳುತ್ತಿದ್ದರು. ಕೊನೆಗೂ ಆರೋಪಿಗಳನ್ನು ನ.23 ರಂದು ಧರ್ಮಸ್ಥಳದ ದ್ವಾರದ ಬಳಿ ಮತ್ತೆ ಕಳ್ಳತನ ಮಾಡಲು ಬರುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಧಾರವಾಡ ಜಿಲ್ಲೆಯ ಹುಬ್ಬಳಿ ನಗರದ ಸಟಲ್ಮೆಂಟ್ 2 ನೇ ಕ್ರಾಸ್ ಗಂಗಾಧರ ನಗರ ನಿವಾಸಿ ತಾಯಿ ಬಿ.ಬಿ.ಜಾನ್(59) ಮತ್ತು ಮಗಳು ಮಸಾಭಿ @ ಆರತಿ (34) ಎಂಬುವರನ್ನು ಬಂಧಿಸಿದ್ದಾರೆ.
ಇಬ್ಬರು ಆರೋಪಿಗಳನ್ನು ನ.23 ರಂದು ಭಾನುವಾರ ಬೆಳ್ತಂಗಡಿ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ನ.24 ರಂದು ಸೋಮವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಐದು ದಿನ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದಾರೆ. ಕಳ್ಳತನ ಮಾಡಿದ ಸುಮಾರು 5,32,000 ಸಾವಿರ ಮೌಲ್ಯದ 76 ಗ್ರಾಂ ಚಿನ್ನಾಭರಣ ಆರೋಪಿಗಳ ಹುಬ್ಬಳಿ ಮನೆಯಿಂದ ನ.25 ರಂದು ಮಂಗಳವಾರ ಧರ್ಮಸ್ಥಳ ಪೊಲೀಸರು ಮಹಜರು ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳಿಬ್ಬರ ಮೇಲೆ ಈ ಹಿಂದೆ ಹಲವು ಕಳ್ಳತನ ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಇಬ್ಬರು ಕೂಡ ದೇವಾಲಯಗಳನ್ನು ಟಾರ್ಗೆಟ್ ಮಾಡಿ ಭಕ್ತಾಧಿಗಳ ಸೋಗಿನಲ್ಲಿ ಹೋಗಿ ಚಿನ್ನಾಭರಣ ಮತ್ತು ಹಣ ಕಳ್ಳತನ ಮಾಡುವ ಪ್ರವೃತ್ತಿ ಹೊಂದಿದ್ದಾರೆ ಎನ್ನಲಾಗಿದೆ. ಇಬ್ಬರು ಆರೋಪಿಗಳ ವಿಚಾರಣೆ ಹಾಗೂ ಮಹಜರು ಮುಗಿಸಿರುವ ಧರ್ಮಸ್ಥಳ ಪೊಲೀಸರು ನ.26 ರಂದು ಬುಧವಾರ ಸಂಜೆ 4:30 ಕ್ಕೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಇಬ್ಬರಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ.ಸಿ.ಕೆ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಇನ್ಸ್ಪೆಕ್ಟರ್ ಸುಬ್ಬಪುರ್ ಮಠ್ ನೇತೃತ್ವದಲ್ಲಿ ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಸಮರ್ಥ್ ಆರ್ ಗಾಣಿಗೇರ, ಸಿಬ್ಬಂದಿ ರಾಜೇಶ್, ಪ್ರಶಾಂತ್, ಚರಣ್ ರಾಜ್, ಸಂದೀಪ್, ಮಲ್ಲಿಕಾರ್ಜುನ್, ಶಶಿಕುಮಾರ್, ಮಂಜುನಾಥ್ ಪಾಟೀಲ್, ಪ್ರಮೋದಿನಿ, ಸುನಿತಾ, ಸೌಭಾಗ್ಯ, ದೀಪಾ, ಉಷಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.













