ಬೆಳ್ತಂಗಡಿ: ಹೀಲಿಯಂ ಗ್ಯಾಸ್ ಸೋರಿಕೆಯಿಂದ ಬೆಂಕಿ ಅವಘಡ; ಅಂಗಡಿ ಸಂಪೂರ್ಣ ಭಸ್ಮ

Spread the love

ಬೆಳ್ತಂಗಡಿ: ಹೀಲಿಯಂ ಗ್ಯಾಸ್ ಸೋರಿಕೆಯಿಂದ ಬೆಂಕಿ ಅವಘಡ; ಅಂಗಡಿ ಸಂಪೂರ್ಣ ಭಸ್ಮ

ಬೆಳ್ತಂಗಡಿ: ಹೀಲಿಯಂ ಗ್ಯಾಸ್ ಸೋರಿಕೆಯಿಂದ ಉಂಟಾದ ಬೆಂಕಿ ಅವಘಡದಲ್ಲಿ ಅಂಗಡಿ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಶನಿವಾರ ಬೆಳಗ್ಗೆ ಬೆಳ್ತಂಗಡಿ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಸಂತೆಕಟ್ಟೆ ಪ್ರದೇಶದಲ್ಲಿರುವ ಹೇರಾಜೆ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿ ಮುಹಮ್ಮದ್ ಸಮೀಲ್ ಮಾಲಕತ್ವದ KAF ಕ್ರಿಯೇಟಿವ್ ಆರ್ಟ್ & ಕ್ರಾಫ್ಟ್ ಸ್ಟೋರ್ ನಲ್ಲಿ ಫೆ.14ರಂದು ಬೆಳಗ್ಗೆ ಸುಮಾರು 7:30ಕ್ಕೆ ಕಾರ್ಯಕ್ರಮವೊಂದಕ್ಕಾಗಿ ಬಲೂನ್‌ಗಳಿಗೆ ಗ್ಯಾಸ್ ತುಂಬುವ ವೇಳೆ ಹೀಲಿಯಂ ಗ್ಯಾಸ್ ಸೋರಿಕೆಯಾಗಿದ್ದು, ಬಳಿಕ ಸ್ಪೋಟ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಅಂಗಡಿ ಸಂಪೂರ್ಣವಾಗಿ ಸುಟ್ಟು ಹೋಗಿದೆ ಎಂದು ತಿಳಿದುಬಂದಿದೆ.

ಘಟನೆ ಸಂದರ್ಭ ಅಂಗಡಿಯೊಳಗೆ ಇಬ್ಬರು ಕೆಲಸದವರು ಇದ್ದು, ಅವರು ತಕ್ಷಣ ಹೊರಗೆ ಓಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಬೆಂಕಿಯ ಕೆನ್ನಾಲಿಗೆ ಅಕ್ಕಪಕ್ಕದ ಕೆಲವು ಅಂಗಡಿಗಳಿಗೆ ಸಹ ಹಾನಿ ಸಂಭವಿಸಿದೆ. ಗ್ಯಾಸ್ ಸೋರಿಕೆಯಿಂದ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಘಟನೆಯನ್ನು ವೀಕ್ಷಿಸಲು ನೂರಾರು ಮಂದಿ ಜಮಾಯಿಸಿದ್ದರಿಂದ ರಸ್ತೆ ಸಂಚಾರಕ್ಕೆ ಕೆಲಕಾಲ ಅಡಚಣೆ ಉಂಟಾಯಿತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಬೆಳ್ತಂಗಡಿ ಪೊಲೀಸರು ಹಾಗೂ ಸಂಚಾರಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ ಸಂಚಾರವನ್ನು ಸುಗಮಗೊಳಿಸಿದರು.

ಇದೇ ವೇಳೆ ಬೆಂಕಿ ಅವಘಡವನ್ನು ವೀಕ್ಷಿಸುತ್ತಿದ್ದ ಅಂಗಡಿ ಕೆಲಸದಾಕೆಯೊಬ್ಬರು ಮೂರ್ಛೆ ಹೋಗಿದ್ದು, ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments