ಬೈಂದೂರು: ಬೈಕಿಗೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ!: ಪ್ರಕರಣ ದಾಖಲು
ಕುಂದಾಪುರ: ತನ್ನ ಮನೆಯಲ್ಲಿ ಸಾಕಿದ ನಾಯಿಯನ್ನು ಬೈಕಿನ ಹಿಂಬದಿಯಲ್ಲಿ ಸರಳಪಳಿಯಿಂದ ಕಟ್ಟಿ ಎಳೆದೊಯದ್ದ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೋರ್ವರ ಮೇಲೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶನಿವಾರ ಸಂಜೆ ವೇಳೆ ಬೈಂದೂರು ಪೇಟೆಯಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವ್ಯಕ್ತಿಯೋರ್ವ ತನ್ನ ಸಾಕು ನಾಯಿಯನ್ನು ಅತ್ಯಂತ ಕ್ರೂರವಾಗಿ ಬೈಕಿನ ಹಿಂಬದಿಯಲ್ಲಿ ಸರಪಳಿಯಿಂದ ಕಟ್ಟಿ ಸುಮಾರು 2 ಕಿಮೀ ದೂರದ ವರೆಗೆ ಎಳೆದೊಯ್ದಿರುವ ಅಮಾನವೀಯ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವ್ಯಕ್ತಿಯೋರ್ವ ತನ್ನ ಸಾಕು ನಾಯಿಯನ್ನೇ ಬೈಕಿಗೆ ಸರಪಣಿಯಿಂದ ಕಟ್ಟಿ ಎಳೆದೊಯ್ದಿದ್ದಾನೆ. ಈ ದೃಶ್ಯ ಕಂಡು ಸಾರ್ವಜನಿಕರು ನಾಯಿ ಮಾಲೀಕನಿಗೆ ತರಾಟೆಗೆ ತೆಗೆದುಕೊಂಡರು. ಈತನ ವಿರುದ್ಧ ಕಠಿಣ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು,
ವಿಡಿಯೋ ವೈರಲ್ ಆಗುತ್ತಿದ್ದಂತೆ ಘಟನೆಯ ಬಗ್ಗೆ ಬೈಂದೂರು ಪೊಲೀಸರು ಮಾಹಿತಿ ಸಂಗ್ರಹಿಸಿದ್ದು, ನಾಯಿಯನ್ನು ಬೈಕಿಗೆ ಕಟ್ಟಿ ಎಳೆದುಕೊಂಡು ಹೋದ ವ್ಯಕ್ತಿ ಬೈಂದೂರು ತಾಲೂಕು ಪಡುವರಿ ಗ್ರಾಮದ ಸುಬ್ರಹ್ಮಣ್ಯ ಶೇರೆಗಾರ್ ಎಂದು ತಿಳಿದುಬಂದಿದ್ದು ಆತನ ವಿರುದ್ದ ಬೈಂದೂರು ಪೊಲೀಸರು ಸ್ವಯಂಪ್ರೇರಿತಿ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.