ಬ್ಯಾರಿ ನಿಖಾಃ ಹೆಲ್ಪ್ ಲೈನ್ ರೋಗಿಗಳಿಗೆ ವಸ್ತ್ರ ವಿತರಣೆ

Spread the love

ಬ್ಯಾರಿ ನಿಖಾಃ ಹೆಲ್ಪ್ ಲೈನ್ ರೋಗಿಗಳಿಗೆ ವಸ್ತ್ರ ವಿತರಣೆ

ಮಂಗಳೂರು : ನಗರ ವ್ಯಾಪ್ತಿಯಲ್ಲಿ ಬ್ಯಾರಿ ನಿಖಾಃ ಹೆಲ್ಪ್ ಲೈನ್ ತಂಡವು ಅತ್ಯುನ್ನತ ಪರಿಶ್ರಮದೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಜಾತಿ ಮತ ಭೇಧವಿಲ್ಲದೆ ಇಂದು ಲೇಡಿಗೋಷನ್ ಆಸ್ಪತ್ರೆಯಲ್ಲಿರುವ ಬಡ ಒಳ ರೋಗಿಗಳಿಗೆ ಹಾಗೂ ವೆನ್ಲಾಕ್ ಆಸ್ಪತ್ರೆ ಹೊರಭಾಗದಲ್ಲಿ ತಂಗಿರುವ ನಿರ್ಗತಿಕರಿಗೆ ಉಡುವ ವಸ್ತ್ರಗಳನ್ನು ತಂಡದ ವತಿಯಿಂದ ವಿತರಿಸಲಾಯಿತು.

ಈ ತಂಡದ ಸ್ಥಾಪಕ ರಾಶ್ ಬ್ಯಾರಿ ಸುಮಾರು ಒಂದೂವರೆ ವರ್ಷಗಳಿಂದ ಇಂತಹ ಕಾರ್ಯ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು 17 ಸದಸ್ಯರನ್ನೊಳಗೊಂಡ ಈ ತಂಡವು ಇದುವರೆಗೆ ನಗರದ ವೆನ್ಲಾಕ್ ಆಸ್ಪತ್ರೆಯ ಒಳರೋಗಿಗಳಿಗೆ ಈ ಮೊದಲು ಬಟ್ಟೆಗಳನ್ನು ವಿತರಿಸಿದ್ದು ಅದಲ್ಲದೇ ನಗರ ವ್ಯಾಪ್ತಿಯ ಕೇರಿಗಳಲ್ಲಿ ವಾಸವಿರುವ ಸುಮಾರು 500 ಕ್ಕೂ ಮಿಕ್ಕಿದ ಬಡಜನರಿಗೆ ಬಟ್ಟೆಬರೆಗಳನ್ನು ವಿತರಿಸಿದೆ. ಮಂಗಳೂರಿನ ಸಿಟಿ ಸೆಂಟರ್ ಶಾಪಿಂಗ್ ಮಾಲ್ ನಲ್ಲಿ ಕ್ಲೋತ್ ಬಾಕ್ಸನ್ನು ಸ್ಥಾಪಿಸುವುದರ ಮುಖಾಂತರ ಹಾಗೂ ಕೊಡುಗೈ ದಾನಿಗಳ ಸಹಕಾರದೊಂದಿಗೆ ಹೊಸ ಹಾಗೂ ಉತ್ತಮ ಬಟ್ಟೆ ಬರೆಗಳನ್ನು ಸಂಗ್ರಹಿಸುತ್ತಿರುವ ತಂಡವು ನವ ವಿವಾಹಿತರಾಗುವ ಆರ್ಥಿಕವಾಗಿ ಹಿಂದುಳಿದ ತೀರಾ ಬಡ ಕುಟುಂಬದ ದಂಪತಿಗಳಿಗೂ ಮದುವೆ ವಸ್ತ್ರಗಳನ್ನು ನೀಡುತ್ತಾ ಬಂದಿದೆ. ಮಾತ್ರವಲ್ಲದೇ ವಧು ವರರನ್ನು ಸಂಪರ್ಕಿಸುವ ಕೊಂಡಿಯಾಗಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಕಾರ್ಯ ನಿರ್ವಹಿಸುತ್ತಿದ್ದು ವಾಟ್ಸಾಪ್ ಗ್ರೂಪ್ ಮುಖಾಂತರ ಸುಮಾರು 120 ನವ ವಧುವಿಗೆ ಹಾಗೂ ಸರಿಸುಮಾರು 30 ವಿಧವೆಯರಿಗೆ ವರದಕ್ಷಿಣೆರಹಿತ ವೈವಾಹಿಕ ಜೀವನಕ್ಕೆ ಉತ್ತಮ ವರರನ್ನು ಹುಡುಕಿಕೊಡುವಲ್ಲಿ ತಂಡವು ಸಫಲವಾಗಿದೆ. ತಂಡವು ನಗರದ ಇನ್ನಷ್ಟು ಭಾಗಗಳಲ್ಲಿ ಕ್ಲೋತ್ ಬಾಕ್ಸನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದ್ದು ಇನ್ನಷ್ಟು ಕಾರ್ಯಚಟುವಟಿಕೆಗಳಲ್ಲಿ ಜಿಲ್ಲೆಯ ಹೃದಯವಂತ ನಾಗರಿಕರು ಬ್ಯಾರಿ ನಿಖಾಃ ಹೆಲ್ಪ್ ಲೈನ್ ತಂಡದ ಜೊತೆ ಕೈ ಜೋಡಿಸಬೇಕಾಗಿ ಅಪೇಕ್ಷಿಸುತ್ತಾ ಬಡ ಜನರು ಇದರ ಸದುಪಯೋಗವನ್ನು ಪಡೆಯಬೇಕಾಗಿ ತಂಡದ ಕಾರ್ಯದರ್ಶಿ ಮಜೀದ್ ಬಿಕರ್ನಕಟ್ಟೆ ವಿನಂತಿಸಿದರು. ಕಾರ್ಯಕ್ರಮದಲ್ಲಿ ಏರಿಯಾ ಕಾರ್ಯದರ್ಶಿಗಳಾದ
ಝೈನಿ ಬೊಳ್ಳಾಯಿ, ಸುಹೈಲ್, ಆರಿಪ್,ಪೈರೊಝ್,ಮಂಗಳೂರು ಉಪಸ್ಥಿತರಿದ್ದರು.


Spread the love