ಭಟ್ಕಳ : ದೇಶಪಾಂಡೆ ಭೂ ಕಬಳಿಕೆ ದಾಖಲೆ ನೀಡಿದರೆ ರಾಜಿನಾಮೆ : ಟಿ. ಈಶ್ವರ

Spread the love

ಭಟ್ಕಳ: ಸಚಿವ ಆರ್. ವಿ. ದೇಶಪಾಂಡೆಯವರು ಭೂ ಕಬಳಿಕೆ ಮಾಡಿದ್ದಾರೆ ಎನ್ನುವುದಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಯಾವುದಾದರೂ ದಾಖಲೆ ಬಿಡುಗಡೆ ಮಾಡಿದರೆ ಆ ಕ್ಷಣವೇ ನನ್ನ ಹುದ್ದೆಗೆ ರಾಜಿನಾಮೆ ನೀಡುವುದಾಗಿ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಟಿ. ಈಶ್ವರ ಹೇಳಿದ್ದಾರೆ.

ಅವರು ತಾಲೂಕಿನಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ದೇಶಪಾಂಡೆಯವರು ನಿನ್ನೆ, ಮೊನ್ನೆ ಮಂತ್ರಿಯಾದವರಲ್ಲ ಎಂದ ಅವರು, ರಾಜ್ಯದ ಜನತೆಗೆ ಅವರ ಬಗ್ಗೆ ಚೆನ್ನಾಗಿ ತಿಳಿದಿದೆ. ದೇಶಪಾಂಡೆಯವರ ವಿರುದ್ದ ದಾಖಲೆ ಒದಗಿಸುವಲ್ಲಿ ವಿಫಲರಾದಲ್ಲಿ ವಿನಾ ಕಾರಣ ಆರೋಪ ಮಾಡಿರುವ ಕುಮಾರಸ್ವಾಮಿಯವರು ಬೇಷರತ್ ಕ್ಷಮೆ ಯಾಚಿಸಬೇಕು. ಇಲ್ಲದಿದಲ್ಲಿ ಅವರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಕಾಂಗ್ರೆಸ್ ಸರ್ಕಾರದ ಆರೋಪ ಮುಕ್ತವಾಗಿ ಆಡಳಿತ ನಡೆಸುತ್ತಿದೆ. ಸರಕಾರದ ಬಗ್ಗೆ ಆರೋಪವಿಲ್ಲದ ಕಾರಣ ಇಂತಹ ಕ್ಷುಲ್ಲಕ ಆರೋಪ ಮಾಡಿ ತಮ್ಮ ಬಾಯಿ ಚಪಲ ತೀರಿಸಿಕೊಳ್ಳುತ್ತಿದ್ದಾರೆ. ಆಡಳಿತ ಜ್ಞಾನ ಇಲ್ಲದ ಕುಮಾರ ಸ್ವಾಮಿ ಹಾಗೂ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಹುದ್ದೆಯನ್ನಲಂಕರಿಸಿ ರಾಜ್ಯವನ್ನು ಲೂಟಿಗೈದರೇ ಹೊರತು ಯಾವುದೇ ಸಾಧನೆ ಮಾಡಿಲ್ಲ ಎಂದ ಅವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರೈತ ಚೈತನ್ಯ ಯಾತ್ರೆ ನಡೆಸುತ್ತಿದ್ದು ಅದು ಯಡಿಯೂರಪ್ಪ ಶೋಭಕ್ಕಾ ಚೈತನ್ಯ ಯಾತ್ರೆಯಾಗಿದೆ ಎಂದು ಲೇವಡಿ ಮಾಡಿದರು.

ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲನಾಯ್ಕ, ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ, ಜಿಲ್ಲಾ ಪಂಚಾಯತ ಸದಸ್ಯರಾದ ಅಬ್ದುರ್ ರಹೀಂ, ಜಯಶ್ರೀ ಮೊಗೇರ, ಕೆಪಿಸಿಸಿ ಜಿಲ್ಲಾ ಸಮಿತಿ ಸದಸ್ಯ ವಿನೋದ ನಾಯ್ಕ, ಅರಣ್ಯ ಹೋರಾಟ ಸಮಿತಿ ಅಧ್ಯಕ್ಷ ರಾಮಾ ಮೊಗೇರ, ಗಣಪತಿ ನಾಯ್ಕ, ಶೈಲೇಂಧ್ರ ಗೌಡ ಮುಂತಾದವರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು


Spread the love