ಭದ್ರಾವತಿಯಲ್ಲಿ ಪಾಕಿಸ್ತಾನ ಪರ ಘೋಷಣೆ: ಸಂಸದ ಬಿ.ವೈ.ರಾಘವೇಂದ್ರ ಖಂಡನೆ
- ಕಾಂಗ್ರೆಸ್ ಸರ್ಕಾರದ ಮಿತಿ ಮೀರಿದ ತುಷ್ಟಿಕರಣ ರಾಜಕಾರಣಕ್ಕೆ ಹಿಡಿದ ಕೈಗನ್ನಡಿ. ದೇಶವಿರೋಧಿ, ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ರಾಜ್ಯ ಸರ್ಕಾರ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು: ಆಗ್ರಹ
ಬೈಂದೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕರ್ನಾಟಕದಲ್ಲಿ ಸ್ವಚ್ಛಂದವಾಗಿ ನಡೆಯುತ್ತಿರುವ ದೇಶ ವಿರೋಧಿ ಚಟುವಟಿಕೆಗಳು ಅತ್ಯಂತ ಆತಂಕಕಾರಿಯಾಗಿದೆ. ಭದ್ರಾವತಿಯಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಿಡಿಗೇಡಿಗಳು, ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಖಂಡನೀಯ. ಕಿಡಿಗೇಡಿಗಳ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಕೊಳ್ಳಬೇಕು. ಈ ಬೆಳವಣಿಗೆ ಕಾಂಗ್ರೆಸ್ ಸರ್ಕಾರದ ತುಷ್ಟಿಕರಣ ರಾಜಕೀಯಕ್ಕೆ ಮತ್ತೊಂದು ಕನ್ನಡಿ ಹಿಡಿದಿದೆ ಎಂದು ಶಿವಮೊಗ್ಗ ಲೋಕಸಭಾ ಸಂಸದ ಬಿವೈ ರಾಘವೇಂದ್ರ ಹೇಳಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇದಕ್ಕೆ ಕುಮ್ಮಕ್ಕು ನೀಡುವಂತೆ, ಭದ್ರಾವತಿ ಕಾಂಗ್ರೆಸ್ ಶಾಸಕ ಸಂಗಮೇಶ್ವರ ಅವರು ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುವ ಆಸೆ ಇದೆ ಎಂದು ಹೇಳಿಕೆ ನೀಡಿರುವುದು ಈ ಕಾಂಗ್ರೆಸ್ ಸರ್ಕಾರದ ಅತಿಯಾದ ಓಲೈಕೆಯ ಅಸಲಿ ಮುಖವನ್ನು ಬಯಲು ಮಾಡಿದೆ. ಒಂದು ಕಡೆ, ನಮ್ಮ ಸೈನಿಕರು “ಆಪರೇಷನ್ ಸಿಂಧೂರ್” ಕಾರ್ಯಾಚರಣೆ ಮೂಲಕ ಶತ್ರು ರಾಷ್ಟ್ರದ ವಿರುದ್ಧ ಸಮರ ನಡೆಸುತ್ತಿದ್ದರೆ, ಮತ್ತೊಂದು ಕಡೆ ನಮ್ಮ ರಾಜ್ಯದ ಒಳಗೆಯೇ ಕೆಲವು ಮತಾಂಧ ಶಕ್ತಿಗಳು ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗುತ್ತಾರೆ. ಇದನ್ನು ನೋಡಿಯೂ ಈ ಸರ್ಕಾರ ಸುಮ್ಮನೆ ಕಣ್ಮುಚ್ಚಿ ಕುಳಿತಿದೆ ಎಂದರೆ ಇದಕ್ಕಿಂತಲೂ ನಾಚಿಕೆಗೇಡಿನ ಸಂಗತಿ ಇನ್ನೊಂದಿಲ್ಲ. ಕೇವಲ ತಮ್ಮ ತುಷ್ಟಿಕರಣ ರಾಜಕೀಯಕ್ಕಾಗಿ, ದೇಶವಿರೋಧಿ ಚಟುವಟಿಕೆಗಳನ್ನು, ದುಷ್ಕರ್ಮಿಗಳನ್ನು ಮಟ್ಟ ಹಾಕದೆ ರಾಜ್ಯ ಸರ್ಕಾರವೇ ಪೋಷಿಸುತ್ತಿರುವುದು ನಿಜಕ್ಕೂ ದುರಂತ.
ಈ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ, ಕರ್ನಾಟಕದಲ್ಲಿ ದೇಶ ವಿರೋಧಿ ಚಟುವಟಿಕೆಗಳು, ಅರಾಜಕತೆ, ಕಾನೂನುಬಾಹಿರ ಚಟುವಟಿಕೆಗಳು ಮತ್ತು ದುಷ್ಕರ್ಮಿಗಳ ಅಟ್ಟಹಾಸದಲ್ಲಿ ಮಾತ್ರ ಹೆಚ್ಚಳವನ್ನು ಕಂಡಿದೆ. ಈ ಸರ್ಕಾರ ತಮ್ಮ ಪರವಾಗಿದೆ ಎನ್ನುವ ಧೈರ್ಯ ಈ ದುಷ್ಕರ್ಮಿಗಳಿಗೆ ಇರುವುದರಿಂದಲೇ ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿದೆ.
ಇಂತಹ ಸಾಕಷ್ಟು ಘಟನೆಗಳು ಮೇಲಿಂದ ಮೇಲೆ ಪುನರಾವರ್ತನೆಯಾಗುತ್ತಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತ್ರ, “ಅವರು ಶಾಂತಿ ಪ್ರಿಯರು” ಎಂದು ಹೇಳಿಕೆ ನೀಡುತ್ತಾರೆ. ಆ ಮೂಲಕ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿದವರಿಗೆ ಅವರು ಕ್ಲೀನ್ ಚಿಟ್ ನೀಡುತ್ತಿದ್ದಾರೆ. ಇದು ಮತಾಂಧರನ್ನು ಮತ್ತಷ್ಟು ಪ್ರಚೋದಿಸುತ್ತದೆ ಮತ್ತು ಅಂತಹ ಕೃತ್ಯಗಳಿಗೆ ರಾಜ್ಯ ಸರ್ಕಾರದ ಪರೋಕ್ಷ ಬೆಂಬಲವಿದೆ ಎಂಬ ಸಂದೇಶವನ್ನು ರವಾನಿಸುತ್ತದೆ ಎಂಬ ಅರಿವು ನಮ್ಮ ಮುಖ್ಯಮಂತ್ರಿಗಳಿಗೆ ಇಲ್ಲವೇ? ಇದಕ್ಕೆ ಸಾಕ್ಷಿಯೇ ನಿನ್ನೆ ಭದ್ರಾವತಿಯಲ್ಲಿ ನಡೆದಿರುವ ಪಾಕಿಸ್ತಾನ-ಪರ ಘೋಷಣೆಯ ದುರ್ಘಟನೆ!
ತಮ್ಮ ಓಟ್ ಬ್ಯಾಂಕ್ ಎನ್ನುವ ಕಾರಣಕ್ಕೆ ಒಂದು ಸಮುದಾಯವನ್ನು ರಾಜ್ಯ ಸರ್ಕಾರ ಅತಿಯಾಗಿ ಓಲೈಸುತ್ತಿದ್ದು, ಆ ಮೂಲಕ ಸಮಾಜಘಾತುಕ ಶಕ್ತಿಗಳಿಗೆ ನೀಡುತ್ತಿರುವ ಬೆಂಬಲ ಮತ್ತು ಹಿಂದೂ ವಿರೋಧಿ ನಿಲುವುಗಳು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಕಾಂಗ್ರೆಸ್ ಸರ್ಕಾರದ ಕೀಳು ತುಷ್ಟಿಕರಣ ರಾಜಕಾರಣವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಸರ್ಕಾರ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು, ಪೊಲೀಸ್ ಇಲಾಖೆಯು ಯಾವುದೇ ಒತ್ತಡಕ್ಕೆ ಮಣಿಯಬಾರದು. ಪರಿಸ್ಥಿತಿ ಕೈಮೀರುವ ಮುನ್ನವೇ, ಭದ್ರಾವತಿಯಲ್ಲಿ ನಡೆದಿರುವ ದೇಶ-ವಿರೋಧಿ ಚಟುವಟಿಕೆಗಳಿಗೆ ಕಾರಣರಾದವರ ವಿರುದ್ಧ ಕೂಡಲೇ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಪತ್ರಿಕಾ ಹೇಳಿಕೆ ಮೂಲಕ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.