ಮಂಗಳೂರಿನ ಅಭಿವೃದ್ಧಿಯಲ್ಲಿ ಕ್ರೆಡಾಯ್ ಪಾತ್ರ ಮಹತ್ವದ್ದು : ಶಾಸಕ ಜೆ.ಆರ್.ಲೋಬೊ

Spread the love

ಮಂಗಳೂರಿನ ಅಭಿವೃದ್ಧಿಯಲ್ಲಿ ಕ್ರೆಡಾಯ್ ಪಾತ್ರ ಮಹತ್ವದ್ದು : ಶಾಸಕ ಜೆ.ಆರ್.ಲೋಬೊ

ಮಂಗಳೂರು: ಶೈಕ್ಷಣಿಕವಾಗಿ, ಆರ್ಥಿಕವಾಗಿ, ಕೈಗಾರಿಕೆಗಳ ಮೂಲಕ ನಗರದ ಬೆಳವಣಿಗೆಯನ್ನು ರೂಪುಗೊಳಿಸಲು ಕ್ರೆಡಾಯ್ ಕೂಡಾ ಗಮನ ಹರಿಸಿದೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.

ಅವರು ಕ್ರೆಡಾಯ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಿ.ಬಿ.ಮೆಹ್ತಾ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಬಿಲ್ಡರ್ಸ್ ಎಂದ ತಕ್ಷಣ ಅವರು ದೊಡ್ಡವರು ಎನ್ನುವ ಅಭಿಪ್ರಾಯ ಜನಸಾಮಾನ್ಯರಲ್ಲಿದೆ. ಇದು ತಪ್ಪು. ಈ ತಪ್ಪು ತಿಳುವಳಿಕೆ ನಿವಾರಣೆಯಾಗಬೇಕಾದರೆ ಸಾಮಾನ್ಯ ಜನರಿಗೆ ತಿಳುವಳಿಕೆ ಮೂಡಿಸುವ ಕೆಲಸವಾಗಬೇಕಾಗಿದೆ. ಇದನ್ನು ಕ್ರೆಡಾಯ್ ಸಂಸ್ಥೆ ಅಥವಾ ಸರ್ಕಾರ ಮಾಡಬೇಕಾಗಿದೆ ಎಂದರು.

ನಗರದ ಅಭಿವೃದ್ಧಿಗೆ ನಮ್ಮ ಕೊಡುಗೆ ಏನು, ಬಂಡಾವಾಳ ಹರಿದು ಬರುವಂತೆ ಏನನ್ನು ಮಾಡಿದ್ದೇವೆ ಎನ್ನುವ ಬಗ್ಗೆಯೂ ಚಿಂತನೆ ಮಾಡಬೇಕು. ನಗರಗಳ ಬೆಳವಣಿಗೆ, ಮೂಲಭೂತ ಸೌಕರ್ಯಗಳು ತೋರಿಕೆಗೆ ನಗರದ ಜನಸಂಖ್ಯೆಯ ಬಗ್ಗೆ ಬೆರಗು ಹುಟ್ಟಿಸುತ್ತದೆ. ಈ ಕೆಲಸವನ್ನು ಕ್ರೆಡಾಯ್ ಮಾಡಿದೆ. ಮಂಗಳೂರಲ್ಲಿ ಬೆಳವಣಿಗೆ ಆಗಿರುವುದರ ಮೂಲಕವೇ ಜನಸಂಖ್ಯೆಯನ್ನು ಊಹಿಸಲು ತೊಡಗಿದ್ದಾರೆ. ಇಲ್ಲಿಯ ಜನಸಂಖ್ಯೆ 20 ಲಕ್ಷವನ್ನು ದಾಟಿರಬಹುದು ಎನ್ನಲಾಗುತ್ತಿದೆ. ವಾಸ್ತವವಾಗಿ ಜನಸಂಖ್ಯೆ 5 ಲಕ್ಷ ಮಾತ್ರ ಆಗಿದೆ ಎಂದು ವಿವರಿಸಿದರು.

ಕಳೆದ ನಾಲ್ಕು ವರ್ಷಗಳಲ್ಲಿ ನಾನು ಶಾಸಕನಾಗಿ ಕೆಲಸ ನಿರ್ವಹಿಸುವ ಕಾಲದಲ್ಲಿ ಎಷ್ಟೋ ಸಂದರ್ಭಗಳಲ್ಲಿ ಕ್ರೆಡಾಯ್ ನೆರವು ನೀಡಿದೆ. ಇಲ್ಲಿಯ ಭೂಮೌಲ್ಯವನ್ನು ಹಾಕುವ ವಿಧಾನದಲ್ಲಿ ಆಧುನಿಕ ಕ್ರಮಗಳನ್ನು ಅನುಸರಿಸಿಲ್ಲ ಎನ್ನುವ ನೋವು ಕಾಡುತ್ತಿದೆ. ಇದು ಸಹಜವೂ ಹೌದು. ಈ ಸಮಸ್ಯೆಯನ್ನು ಬಗೆಹರಿಸಲು ನಾನು ಪರಿಣಾಮಕಾರಿಯಾಗಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.

ಈ ಸಂದರ್ಭದಲ್ಲಿ ಮೇಯರ್ ಕವಿತಾ ಸನಿಲ್, ಮಂಗಳೂರು ನಗರ ಬಿಜೆಪಿ ಅಧ್ಯಕ್ಷ ಡಿ.ವೇದವ್ಯಾಸ ಕಾಮತ್, ಕ್ರೆಡಾಯ್ ಉಪಾಧ್ಯಕ್ಷ ಸಿರಾಜ್ ಅಹಮ್ಮದ್, ಕಾರ್ಯದರ್ಶಿ ನವೀನ್ ಕಾರ್ಡೋಜ ಉಪಸ್ಥಿತರಿದ್ದರು. ಕಾರ್ಯಕಾರಿಣಿ ಸದಸ್ಯ ಕೆ. ಶ್ರೀನಾಥ್ ಹೆಬ್ಬಾರ್ ವಂದಿಸಿದರು.


Spread the love