ಮಂಗಳೂರುನಲ್ಲಿ ಜನಿಸಿ ಭಾರತೀಯ ಕ್ರೀಡಾಂಗಣ ಬೆಳಗಿದ ಅಂತರಾಷ್ಟ್ರೀಯ ಖ್ಯಾತಿಯ ಕ್ರೀಡಾಪಟು ಆರ್.ಎನ್ ಉಚ್ಚಿಲ್ 

Spread the love

ಮಂಗಳೂರುನಲ್ಲಿ ಜನಿಸಿ ಭಾರತೀಯ ಕ್ರೀಡಾಂಗಣ ಬೆಳಗಿದ ಅಂತರಾಷ್ಟ್ರೀಯ ಖ್ಯಾತಿಯ ಕ್ರೀಡಾಪಟು ಆರ್.ಎನ್ ಉಚ್ಚಿಲ್ 

ಮುಂಬಯಿ: ಕರ್ನಾಟಕದ ಮಂಗಳೂರುನಲ್ಲಿ 1916ರ ಅಕ್ಟೋಬರ್ 6ರಂದು ಜನಿಸಿದ ಆರ್.ಎನ್.ಉಚ್ಚಿಲ್ ಕಳೆದ ಶತಮಾನದ ಮೂವತ್ತು ನಲ್ವತ್ತರ ದಶಕದಲ್ಲಿ ಭಾರತದ ಅಥ್ಲೆಟಿಕ್ಸ್ ರಂಗದಲ್ಲಿ ಮಿಂಚಿದ ತಾರೆ. ಮುಂಬಯಿನ  ಅಥ್ಲೀಟ್. ಕ್ರೀಡಾರಂಗದ ಮಿನುಗುತಾರೆಯಾಗಿ ರಾಷ್ಟ್ರಕಂಡ  ಅಪ್ರತಿಮ ಓಟಗಾರನ ಜನ್ಮಶತಮಾನೋತ್ಸವ ವರ್ಷವಿದು. ಹದಿನಾಲ್ಕು ವರ್ಷಗಳ ಕಾಲ ಮುಂಬಯಿ ಕ್ರೀಡಾರಂಗದ ಮುಂಚೂಣಿಯಲ್ಲಿದ್ದು, ಅದ್ಭುತ ಸಾಮಥ್ರ್ಯವನ್ನು ಮೆರೆದವರವರು.

ಆರ್.ಎನ್.ಉಚ್ಚಿಲ್ ನೀರಿನಲ್ಲಿ ಈಜುವ ಮೀನಿನಷ್ಟೇ ಸಹಜವಾಗಿ ಅಥ್ಲೆಟಿಕ್ ಕ್ಷೇತ್ರವನ್ನು ಹೊಕ್ಕವರು. ಶಾಲಾ, ಕಾಲೇಜ್ ದಿನಗಳಲ್ಲೇ ಓಟದ ಸ್ಪರ್ಧೆಗಳಲ್ಲಿ ಮಿಂಚಿದರೂ, ಅವರು ಪ್ರಸಿಧ್ಧಿಗೆ ಬಂದುದು, 1938ರಲ್ಲಿ ತಾನು ಮುಂಬೈಯಲ್ಲಿ ಭಾಗವಹಿಸಿದ ಮುಕ್ತ ಸ್ಪರ್ಧೆಯೊಂದರಲ್ಲಿ. ಅಂದಿನಿಂದ ಸದಾ ಪತ್ರಿಕೆಗಳ ತಲೆಬರಹದಲ್ಲಿ ಅವರ ಹೆಸರು ಕಾಣಿಸಿ ಕೊಳ್ಳುತ್ತಿತ್ತು.1940 ಅವರ ಕ್ರೀಡಾ ಜೀವನದ ಪರ್ವಕಾಲ. ತಮಗೆ ಪ್ರಿಯವಾದ 800 ಮೀಟರ್ ಓಟದ ಸ್ಪರ್ಧೆಯಲ್ಲಿ 2 ನಿಮಿಷ, 1 ಸೆಕೆಂಡಿನ ವಿಜಯದ ದಾಖಲೆಯನ್ನು ನಿರ್ಮಿಸಿ ಬೆಳಗಿದ ಉಚ್ಚಿಲ್‍ರ ಸಾಧನೆ, ಎಂಟು ವರ್ಷಗಳುದ್ದಕ್ಕೂ ಅಜೇಯವಾಗಿತ್ತು. ಅದನ್ನು ಮತ್ತೆ ಮುರಿದವರು, ಅವರ ಪ್ರಿಯ ಶಿಷ್ಯನೇ ಆದ ಬೆನ್ಸನ್ ಪ್ರೌಡ್‍ಫೂಟ್ ಅವರು.

1945ರಲ್ಲಿ ಓಟದ ಸ್ಪರ್ಧೆಯಲ್ಲಿ ಉಚ್ಚಿಲ್‍ರ ಸಾಧನೆ ಹಾಗೂ ಯಶಸ್ಸು, ಅವರ ಪಾಲಿಗೆ ಶಿಖರಪ್ರಾಯವಾಗಿ ತ್ತು. ಆ ಸ್ಮರಣೀಯ ವರ್ಷ, 400 ಮೀಟರ್ ಓಟವನ್ನು 20.2 ಸೆಕೆಂಡ್‍ಗಳಲ್ಲಿ ಕ್ರಮಿಸಿ ಅವರು ಸ್ಥಾಪಿಸಿದ ದಾಖಲೆ, ಸಾಧಿಸಿದ ಯಶಸ್ಸು, ಹಲವು ವರ್ಷಗಳ ವರೆಗೆ ಅಬಾಧಿತವಾಗಿತ್ತು. 1938ರಿಂದ 1951ರ ವರೆಗೆ ಬಾಂಬೆ ತಂಡದಲ್ಲಿ ಸಕ್ರಿಯರಾಗಿದ್ದ ಆರ್‍ಎನ್‍ಯು 1942ರಲ್ಲಿ ತಂಡದ ಕ್ಯಾಪ್ಟನ್ ಆಗಿ ಚುನಾಯಿತರಾದಂತೆ, 1951ರಲ್ಲಿ ಲೂಧಿಯಾನಾದಲ್ಲಿ ನಡೆದ ಆಲ್-ಇಂಡಿಯಾ ಗೇಮ್ಸ್‍ನಲ್ಲೂ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಿದರು. ಹಾಗೂ ಸಿಲೋನ್ ಮತ್ತು ಬೆಂಗಳೂರಲ್ಲಿ ನಡೆದ ಇಂಡೋ-ಸಿಲೋನ್ ಮೀಟ್‍ನಲ್ಲಿ ಭಾರತವನ್ನು ಪ್ರತಿನಿಧಿಸಿದರು.

ಅಥ್ಲೆಟಿಕ್ಸ್ ಬಗ್ಗೆ ಬಹಳಷ್ಟು ಅಧ್ಯಯನಗೈದು ಎಲ್ಲವನ್ನೂ ಅರಿತಿದ್ದ ಉಚ್ಚಿಲ್‍ರನ್ನು ಅಥ್ಲೆಟಿಕ್ಸ್‍ನ ವಾಕಿಂಗ್ ಎನ್ಸೈಕ್ಲೊಪೀಡಿಯಾ ಎಂದೇ ಹೇಳಲಾಗುತ್ತಿತ್ತು. ನಗರದ ಸಮಕಾಲೀನ ಅಥ್ಲೀಟ್ಸ್‍ಗಳೆಲ್ಲ ಅವರಿಂದ ಪಡೆವ ಸಲಹೆ, ಸೂಚನೆಗಳಿಗಾಗಿ ಅವರಿಗೆ ಆಭಾರಿ  ಆಗಿದ್ದರು. ಎಲ್ಲರೂ ಈ ಗುರುವಿನಿಂದ ಕಲಿತವರೇ ಆಗಿದ್ದರು. ಅವರ ಉಚಿತ ಸಲಹೆ ಪಡೆಯಲು ಸಾಧನೆಯ ಹಾದಿಯಲ್ಲಿದ್ದ ಕ್ರೀಡಾಳುಗಳು ಅಪಾರ ಸಂಖ್ಯೆಯಲ್ಲಿ ಸೇರುತ್ತಿದ್ದರು.

ಗ್ರಾಂಟ್ ಮೆಡಿಕಲ್ ಕಾಲೇಜ್ ಮತ್ತು ಸಿಧ್ಧಾರ್ಥ ಕಾಲೇಜ್ ವಿದ್ಯಾರ್ಥಿಗಳಿಗೆ ಕೋಚ್ ಆಗಿ ಹೋಗುವ ಪ್ರಸ್ತಾಪವನ್ನು ಸಂತೋಷದಿಂದಲೇ ಸ್ವೀಕರಿಸಿದ ಆರ್.ಎನ್.ಉಚ್ಚಿಲ್ ಅವರು, ಬಾಂಬೆ ಹುಡುಗ, ಹುಡುಗಿಯರು ದೇಶಕ್ಕಾಗಿ ಏನಾದರೂ ಮಾಡುವಂತಾಗಲೆಂದೇ ಬಯಸಿದ್ದರು. ವಿಜಯದೆಡೆಗೆ ಸಾಗುವುದನ್ನು ಕ್ರೀಡಾಕಾಂಕ್ಷಿಗಳಿಗೆ ಕಲಿಸಿದಂತೆಯೇ, ಸೋಲುಗೆಲುವುಗಳನ್ನು ಸಮಾನವಾಗಿ ಕಾಣುವ ಮಾರ್ಗವನ್ನೂ ಬೋಧಿಸಿದವರವರು. ಯೂನಿವರ್ಸಿಟಿ ತಂಡವನ್ನು ತರಬೇತುಗೊಳಿಸುವ ಹೊಣೆಯೂ ಅವರ ಮೇಲಿತ್ತು.

ಅಥ್ಲೆಟಿಕ್ ಕೂಟಗಳಲೆಲ್ಲ ಸ್ಪರ್ಧಾಳುವಾಗಿಯೋ, ಇಲ್ಲಾ, ಕಾರ್ಯಕರ್ತರಾಗಿಯೋ ಕಾಣಿಸಿ ಕೊಳ್ಳುತ್ತಿದ್ದವರು, ಆರ್.ಎನ್.ಉಚ್ಚಿಲ್ ಅವರು. ಅಥ್ಲೆಟಿಕ್ಸ್‍ನಲ್ಲಿ ತಾನರಿತಿದ್ದುದನ್ನು ಇತರರಿಗೆ ಕಲಿಸುವುದು ಅವರ ನೆಚ್ಚಿನ ಕಾಯಕವಾಗಿತ್ತು. ಈ ದಿಸೆಯಲ್ಲಿ ಅವರ ಜ್ಞಾನವೂ ಅಪಾರವಾಗಿತ್ತು. ಓಟದ ಶೈಲಿ, ತಂತ್ರಗಳಲ್ಲಿ ಪಾರಂಗತರಾದ ಅವರಿಗೆ, ಇದುವರೆಗೆ ಲೋಕದಲ್ಲಿ ಸ್ಥಾಪಿತವಾದ ಎಲ್ಲ ದಾಖಲೆಗಳೂ ಕಂಠಸ್ಥವಿದ್ದುವು.

ಒಪೆರಾ ಹೌಸ್‍ನ ಝವೇರಿ ನಿವಾಸದಲ್ಲಿ ಪತ್ನಿ ಶೀಲಾ ಹಾಗೂ ಮೂರು ವರ್ಷದ ಎಳೆಯ ಮಗು ರಾಜನೊಡನೆ ಸುಖ ಸಂಸಾರ ನಡೆಸಿದ್ದ ಆರ್.ಎನ್.ಉಚ್ಚಿಲ್‍ರ ಯಶಸ್ವೀ ಜೀವನ ಮೂವತ್ತೈದರ ಎಳೆ ಹರೆಯದಲ್ಲೇ ಕೊನೆಗಾಣುವುದೆಂದು ಯಾರು ಅರಿತಿದ್ದರು? ಹಿಂದಿನ ದಿನ ಬ್ರೆಬೋರ್ನ್ ಸ್ಟೇಡಿಯಮ್‍ನಲ್ಲಿ ಟಾಟಾ ಸ್ಪೋಟ್ರ್ಸ್ ಕ್ಲಬ್‍ನ ವಾರ್ಷಿಕ ಅಥ್ಲೆಟಿಕ್ ಮೀಟ್‍ನಲ್ಲಿ ಪ್ರೇಕ್ಷಕರಾಗಿ ಅವರಿದ್ದರು.

ವರ್ಷದ ಹಿಂದೆ ಅವರನ್ನು ತೀವ್ರವಾಗಿ ಬಾಧಿಸಿದ ಟೈಫಾಯಿಡ್, ಅವರನ್ನು ಹಣ್ಣಾಗಿಸಿತ್ತು. ಆದರೂ ಜೀವನದಲ್ಲಿನ ಎಂದಿನ ಉತ್ಸಾಹವನ್ನು ಅವರು ಕಳಕೊಂಡಿರಲಿಲ್ಲ. ಬಾಂಬೆ ಪ್ರೆಸಿಡೆನ್ಸಿ ಒಲಿಂಪಿಕ್ ಅಸೋಸಿಯೇಶನ್, ಒಲಿಂಪಿಕ್ ಗೇಮ್ಸ್ ಏರ್ಪಡಿಸುವಲ್ಲಿ ವಿಫಲವಾದಾಗ, ಸಹವರ್ತಿಗಳೊಡನೆ ಒಲಿಂಪಿಕ್ ಅಥ್ಲೀಟ್ಸ್ ಯೂನಿಯನ್ ಸ್ಥಾಪಿಸಿ, ಒಲಿಂಪಿಕ್ ಯೂನಿಯನ್‍ನ ಅಥ್ಲೆಟಿಕ್ ಮೀಟ್ ಹಮ್ಮಿಕೊಂಡ ಉತ್ಸಾಹಿ.

1952 ಮಾರ್ಚ್ 9ರ ರವಿವಾರ ಬೆಳಿಗ್ಗೆ, ಉಚ್ಚಿಲ್ ಅವರಿಗೆ ಎದೆ ನೋವು ಕಾಣಿಸಿ ಕೊಂಡಿತು. ಅದಕ್ಕೆ ಮಹತ್ವವೇನೂ ನೀಡದೆ, ಎಂದಿನಂತೆ ಕಾರ್ಯಮಗ್ನರಾದರು. ಮಧ್ಯಾಹ್ನ ಊಟದ ಬಳಿಕ, ನೆರೆಯವರೊಡನೆ ಕ್ಯಾರಮ್ ಆಟದ ಸಂತಸವನ್ನು ಅನುಭವಿಸುತ್ತಿದ್ದವರು, ಇದ್ದಕ್ಕಿದ್ದಂತೆ ಅಸ್ವಸ್ಥರಾದರು. ಮಲಗಿದರೆ ಸರಿ ಹೋಗಬಹುದು, ಎಂದಂದು ಕೊಂಡರೂ, ನೋವು ಏರಿ, ಪ್ರಜ್ಞಾಹೀನರಾದರು. ಕುಟುಂಬ ವೈದ್ಯರು ಬಂದು ಇಂಜೆಕ್ಷನ್‍ಗಳಿಂದ ಚೇತರಿಸಲು ಯತ್ನಿಸಿದರೂ ಸಾಧ್ಯವಾಗದೆ ಉಚ್ಚಿಲ್ ಕೊನೆಯುಸಿರೆಳೆದರು.

ಈ ಅತ್ಯಂತ ಜನಪ್ರಿಯ ಕ್ರೀಡಾಳುವಿನ ಆಕಸ್ಮಿಕ ಅಗಲಿಕೆ, ಅಥ್ಲೆಟಿಕ್ಸ್ ಪಾಲಿಗೆ ತುಂಬಲಾರದ ನಷ್ಟವೆಂದು ಅಂದಿನ ದಿನಪತ್ರಿಕೆಗಳೆಲ್ಲ ಭಾರವಾದ ಮನದಿಂದ ವರದಿ ಮಾಡಿದುವು. ಅಥ್ಲೆಟಿಕ್ಸ್ ಬಗ್ಗೆ ಅಧಿಕಾರಯುತವಾ ಗಿ ಮಾತನಾಡಬಲ್ಲ, ಆ ಕ್ಷೇತ್ರವನ್ನು ಹೃತ್ಪೂರ್ವಕ ಪ್ರೀತಿಸಿದ,  ತಾನು ಗಳಿಸಿದ ಜ್ಞಾನವನ್ನು ಇತರರಿಗೆ ನಿರ್ವಂಚನೆಯಿಂದ ದಾನ ಮಾಡಿದ ಪ್ರತಿಭಾಪೂರ್ಣ ಚೇತನವೊಂದು ಅಕಾಲಿಕವಾಗಿ ತನ್ನ ಕರ್ಮಭೂಮಿ ಯನ್ನಗಲಿತು. ಜೊತೆಗೆ ನೂರಾರು ಅಭಿಮಾನಿಗಳ, ಶಿಷ್ಯರ ಮನದಲ್ಲಿ ಅಂಧಕಾರ ಕವಿಯಿತು. ಈ ಅಕಾಲಿಕ ಆಕಸ್ಮಿಕ ಮರಣವಾರ್ತೆ ಕಾಳ್ಗಿಚ್ಚಿನಂತೆ ನಗರದಲ್ಲಿ ಹಬ್ಬಿ, ಕ್ರೀಡಾಳುಗಳೆಲ್ಲ ಅಪಾರ ಸಂಖ್ಯೆಯಲ್ಲಿ ತಮ್ಮ ನೆಚ್ಚಿನ ಶ್ರೇಷ್ಠ ಓಟಗಾರನ ಅಂತಿಮ ದರ್ಶನಕ್ಕಾಗಿ ಬಂದು ನೆರೆದರು. ಬ್ರೆಬೋರ್ನ್ ಸ್ಟೇಡಿಯಮ್‍ನಲ್ಲಿ ನಡೆದಿದ್ದ ಟಾಟಾ ಸ್ಪೋಟ್ರ್ಸ್ ಕ್ಲಬ್ ಮೀಟ್‍ನಲ್ಲಿ ಅವರ ಮರಣವಾರ್ತೆ ಬಿತ್ತರಿಸಲ್ಪಟ್ಟಾಗ, ಅಲ್ಲಿ ದುಃಖ ಕವಿಯಿತು. ರಾತ್ರಿ ಒಂಬತ್ತು ಗಂಟೆಗೆ ಹೊರಟು ಸಾಗಿದ ಅಂತಿಮ ಯಾತ್ರೆಯಲ್ಲಿ ಅವರ ಪಾಥಿರ್ವ ಶರೀರವನ್ನು ಭಾರತ ತ್ರಿವರ್ಣ ಧ್ವಜದಿಂದ ಆಚ್ಛಾದಿಸಲಾಯ್ತು. ತಾನು ನೆಚ್ಚಿದ ಕ್ರೀಡೆಗೆ, ದೇಶದ ಗೌರವಕ್ಕೆ ತನ್ನ ಬಾಳನ್ನೇ ಮುಡಿಪಾಗಿಟ್ಟ ಸ್ಮರಣೀಯ ಚೇತನವದು. ಅವರ ನೆನಪಿನಲ್ಲಿ ಮುಂಬೈಯ ಜೈಹಿಂದ್ ಸ್ಪೋಟ್ರ್ಸ್ ಕ್ಲಬ್, ವರ್ಷವರ್ಷವೂ ಆರ್.ಎನ್ ಉಚ್ಚಿಲ್ ಸ್ಪೋಟ್ರ್ಸ್‍ಮೀಟ್ ನಡೆಸುತ್ತಿದೆ. ಕ್ರೀಡಾರಂಗದಲ್ಲಿ ಉದಯಿಸಿ ಮಿನುಗುವ ಹೊಸ ಹೊಸ ಪ್ರತಿಭೆಗಳೇ ಅಂತಹ ಚೈತನ್ಯಕ್ಕೆ ಸಲುವ ಶ್ರಧ್ಧಾಸುಮಗಳು.


Spread the love