ಮಂಗಳೂರು| ಕಾರಿನಲ್ಲಿ ಯುವಕನನ್ನು ಅಪಹರಿಸಿ 1.5 ಕೋಟಿ ರೂ. ಮೌಲ್ಯದ ಚಿನ್ನ ದರೋಡೆ
ಮಂಗಳೂರು: ನಗರದ ಹಂಪನಕಟ್ಟೆಯ ಚಿನ್ನದ ಅಂಗಡಿಯೊಂದರ ಕಚೇರಿ ಕೆಲಸಗಾರ ಮುಸ್ತಫಾ ಎಂಬವರನ್ನು ದುಷ್ಕರ್ಮಿಗಳು ಅಪಹರಿಸಿ 1.5 ಕೋಟಿ ರೂ. ಮೌಲ್ಯದ 1650 ಗ್ರಾಂ ಚಿನ್ನದ ಗಟ್ಟಿಯನ್ನು ದೋಚಿದ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆ.26ರಂದು ರಾತ್ರಿ 8:30ರ ವೇಳೆಗೆ ಅಂಗಡಿಯಿಂದ ವಾರದಲ್ಲಿ ಶೇಖರಣೆಯಾದ ಸುಮಾರು 1.5 ಕೋಟಿ ರೂ. ಮೌಲ್ಯದ 1,650 ಗ್ರಾಂ ತೂಕದ ಮೆಲ್ಟ್ ಮಾಡಿದ ಚಿನ್ನವನ್ನು ಶುದ್ಧ ಚಿನ್ನವಾಗಿ ಪರಿವರ್ತಿಸಲು ನಗರದ ರಥಬೀದಿಯ ಸಂತೋಷ್ ಎಂಬವರ ಚಿನ್ನದ ಅಂಗಡಿಗೆ ಮುಸ್ತಫಾ ತನ್ನ ಸ್ಕೂಟರ್‌ನ ಸೀಟಿನ ಅಡಿಯ ಡಿಕ್ಕಿಯಲ್ಲಿಟ್ಟು ತೆಗೆದುಕೊಂಡು ಹೋಗಿದ್ದರು ಎನ್ನಲಾಗಿದೆ.
ನಗರದ ಜಿಎಚ್‌ಎಸ್ ರಸ್ತೆಯ ಮೂಲಕ ರಥಬೀದಿ ವೆಂಕಟರಮಣ ದೇವಸ್ಥಾನದ ಬಳಿ ಮುಸ್ತಫಾ ತಲುಪಿದಾಗ ರಾತ್ರಿ ಸುಮಾರು 8:45ರ ವೇಳೆಗೆ ಹಿಂದಿನಿಂದ ಇನ್ನೊಂದು ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಆರೋಪಿಗಳು ಮುಸ್ತಫಾರ ಸ್ಕೂಟರ್‌ಗೆ ಅಡ್ಡವಾಗಿಟ್ಟು ನನ್ನ ವಾಹನಕ್ಕೆ ಯಾಕೆ ತಾಗಿಸಿಕೊಂಡು ಹೋಗುತ್ತೀ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿಗಳ ತರಾಟೆಯಿಂದ ಮುಸ್ತಫಾ ಗಾಬರಿಗೊಂಡಿದ್ದು, ಈ ವೇಳೆ ಹಿಂದಿನಿಂದ ಬಿಳಿ ಬಣ್ಣದ ಕಾರಿನಲ್ಲಿ ಬಂದ ನಾಲ್ವರ ಪೈಕಿ ಒಬ್ಬ ಕಾರಿನಿಂದ ಇಳಿದು ಕತ್ತಿ ತೋರಿಸಿ ಬೆದರಿಸಿ, ನಂತರ ಕಾರಿನಲ್ಲಿ ಬಲವಂತವಾಗಿ ಅಪಹರಿಸಿದ್ದಾರೆ. ದಾರಿ ಮಧ್ಯ ಆರೋಪಿಗಳು ಮುಸ್ತಫಾರಿಗೆ ಕೈಯಿಂದ ಹಲ್ಲೆ ನಡೆಸಿ ಸ್ಟೇಟ್‌ಬ್ಯಾಂಕ್, ಪಾಂಡೇಶ್ವರ ಮಾರ್ಗವಾಗಿ ಗೋರಿಗುಡ್ಡ, ಉಜ್ಜೋಡಿ ಫ್ಲೈಓವರ್ ರಸ್ತೆಯ ಕೆಳಗಡೆಯಿಂದ ಸರ್ವಿಸ್ ರಸ್ತೆಯಲ್ಲಿ ಸಾಗುತ್ತಲೇ ಚಿನ್ನದ ಗಟ್ಟಿಯ ಬಗ್ಗೆ ವಿಚಾರಿಸಿದ್ದಾರೆ ಎಂದು ತಿಳಿದು ಬಂದಿದೆ.
ಮುಸ್ತಫಾ ಚಲಾಯಿಸಿಕೊಂಡಿದ್ದ ಸ್ಕೂಟರನ್ನು ದ್ವಿಚಕ್ರ ವಾಹನದಲ್ಲಿ ಬಂದು ತಗಾದೆ ತೆಗೆದಿದ್ದ ಹಿಂಬದಿ ಸವಾರನು ಎಕ್ಕೂರು ಬಳಿ ಕಾರು ತಲುಪಿದಾಗ ಚಿನ್ನದ ಗಟ್ಟಿಯನ್ನು ಕಾರಿನಲ್ಲಿ ಕುಳಿತವರಿಗೆ ನೀಡಿದ್ದಾನೆ ಎಂದು ದೂರಲಾಗಿದೆ. ರಾತ್ರಿ ಸುಮಾರು 9:15ರ ವೇಳೆಗೆ ಮುಸ್ತಫಾರನ್ನು ಕಾರಿನಿಂದ ಇಳಿಸಿ ಸ್ಕೂಟರನ್ನು ಅಲ್ಲೇ ಬಿಟ್ಟು ತೊಕ್ಕೊಟ್ಟು ಕಡೆಗೆ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಳಿಕ ಮುಸ್ತಫಾ ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೊಬೈಲ್ ಪಡೆದು ಸ್ನೇಹಿತನಿಗೆ ಕರೆ ಮಾಡಿ ವಿಚಾರ ತಿಳಿಸಿದ್ದು, ಅವರು ಚಿನ್ನದ ಅಂಗಡಿಯ ಮ್ಯಾನೇಜರ್‌ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.