ಮಂಗಳೂರು: ಕ್ರೈಸ್ತರ ಎಲ್ಲಾ ಸಂತರ ಹಾಗೂ ಅಸುನೀಗಿದವರ ಸ್ಮರಣಾ ದಿನಾಚರಣೆ
ಮಂಗಳೂರು: ನವೆಂಬರ್ 1 ಮತ್ತು 2 ರಂದು ಕ್ರೈಸ್ತ ಸಮುದಾಯವು ವಿಶ್ವದಾದ್ಯಂತ ಎಲ್ಲಾ ಸಂತರ ದಿನ ಹಾಗೂ ಎಲ್ಲಾ ಅಸುನೀಗಿದವರ ಸ್ಮರಣಾ ದಿನವನ್ನು ಭಕ್ತಿಭಾವದಿಂದ ಆಚರಿಸುತ್ತದೆ.
 
 
 
 
ಕ್ರೈಸ್ತ ಧರ್ಮದ ಸ್ಥಾಪನೆಯ ನಂತರ ಯೇಸುವಿನ ಉಪದೇಶಗಳನ್ನು ನಿಷ್ಠೆಯಿಂದ ಪಾಲಿಸಿ ಧಾರ್ಮಿಕ ಜೀವನ ನಡೆಸಿದ ಅನೇಕ ಮಹನೀಯರನ್ನು ಚರ್ಚ್ ಆಡಳಿತವು ಸಂತ ಪದವಿಗೆ ಏರಿಸಿ ಸ್ಮರಣೀಯರನ್ನಾಗಿಸಿದೆ. ಇಂತಹ ಸಂತರ ಸಂಖ್ಯೆ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಎಂದು ಹೇಳಲಾಗುತ್ತದೆ. ಇವರಿಗೆ ಸಮರ್ಪಿತವಾಗಿ ನಿರ್ಮಿಸಲಾದ ಚರ್ಚ್‌ಗಳೂ ಇವೆ.
ಈ ಎಲ್ಲಾ ಸಂತ ಪದವಿದರರ ಗೌರವಾರ್ಥವಾಗಿ ಪ್ರತಿ ವರ್ಷ *ನವೆಂಬರ್ 1ರಂದು “ಎಲ್ಲಾ ಸಂತರ ದಿನ”*ವನ್ನು ಆಚರಿಸಲಾಗುತ್ತದೆ.
 
 
ಅದೇ ರೀತಿ *ನವೆಂಬರ್ 2ರಂದು “ಎಲ್ಲಾ ಅಸುನೀಗಿದವರ ಸ್ಮರಣಾ ದಿನ”*ವನ್ನು ಆಚರಿಸಲಾಗುತ್ತದೆ. ಈ ದಿನ ಕ್ರೈಸ್ತರು ತಮ್ಮ ಬಂಧು-ಬಳಗದ ಅಸುನೀಗಿದವರ ಆತ್ಮ ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಅವರು ಧಪನ ಭೂಮಿಗೆ (ಸಮಾಧಿ ಸ್ಥಳ) ತೆರಳಿ ದೀಪ ಬೆಳಗಿ, ಹೂವುಗಳಿಂದ ಸಮಾಧಿಗಳನ್ನು ಅಲಂಕರಿಸಿ ಪ್ರಾರ್ಥನೆ ಮಾಡುವ ಸಂಪ್ರದಾಯವಿದೆ.
ಚರ್ಚ್ ಆಡಳಿತವು ಈ ದಿನಗಳನ್ನು ಅಧಿಕೃತ ಧಾರ್ಮಿಕ ದಿನಗಳಾಗಿ ಘೋಷಿಸಿದ್ದು, ಈ ಸಂದರ್ಭದ ವಿಧಿ-ವಿಧಾನಗಳಲ್ಲಿ ಭಾಗವಹಿಸುವುದರಿಂದ ಪಾಪ ಕ್ಷಮೆ ಮತ್ತು ಆತ್ಮಗಳ ಸದ್ಗತಿಗೆ ಪುಣ್ಯ ಲಭಿಸುತ್ತದೆ ಎಂದು ನಂಬಲಾಗಿದೆ.
            











