ಮಂಗಳೂರು: ಟೇಲಿಫೋನ್ ಕೇಬಲ್ ಅಳವಡಿಕೆಯ ವೇಳೆ ನೀರಿನ ಪೈಪನ್ನು ತುಂಡರಿಸಿದ್ದಕ್ಕೆ ಆಕ್ರೋಶಗೊಂಡ ಶಾಸಕ ಜೆ ಆರ್ ಲೋಬೊ ರಿಲಾಯನ್ಸ್ ಕಂಪೆನಿಗೆ ನೀಡಿದ ಕೇಬಲ್ ಅಳವಡಿಕೆಯ ಲೈಸನ್ನ್ ಕೂಡಲೇ ರದ್ದು ಮಾಡುವಂತೆ ಮನಾಪಾ ಆಯುಕ್ತರಿಗೆ ಸೂಚನೆ ನೀಡಿದ ಘಟನೆ ಶನಿವಾರ ನಡೆದಿದೆ.
ಬೆಂದೂರು ಸೈಂಟ್ ಥೆರೆಸಾ ಶಾಲೆಯ ಬಳಿ ರಿಲಾಯನ್ಸ್ ಕಂಪೆನಿ ಟೆಲಿಫೋನ್ ಕೇಬಲ್ ಅಳವಡಿಕೆಗಾಗಿ ಗುಂಡಿಯನ್ನು ಅಗೆಯುತ್ತಿದ್ದ ವೇಳೆ ಹೆಚ್ಚು ಒತ್ತಡದ ಪೈಪೊಂದನ್ನು ತುಂಡರಿಸಿ ಹಾಕಿದ್ದು ಇದರಿಂದ ನೀರು ಸಂಪೂರ್ಣವಾಗಿ ಪೋಲಾಗುತ್ತಿರುವ ಬಗ್ಗೆ ಸಾರ್ವಜನಿಕರು ಶಾಸಕ ಜೆ ಆರ್ ಲೋಬೊ ಅವರ ಗಮನಕ್ಕೆ ತಂದಿದ್ದು ಕೂಡಲೆ ಸ್ಥಳಕ್ಕೆ ಆಗಮಿಸಿದ ಶಾಸಕರು ಸ್ಥಳ ಪರೀಶೀಲನೆ ಮಾಡಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು ರಿಲಾಯನ್ಸ್ ಕಂಪೆನಿ ಟೇಲಿಫೋನ್ ಕೇಬಲ್ ಅಳವಡಿಕೆಗಾಗಿ ಗುಂಡಿಯನ್ನು ತೆಗೆಯುವ ವೇಳೆ ಪೈಪಿಗೆ ಹಾನಿಯಾಗಿದ್ದು ಈ ಕುರಿತು ಕಂಪೆನಿಯ ಸಂಬಂಧಪಟ್ಟ ವ್ಯಕ್ತಿಗಳು ಮನಾಪಾ ಅಧಿಕಾರಿಗಳಿಗೆ ಮಾಹಿತಿ ನೀಡಬೇಕಿತ್ತು ಆದರೆ ಮಾಹಿತಿ ನೀಡದೆ ಸುಮ್ಮನಿರುವುದು ಅವರ ಬೇಜಬ್ದಾರಿಯನ್ನು ತೋರಿಸುತ್ತದೆ. ಅಲ್ಲದೆ ಅಗೆದ ಸ್ಥಳಗಳಲ್ಲಿ ಪುನಃ ಮಣ್ಣು ಮುಚ್ಚಿ ಕಾಂಕ್ರೀಟ್ ಹಾಕಿಬೇಕಿದ್ದು ಅದನ್ನು ಕೂಡ ಕಳಪೆಯಾಗಿ ಮಾಡಲಾಗಿದ್ದು ಇದರಿಂದ ದಾರಿಹೋಕರಿಗೆ ಪಾದಾಚಾರಿಗಳಿಗೆ ಮುಂದಿನ ದಿನಗಳಲ್ಲಿ ಸಮಸ್ಯೆಯಾಗಲಿದೆ. ಕಾಂಕ್ರಿಟ್ ಮಾಡುವಾಗ ಸರಿಯಾದ ಕಬ್ಬಿಣವನ್ನು ಸಹ ಉಪಯೋಗಿಸಿದೆ ಕೇವಲ ಕಾಟಾಚಾರಕ್ಕೆ ಕೆಲಸ ಮಾಡಲಾಗಿದೆ. ಈಗಾಗಲೇ ಮನಾಪಾ ಆಯುಕ್ತರಿಗೆ ರಿಲಾಯನ್ಸ್ ಕಂಪೆನಿಗೆ ನೀಡಿದ ಎಲ್ಲಾ ಪರವಾನಿಗೆಗಳನ್ನು ರದ್ದುಗೊಳಿಸುವಂತೆ ಸೂಚನೆ ನೀಡಲಾಗಿದ್ದು, ಸರಿಯಾಗಿ ಕೆಲಸ ನಿರ್ವಹಿಸುವಂತೆ ಕಂಪೆನಿಗೆ ಸೂಚನೆ ನೀಡಲು ತಿಳಿಸಲಾಗಿದೆ ಎಂದರು.













