ಮಂಗಳೂರು: ಪರಾರಿಯಾಗಲು ಯತ್ನಿಸಿದ ಅಕ್ರಮ ಗೋಸಾಗಾಟಗಾರರ ಮೇಲೆ ಪೊಲೀಸ್ ಗುಂಡಿನ ದಾಳಿ

Spread the love

ಮಂಗಳೂರು: ಪರಾರಿಯಾಗಲು ಯತ್ನಿಸಿದ ಅಕ್ರಮ ಗೋ ಸಾಗಾಟಗಾರರ ಮೇಲೆ ಪೊಲೀಸ್ ಗುಂಡಿನ ದಾಳಿ

ಮಂಗಳೂರು: ಅಕ್ರಮವಾಗಿ ಗೋವುಗಳನ್ನು ಕೇರಳಕ್ಕೆ ಸಾಗಿಸುತ್ತಿದ್ದವರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರ ಮಂಗಲದ ಬೆಳ್ಳಿಚಡವು ಬಳಿ ನಡೆದಿದೆ.

ಹಾಸನದಿಂದ ಕೇರಳದತ್ತ ಜಾನುವಾರುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಪುತ್ತೂರು ಪೊಲೀಸರು ತಡೆಹಿಡಿಯಲು ಯತ್ನಿಸಿದ್ದಾರೆ. ಆದ್ರೆ, ಲಾರಿ ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ್ದಾರೆ. ಅಲ್ಲದೇ ಲಾರಿ ಚಾಲಕ ನೇರವಾಗಿ ಪೊಲೀಸರ ಮೇಲೆ ಹತ್ತಿಸಲು ಮುಂದಾಗಿದ್ದ ವೇಳೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.

ಹಾಸನದಿಂದ ಕೇರಳದತ್ತ ಜಾನುವಾರುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಲಾರಿಯನ್ನು ಪುತ್ತೂರು ಗ್ರಾಮೀಣ ಠಾಣಾ ವ್ಯಾಪ್ತಿಯ ಪೊಲೀಸರು ತಡೆಹಿಡಿಯಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ಲಾರಿ ನಿಲ್ಲಿಸಲು ಸೂಚಿಸಿದರೂ, ಚಾಲಕ ಲೆಕ್ಕಿಸದೇ ಲಾರಿಯನ್ನು ನೇರವಾಗಿ ಪೊಲೀಸರ ಕಡೆಗೆ ಹತ್ತಿಸಲು ಯತ್ನಿಸಿದ ಎನ್ನಲಾಗಿದೆ. ಅಪಾಯದ ಪರಿಸ್ಥಿತಿಯಲ್ಲಿ ಪುತ್ತೂರು ಗ್ರಾಮೀಣ ಠಾಣೆಯ ಪಿಎಸ್ಐ ಜಂಬುರಾಜ್ ಮಹಾಜನ್ ಅವರು ಗುಂಡು ಹಾರಿಸಿದ್ದು, ಆರೋಪಿಯಾದ ಅಬ್ದುಲ್ಲಾ ಕಾಲಿಗೆ ಗುಂಡು ತಗುಲಿದೆ.

ಗಾಯಗೊಂಡ ಅಬ್ದುಲ್ಲಾನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಆರೋಪಿಯ ಸ್ಥಿತಿ ಸ್ಥಿರವಾಗಿದೆ. ಲಾರಿಯಲ್ಲಿ ಇದ್ದ ಮತ್ತೊಬ್ಬ ಆರೋಪಿ ಘಟನೆಯ ನಂತರ ಪರಾರಿಯಾಗಿದ್ದಾನೆ. ಪೊಲೀಸರು ಅವನ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು ಅದರೊಳಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 10 ಗೋವುಗಳನ್ನು ರಕ್ಷಿಸಿದ್ದಾರೆ. ಈ ಘಟನೆ ನಂತರ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹಾಸನದಿಂದ ಕೇರಳದತ್ತ ಜಾನುವಾರುಗಳ ಕಳ್ಳಸಾಗಣೆ ನಡೆಯುತ್ತಿತ್ತು ಎಂಬ ಮಾಹಿತಿ ಆಧಾರದ ಮೇಲೆ ಪೊಲೀಸರು ಬಲೆ ಬೀಸಿದ್ದರು. ಆದರೆ ಆರೋಪಿಗಳು ಪೊಲೀಸರ ಸೂಚನೆಗೆ ಸಹಕರಿಸದೆ ದಾಳಿ ಮಾಡಲು ಮುಂದಾಗಿದ್ದರಿಂದ ಆತ್ಮರಕ್ಷಣೆಗಾಗಿ ಗುಂಡು ಹಾರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆಯೆಂದು ಪೊಲೀಸರಿಂದ ತಿಳಿದುಬಂದಿದೆ. ಘಟನೆಯ ಕುರಿತು ಪುತ್ತೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.


Spread the love
Subscribe
Notify of

0 Comments
Inline Feedbacks
View all comments