ಮಂಗಳೂರು| ಪೊಲೀಸರಿಗೆ ಜೀವ ಬೆದರಿಕೆ ಪ್ರಕರಣ : ಆರೋಪಿ ಸೆರೆ
ಮಂಗಳೂರು: ಗಸ್ತು ನಿರತ ಕಂಕನಾಡಿ ನಗರ ಠಾಣೆ ಎಎಸ್ಸೈ ಅಶೋಕ್ ಕೆ. ಮತ್ತು ಸಿಬ್ಬಂದಿ ಸುರೇಂದ್ರ ಕುಮಾರ್ ಅವರಿಗೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನ ಜಿಲ್ಲೆಯ ಸಕಲೇಶಪುರದ ಹಲಸೋಗೆ ಗ್ರಾಮದ ನಿವಾಸಿ ಸುಲೈಮಾನ್ (42) ಜೀವ ಬೆದರಿಕೆ ಹಾಕಿದ ಆರೋಪಿಯಾಗಿದ್ದು, ಈತನನ್ನು ಬಂಧಿಸಲಾಗಿದೆ.
ಸೆ.2ರಂದು ರಾತ್ರಿ 12:45ಕ್ಕೆ ಅಶೋಕ್ ಅವರು ಸಿಬ್ಬಂದಿಯೊಂದಿಗೆ ರೌಂಡ್ಸ್‌ನಲ್ಲಿದ್ದಾಗ ನಾಗುರಿಯಲ್ಲಿ ಚಿಕ್ ಗ್ರಿಲ್ ಎಂಬ ಅಂಗಡಿ ಬಳಿ ಓಣಿಯಲ್ಲಿ ಐದಾರು ದ್ವಿಚಕ್ರ ವಾಹನಗಳ ಸಮೇತ ಏಳೆಂಟು ಮಂದಿಯನ್ನು ನಿಂತಿದ್ದರು. ತಕ್ಷಣ ಎಎಸ್ಸೈ ಯಾಕೆ ಇಲ್ಲಿ ನಿಂತಿದ್ದೀರಿ ಎಂದು ಪ್ರಶ್ನಿಸಿದಾಗ ಹಿಂಬದಿಯ ಅಡುಗೆ ಕೋಣೆಯಿಂದ ಏಕಾಏಕಿ ಬಂದ ಸುಲೈಮಾನ್ ಎಂಬಾತ ನಮ್ಮನ್ನು ಕೇಳಲು ನೀವು ಯಾರು? ಎಂದು ಪ್ರಶ್ನಿಸಿ ಅಶೋಕ್ ಅವರಿಗೆ ಹಲ್ಲೆಗೆ ಯತ್ನಿಸಿದ್ದಾನೆ. ಅಲ್ಲದೆ ಎಸ್ಸೈಯ ಮೊಬೈಲ್‌ಗೆ ಅಳವಡಿಸಿದ್ದ ಫಿಂಗರ್ ಪ್ರಿಂಟ್ ಸ್ಕ್ಯಾನರನ್ನು ಆರೋಪಿ ಹಿಡಿದು ಎಳೆದು ತುಂಡು ಮಾಡಿ ನೆಲಕ್ಕೆ ಎಸೆದಿದ್ದಾನೆ ಎಂದು ಆರೋಪಿಸಲಾಗಿದೆ.
ತಕ್ಷಣ ಪೊಲೀಸ್ ವಾಹನದಲ್ಲಿ ಚಾಲಕ ಸುರೇಂದ್ರ ಕುಮಾರ್ ಮಧ್ಯ ಪ್ರವೇಶಿಸಿದಾಗ ಸುಲೈಮಾನ್ ಹೊಟ್ಟೆ ಮತ್ತು ಸೊಂಟಕ್ಕೆ ಒದ್ದು ನೆಲಕ್ಕೆ ಬೀಳಿಸಿ ಕೈಯಿಂದ ಬೆನ್ನಿಗೆ ಮತ್ತು ಕುತ್ತಿಗೆಗೆ ಹಲ್ಲೆ ಮಾಡಿದ್ದಾನೆ ಎಂದು ದೂರಲಾಗಿದೆ. ಬಳಿಕ ಆರೋಪಿ ಸುಲೈಮಾನ್‌ನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.