ಮಂಗಳೂರು | ಬಸ್ ನಿಲ್ದಾಣಗಳಲ್ಲಿ ಬ್ಯಾಗ್ ಕಳ್ಳತನ: ಅಂತರ್‌ಜಿಲ್ಲೆ ಕಳ್ಳನ ಬಂಧನ, ಚಿನ್ನ ವಶ

Spread the love

ಮಂಗಳೂರು | ಬಸ್ ನಿಲ್ದಾಣಗಳಲ್ಲಿ ಬ್ಯಾಗ್ ಕಳ್ಳತನ: ಅಂತರ್‌ಜಿಲ್ಲೆ ಕಳ್ಳನ ಬಂಧನ, ಚಿನ್ನ ವಶ

ಮಂಗಳೂರು: ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಸರಣಿ ಬ್ಯಾಗ್ ಕಳ್ಳತನ ಮಾಡುತ್ತಿದ್ದ ಅಂತರ್‌ಜಿಲ್ಲೆ ಕಳ್ಳನನ್ನು ಮಂಗಳೂರು ಬರ್ಕೆ ಪೊಲೀಸರು ಬಂಧಿಸಿದ್ದಾರೆ. ಆರೋಪಿತನಿಂದ ಒಟ್ಟು ರೂ.6,47,920 ಮೌಲ್ಯದ 46.28 ಗ್ರಾಂ ಚಿನ್ನಾಭರಣ ಹಾಗೂ ರೂ.5,000 ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜೈ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಜನವರಿ 23ರಂದು ಸಂಜೆ ಸುಮಾರು 7 ಗಂಟೆ ವೇಳೆಗೆ, ಬೆಂಗಳೂರಿಗೆ ತೆರಳಲು ಬಸ್ಸಿನಲ್ಲಿ ಕುಳಿತಿದ್ದ ಇಬ್ಬರು ಮಹಿಳೆಯರು ಹಾಗೂ ಹಿರಿಯ ನಾಗರಿಕರು ಚಿನ್ನಾಭರಣ ಮತ್ತು ನಗದು ಹೊಂದಿದ್ದ ಟ್ರಾಲಿ ಬ್ಯಾಗ್ ಕಳವು ಆಗಿರುವ ಬಗ್ಗೆ ದೂರು ದಾಖಲಿಸಿದ್ದರು. ಈ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗಿದ್ದು, ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಪಿಎಸ್‌ಐ ವಿನಾಯಕ ತೊರಗಲ್ ನೇತೃತ್ವದ ತಂಡವು ಜನವರಿ 28ರಂದು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಬಳಿ ಆರೋಪಿತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಬಂಧಿತ ಆರೋಪಿಯನ್ನು ಮಹಮ್ಮದ್ ಇಮ್ರಾನ್ ಎನ್.ಎಂ. (44) ಎಂದು ಗುರುತಿಸಲಾಗಿದ್ದು, ಆತ ಕೊಡಗು ಜಿಲ್ಲೆಯ ಮಡಿಕೇರಿಯ ನಿವಾಸಿಯಾಗಿದ್ದಾನೆ. ಆರೋಪಿತನಿಂದ ಕಳವುಗೈದ ಚಿನ್ನಾಭರಣ ಹಾಗೂ ನಗದು ಹಣವನ್ನು ಮಹಜರು ಮೂಲಕ ವಶಪಡಿಸಿಕೊಳ್ಳಲಾಗಿದೆ.

ಆರೋಪಿತನು ಬಸ್ ನಿಲ್ದಾಣಗಳಲ್ಲಿ ಬೆಲೆಬಾಳುವ ವಸ್ತುಗಳಿರುವ ಬ್ಯಾಗ್‌ಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುವ ರೂಢಿಗತ ಆರೋಪಿಯಾಗಿದ್ದು, ಒಟ್ಟು 11 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿವಿಧ ಪೊಲೀಸ್ ಠಾಣೆಗಳಲ್ಲಿ ಬ್ಯಾಗ್ ಕಳ್ಳತನ ಹಾಗೂ ಮನೆ ಕಳ್ಳತನ ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ.

ಬಂಧಿತನನ್ನು ಜನವರಿ 29ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.


Spread the love
Subscribe
Notify of

0 Comments
Inline Feedbacks
View all comments