ಮಂಗಳೂರು: ಮನೆಯಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಯತ್ನ ; ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು
ಮಂಗಳೂರು: ಪಾಂಡೇಶ್ವರ ಠಾಣೆಯ ಎಎಸ್‌ಐ ಒಬ್ಬರು ತನ್ನ ಮನೆಯಲ್ಲೇ ಮೈಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಕದ್ರಿ ವ್ಯಾಸನಗರದಲ್ಲಿ ನಡೆದಿದೆ.

ಪಾಂಡೇಶ್ವರ ಠಾಣೆಯ ಎಎಸ್‌ಐ ಹರಿಶ್ಚಂದ್ರ ಬೇರಿಕೆ ಆತ್ಮಹತ್ಯೆಗೆ ಯತ್ನಿಸಿದವರು.
ಕೇರಳದ ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ಮೂಲದವರಾದ ಹರಿಶ್ಚಂದ್ರ ಅವರು ಮಂಗಳೂರು, ಉಡುಪಿ ಜಿಲ್ಲೆಯಲ್ಲಿ ಕಳೆದ 27 ವರ್ಷಗಳಿಂದ ಹಲವಾರು ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು ಒಂದು ವರ್ಷದ ಹಿಂದೆ ಎಎಸ್‌ಐ ಆಗಿ ಭಡ್ತಿ ಪಡೆದಿದ್ದರು. ಹಿಂದೆ ಕರಾವಳಿ ಕಾವಲು ಪಡೆಯಲ್ಲಿ ಕರ್ತವ್ಯದಲ್ಲಿದ್ದ ಇವರು ಇತ್ತೀಚೆಗೆ ಪಾಂಡೇಶ್ವರ ಠಾಣೆಗೆ ಬಂದಿದ್ದರು. ಮೂರು ವರ್ಷಗಳ ಹಿಂದೆ ಕದ್ರಿ ವ್ಯಾಸನಗರದಲ್ಲಿ ಹೊಸ ಮನೆ ಮಾಡಿ ನೆಲೆಸಿದ್ದರು.ಪತ್ನಿ ಮತ್ತು ಮಕ್ಕಳು ರಜೆಯ ಕಾರಣ ನಿನ್ನೆ ಊರಿಗೆ ತೆರಳಿದ್ದರು.

ಇಂದು ಬೆಳಗ್ಗೆ ಸಹಜವಾಗಿಯೇ ಇದ್ದ ಹರಿಶ್ಚಂದ್ರ ಅವರು ದೇವರಿಗೆ ಹೂ ಇಡಲು ಹೊರಗಿನಿಂದ ಹೂ ಕೊಯ್ಯುತ್ತಿದ್ದುದನ್ನು ಸ್ಥಳೀಯರು ಗಮನಿಸಿದ್ದರು. ಬೆಳಗ್ಗೆ 10.30ರ ವೇಳೆಗೆ ಹಠಾತ್ ಮನೆಯ ಹೊರಗಡೆ ಎದುರು ಭಾಗದಲ್ಲಿ ಬೆಂಕಿ ಹತ್ತಿಕೊಂಡು ಬೊಬ್ಬೆ ಕೇಳಿದ್ದು ಪಕ್ಕದ ಮನೆಯವರು ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ ಮೈಯಲ್ಲಿದ್ದ ಅಂಗಿ ಸಹಿತ ಮೈ ಪೂರ್ತಿ ಸುಟ್ಟು ಹೋಗಿದೆ. ಕೂಡಲೇ ಮಾಹಿತಿ ಪಡೆದು ಕದ್ರಿ ಪೊಲೀಸರು ಮತ್ತು ಆಂಬುಲೆನ್ಸ್ ಬಂದಿದ್ದು ಅವರನ್ನು ಎಜೆ ಆಸ್ಪತ್ರೆಗೆ ಸೇರಿಸಲಾಗಿದೆ.
ಮನೆಯ ಹೊರಗಡೆ ಬಿಸ್ಸೆರಿ ನೀರಿನ ಬಾಟಲಿಯಲ್ಲಿ ಅರ್ಧ ಸುಟ್ಟು ಹೋದ ಸ್ಥಿತಿಯಲ್ಲಿ ಪೆಟ್ರೋಲ್ ತುಂಬಿರುವ ಕ್ಯಾನ್ ಪತ್ತೆಯಾಗಿದೆ. ನೀರು ಹಾಕಿದ್ದರಿಂದ ಕರಟಿ ಹೋದ ಬಾಟಲಿ ಸಹಿತ ಅದರಲ್ಲಿ ಅರ್ಧದಷ್ಟು ಪೆಟ್ರೋಲ್ ಉಳಿದಿದೆ. ಮೈಗೆ ಪೆಟ್ರೋಲ್ ಸುರಿದುಕೊಂಡ ಸಂದರ್ಭದಲ್ಲಿ ಎದುರು ಮನೆಯ ತಗಡು ಶೀಟಿಗೂ ಬಿದ್ದಿದೆ. ಬೆಂಕಿ ಅದಕ್ಕೂ ತಗಲಿದ್ದು ಶೀಟ್ ಸಹಿತ ಮನೆಯ ಫೈಬರ್ ಪೈಪ್ ಸುಟ್ಟು ಹೋಗಿದೆ. ನೆಲಹಾಸಿನ ಮ್ಯಾಟ್ ಕೂಡ ಸುಟ್ಟು ಹೋಗಿದೆ. ಕದ್ರಿ ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.












