ಮಂಗಳೂರು: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಮೋಸ ಮಾಡಿ ಮೂವರು ಯುವಕರ ವಿರುದ್ದ ದೂರು ದಾಖಲು

Spread the love

ಮಂಗಳೂರು: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಮೋಸ ಮಾಡಿ ಮೂವರು ಯುವಕರ ವಿರುದ್ದ ದೂರು ದಾಖಲು

ಮಂಗಳೂರು: ವಿದೇಶದಲ್ಲಿ ಒಂದೂವರೆ ಲಕ್ಷ ಸಂಬಳ ಇರುವ ಕೆಲಸ ತೆಗೆಸಿಕೊಡುತ್ತೇನೆ ಎಂದು ಹೇಳಿ ಅಮಾಯಕ ಯುವಕರನ್ನು ದೂರದ ಬಡ ರಾಷ್ಟ್ರ ಅರ್ಮೇನಿಯಾಕ್ಕೆ ಕರೆಸಿಕೊಂಡು ಲಕ್ಷಾಂತರ ರೂಪಾಯಿ ಹಣ ಪಡೆದು ಮೋಸಗೈದ ಬಗ್ಗೆ ಸಂತ್ರಸ್ತ ಯುವಕರು ಬಜ್ಜೆ ಮತ್ತು ಕದ್ರಿ ಠಾಣೆಗೆ ಮೂವರು ಯುವಕರ ವಿರುದ್ಧ ದೂರು ನೀಡಿದ್ದಾರೆ.

ಗಂಜಿಮಠ ಮಣೇಲ್ ನಿವಾಸಿ ರಾಕೇಶ್ ರೈ ಭೂಷಣ್ ಕುಲಾಲ್ ಯೆಯ್ಯಾಡಿ ಮತ್ತು ಆಂಟನಿ ಪ್ರೀತಮ್ ಗರೋಡಿ ಎಂಬವರು ಹಣ ಪಡೆದು 30ಕ್ಕೂ ಹೆಚ್ಚು ಯುವಕರನ್ನು ಮೋಸ ಮಾಡಿದ್ದಾರೆಂದು ಸಂತ್ರಸ್ತ ಮಂಜುನಾಥ್ ನಾಯ್ಕ ಉಮೇಶ್ ಬಿ.ಸಿ.ರೋಡು, ಗಗನ್ ಯೆಯ್ಯಾಡಿ ಎಂಬವರು ದೂರು ನೀಡಿದ್ದಾರೆ. ಈ ಮೂವರು ಯುವಕರು ಡಿ.4ರಂದು ಅರ್ಮೇನಿಯಾದ ಕಷ್ಟದಿಂದ ಪಾರಾಗಿ ಊರಿಗೆ ಬಂದಿದ್ದಾರೆ.

ಎಡಪದವು ನಿವಾಸಿ ಮಂಜುನಾಥ್ ನಾಯ್ಕ ಎಂಬ ಯುವಕ ರಾಕೇಶ್ ರೈಗೆ ಮೊದಲೇ ಪರಿಚಯ ಇತ್ತು. ಆರು ತಿಂಗಳ ಹಿಂದೆ ರಾಕೇಶ್ ಪರಿಚಯದಲ್ಲಿ ಗಲ್ಫ್ ನಲ್ಲಿ ಉದ್ಯೋಗ ಇದೆಯೆಂದು ಹೇಳಿದ್ದು ಅಮೆರಿಕ ಕಂಪನಿಯಲ್ಲಿ ಕೆಲಸ ತೆಗೆಸಿಕೊಡುತ್ತೇನೆ, ವೀಸಾ ಎಲ್ಲ ಮಾಡಿಕೊಡುತ್ತೇನೆಂದು ನಂಬಿಸಿದ್ದ. ಏಜನ್ಸಿ ಏನೂ ಇಲ್ಲ, ನಾವು ಅಲ್ಲಿಯೇ ಇದ್ದೇವೆ, ಯೂರೋದಲ್ಲಿ ಸಂಬಳ ಬರುತ್ತದೆ, ಇಂಡಿಯಾದ ಒಂದೂವರೆ ಲಕ್ಷ ಆಗುತ್ತದೆ ಎಂದು ಹೇಳಿದ್ದ.

ಇದರಂತೆ, ತಾಯಿ ಮತ್ತು ಸಂಬಂಧಿಕರ ಚಿನ್ನ ಅಡವಿಟ್ಟು 2.40 ಲಕ್ಷ ಕೊಟ್ಟಿದ್ದು ವೀಸಾವನ್ನೂ ಕಳಿಸಿದ್ದ. ಟೂರಿಸ್ಟ್ ವೀಸಾ ಕಳಿಸಿದ ಬಗ್ಗೆ ಕೇಳಿದಾಗ ಅದು ಈಗ ಟೆಂಪರರಿ, ಇಲ್ಲಿ ಬಂದ ನಂತರ ಉದ್ಯೋಗ ವೀಸಾ ಮಾಡಿಕೊಡುತ್ತೇವೆ, ಈಗ ಬನ್ನಿ ಎಂದು ಕರೆದಿದ್ದು, ಅಕ್ಟೋಬರ್ 8ರಂದು ಮಂಜುನಾಥ್ ದುಬೈ ಮೂಲಕ ಅರ್ಮೇನಿಯಾ ದೇಶಕ್ಕೆ ಹೋಗಿದ್ದ. ಅಲ್ಲಿ ರಾಕೇಶ್, ಭೂಷಣ್ ಮತ್ತು ಆಂಟನಿ ಪ್ರೀತಮ್ ಅವರು ಕರೆದೊಯ್ಯಲು ಬಂದಿದ್ದು, ರೂಮಿಗೆ ಕರೆದುಕೊಂಡು ಹೋಗಿ ಬಿಟ್ಟಿದ್ದರು. ಕೆಲಸದ ಬಗ್ಗೆ ಕೇಳಿದಾಗ, ಕಂಪನಿಯಲ್ಲಿ ಮಾತನಾಡಿದ್ದೇವೆ, ಕೆಲವು ದಿನ ಇರು. ಆಮೇಲೆ ಕೆಲಸ ಮಾಡಿಕೊಡುತ್ತೇವೆ ಎಂದಿದ್ದರು.

ಆದರೆ ವಾರ ಕಳೆದರೂ ಕೆಲಸ ಮಾಡಿಕೊಡಲಿಲ್ಲ. ಅಲ್ಲಿ ನೋಡಿದಾಗ ಅದೇ ರೀತಿ ಬಹಳಷ್ಟು ಮಂಗಳೂರು ಆಸುಪಾಸಿನ ಯುವಕರು ಅದೇ ರೂಮಿನಲ್ಲಿ ಇರುವುದು ಕಂಡುಬಂದಿದೆ. ಎರಡು ವಾರದ ನಂತರ ಮತ್ತೆ 12 ಮಂದಿ ಬಂದು ಸೇರಿಕೊಂಡಿದ್ದಾರೆ. ಹೊರಗೆ ನೋಡಿದರೆ ಅಲ್ಲಿ ಯಾವುದೇ ಸವಲತ್ತು ಇರಲಿಲ್ಲ, ಭಾರತಕ್ಕಿಂತ ತುಂಬ ಬಡ ರಾಷ್ಟ್ರವಾಗಿದ್ದು ಯಾವುದೇ ಕಂಪನಿಯೂ ಇರಲಿಲ್ವ ರಾತ್ರಿಯಾದರೆ ಹಿಮ ಬೀಳುತ್ತಿತ್ತು. ಹೀಗಾಗಿ ಅಲ್ಲಿ ಉಳಿದುಕೊಳ್ಳುವುದೇ ಕಷ್ಟ ಎನಿಸಿತ್ತು. ಹೊರಗಡೆ ಖರೀದಿಗೆ ಹೋದರೆ ತರಕಾರಿ, ಇನ್ನಿತರ ವಸ್ತುಗಳಿಗೆ ಭಾರೀ ದರ ಇತ್ತು. ಹಣ್ಣು ತರಕಾರಿ ಎಲ್ಲವೂ ಭಾರತದಿಂದಲೇ ಹೋಗಬೇಕಿತ್ತು.

ವಾರ ಕಳೆಯುವಷ್ಟರಲ್ಲಿ ಊಟಕ್ಕೂ ತೊಂದರೆಯಾಗಿತ್ತು. ಆದರೆ ನಮ್ಮನ್ನು ಕರೆದೊಯ್ದಿದ್ದ ರಾಕೇಶ್ ರೈ ಇನ್ನಿತರರು ಭಾರೀ ಮಜಾ ಮಾಡುತ್ತಿದ್ದರು. ನಮ್ಮ ಬಗ್ಗೆ ಅವರಿಗೆ ಕಾಳಜಿ ಇರಲಿಲ್ಲ. ನಾವು ಕೊನೆಗೆ ಅಲ್ಲಿ ಸಿಮೆಂಟ್ ಹೊರುವುದು, ಕಲ್ಲು ಹೊರುವುದು, ಟಾಯ್ಲೆಟ್ ಕ್ಲೀನ್ ಮಾಡುವಂಥ ಕೂಲಿ ಮಾಡಬೇಕಾಯಿತು. ಅದೂ ದಿನಕೂಲಿ ಮಾಡಿ ಹೊಟ್ಟೆ ತುಂಬಿಸುವ ಸ್ಥಿತಿಯಾಗಿತ್ತು.

ಅಲ್ಲಿನ ನಿವಾಸಿಗಳಿಗೂ ಸ್ಥಳೀಯ ಭಾಷೆ ಬಿಟ್ಟರೆ ಇಂಗ್ಲಿಷ್ ಇನ್ನಿತರ ಭಾಷೆ ಬರುತ್ತಿರಲಿಲ್ಲ. ಗೂಗಲ್ ನಲ್ಲಿ ಅನುವಾದಿಸಿ ಕೇಳತೊಡಗಿದಾಗ, ಅಲ್ಲಿನವರೇ ಬೇರೆ ದೇಶಗಳಿಗೆ ಕೆಲಸಕ್ಕೆ ಹೋಗುವುದು ತಿಳಿಯಿತು. ಅಲ್ಲದೆ, ಅಲ್ಲಿ ಯಾವುದೇ ಕಂಪನಿಯಾಗಲೀ, ಕೈಗಾರಿಕೆಯಾಗಲೀ ಇಲ್ಲ ಎನ್ನುವುದೂ ತಿಳಿಯಿತು. ನಾವು ಊಟಕ್ಕಿಲ್ಲದೆ ಪರದಾಟ ಮಾಡಿದ್ದೇವೆ. ಅಲ್ಲಿ 25ಕ್ಕೂ ಹೆಚ್ಚು ಯುವಕರು ಇದೇ ರೀತಿ ಕಷ್ಟದಲ್ಲಿದ್ದಾರೆ. ಎಲ್ಲರೂ 2ರಿಂದ 3 ಲಕ್ಷ, ಕೆಲವರು ನಾಲ್ಕು ಲಕ್ಷ ಕೊಟ್ಟು ಉದ್ಯೋಗಕ್ಕಾಗಿ ಬಂದಿದ್ದಾರೆ. ಸಾಲ ಮಾಡಿ ಬಂದವರು ಮನೆಯವರಲ್ಲಿ ಹೇಳುವುದಕ್ಕೂ ಹಿಂದೇಟು ಹಾಕುತ್ತಿದ್ದಾರೆ. ನಾವು ಮೂರು ಜನ ವಿಶ್ವ ಹಿಂದು ಪರಿಷತ್ತಿನವರಿಗೆ ಹೇಳಿ, ಮನೆಯವರಿಂದಲೇ ಮತ್ತೆ ಚಿನ್ನ ಅಡವಿಟ್ಟು ಹಣ ಹಾಕಿಸಿ ಟಿಕೆಟ್ ಮಾಡಲು ಹೇಳಿ ಬಂದಿದ್ದೇವೆ ಎಂದು ಮಂಜುನಾಥ್ ನಾಯ್ಕ ಹೇಳಿದ್ದಾರೆ.

ಮಂಗಳೂರಿನಲ್ಲಿ ಚಾಕ್ಸೆಟ್ ಕಂಪನಿ ಒಂದರಲ್ಲಿ ಎಕ್ಸಿಕ್ಯೂಟಿವ್ ಆಗಿ ಏರಿಯಾ ಇನ್ ಚಾರ್ಜ್ ಆಗಿದ್ದೆ. 40 ಸಾವಿರದಷ್ಟು ಸಂಬಳ ಇತ್ತು. ಒಂದೂವರೆ ಲಕ್ಷ ಸಿಗುತ್ತೆ ಎಂಬ ಆಸೆಯಿಂದ, ಸಾಲ ಇರೋದನ್ನು ಮುಗಿಸಬಹುದಲ್ವಾ ಎಂದು ಹೇಳಿ ವಿದೇಶಿ ಉದ್ಯೋಗಕ್ಕೆ ಹೋಗಿದ್ದೆ. ಟೂರಿಸ್ಟ್ ವೀಸಾದಲ್ಲಿ 21 ದಿವಸಕ್ಕೆ ಮಾತ್ರ ಅಲ್ಲಿ ಇರುವುದಕ್ಕೆ ಅನುಮತಿ ಇತ್ತು. ಆದರೆ ನಾವು ಮೂರು ತಿಂಗಳು ಹೆಚ್ಚುವರಿಯಾಗಿ ಉಳಿದುಕೊಂಡಿದ್ದಕ್ಕೆ ಅಕ್ರಮ ವಲಸಿಗ ಎಂದು ಹೇಳಿ 50 ಸಾವಿರ ಫೈನ್ ಹಾಕಿದ್ದಾರೆ. ದಂಡ ಕಟ್ಟಲು ಹಣ ಇಲ್ಲದೆ, ಮುಂದೆ ಯಾವತ್ತೂ ಬರಲ್ಲ ಎಂದು ಬರೆದುಕೊಟ್ಟು ಬಂದಿದ್ದೇವೆ. ನಮ್ಮನ್ನು ಅವರು ಬ್ಯಾನ್ ಮಾಡಿದ್ದು ಬೇರೆ ದೇಶಗಳಿಗೆ ಹೋಗಬೇಕಿದ್ದರೂ ತೊಂದರೆ ಆಗುತ್ತದೆ ಎಂದು ಅಲವತ್ತುಕೊಂಡರು ಮಂಜುನಾಥ್.

ಅಲ್ಲಿ ನಮಗೆ ವೇರ್ ಹೌಸ್ ಇನ್ ಚಾರ್ಜ್ ಹುದ್ದೆಯೆಂದು ಹೇಳಿದ್ದರು, ಒಳ್ಳೆ ವೇತನ ಇರುವುದಾಗಿ ನಂಬಿಸಿದ್ದರು. ರಾಕೇಶ್, ಭೂಷಣ್ ಮತ್ತು ಆಂಟನಿ ಪ್ರೀತಮ್ ಮೂವರೂ ನಮ್ಮನ್ನು ಫೋನ್ ಕರೆ ಮಾಡಿ ನಂಬಿಸಿದ್ದಾರೆ. ಅವರೀಗ ಅರ್ಮೇನಿಯಾದಲ್ಲಿ ಇಲ್ಲ. ಅವರು ದುಬೈಗೆ ಹೋಗಿದ್ದು ಅಲ್ಲಿ ಉಳಿದುಕೊಂಡಿದ್ದಾರೆ. ಅವರಿಗೂ ಬೇರೆ ಕೆಲಸ ಇಲ್ಲ. ನಮ್ಮಿಂದ ಪಡೆದ ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡುತ್ತ ಜಾಲಿ ಮಾಡುತ್ತಿದ್ದಾರೆ ಎಂದು ಮಂಜುನಾಥ್ ಹೇಳುತ್ತಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments