ಮಂಗಳೂರು: ಶ್ರೀ ಜ್ಞಾನೇಶ್ವರಿ ದೈವಜ್ಞ ಗುರುಪೀಠದ ದೈವಜ್ಞ ದರ್ಶನ ಕಾರ್ಯಕ್ರಮ
ಮಂಗಳೂರು: ವೈದಿಕ ಕಾಲದ ಅದ್ವೈತ ಪರಂಪರೆಯ ದೈವಜ್ಞ ಬ್ರಾಹ್ಮಣರು ತಮ್ಮ ಆಚಾರ ವಿಚಾರ ಸಂಪ್ರದಾಯಗಳಲ್ಲಿ ಇನ್ನಷ್ಟು ನಿಷ್ಠೆ ಹೊಂದಿ ತಮ್ಮ ಐತಿಹಾಸಿಕ ಪರಂಪರೆಯನ್ನು ಪುನರುಜ್ಜೀವನ ಗೊಳಿಸಬೇಕಾಗಿದೆ. ನಾಲ್ಕು ದಶಕಗಳ ಹಿಂದೆ ಸಮಾಜಕ್ಕೊಂದು ಕುಲಗುರು, ಶ್ರೀ ಮಠ ಹೊಂದಿದ ಬಳಿಕ ದೈವಜ್ಞ ಸಮಾಜವು ಸರ್ವಾಂಗೀಣ ಅಭಿವೃದ್ಧಿ ಹೊಂದಿದೆ” ಎಂದು ಶ್ರೀ ಶಂಕರಾಚಾರ್ಯ ಸಂಸ್ಥಾನ, ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾ ಸ್ವಾಮೀಜಿ ಹೇಳಿದರು.

ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ “ದೈವಜ್ಞ ದರ್ಶನ” ಕಾರ್ಯಕ್ರಮ ನಿಮಿತ್ತ ಆಗಮಿಸಿ ಭಕ್ತರಿಗೆ ಆಶೀರ್ವಚನ ನೀಡಿದರು.
“ಮಕ್ಕಳಿಗೆ ಶಿಕ್ಷಣ ನೀಡಿ, ಜೊತೆಗೆ ಸಂಸ್ಕಾರ ಸಂಪ್ರದಾಯ ತಿಳಿಸಿ ಸಮಾಜ ಸೇವೆಯಲ್ಲಿ ತೊಡಗಿಸಿ” ಎಂದು ಕರೆ ನೀಡಿದರು. “ಕೌಟುಂಬಿಕ ಹೊಣೆಗಾರಿಕೆ, ಸಮಾಜಮುಖಿ ಚಿಂತನೆ ಮತ್ತು ಮೌಲ್ಯಧಾರಿದ ಜೀವನಕ್ಕೆ ಮಕ್ಕಳನ್ನು ಪ್ರೇರೇಪಿಸುವ ಪರಿಪಾಠ ಕಡಿಮೆಯಾಗುತ್ತಿದೆ” ಎಂದು ವಿಷಾದ ವ್ಯಕ್ತಪಡಿಸಿದರು.

ಬಳಿಕ ಆಶೀರ್ವಚನ ನೀಡಿದ ಕಿರಿಯ ಶ್ರೀ ಗಳಾದ ಪೂಜ್ಯ ಶ್ರೀ ಸುಜ್ಞಾನೇಶ್ವರ ಭಾರತಿ ಸ್ವಾಮಿಜಿ ಧಾರ್ಮಿಕ ಮತ್ತು ನೈತಿಕ ಮೌಲ್ಯಗಳ ಮಹತ್ವ ವಿವರಿಸಿದರು. “ಹೆತ್ತವರಿಗೆ ಗೌರವ ಸಲ್ಲಿಸುವ ಪರಂಪರೆಯನ್ನು ಮತ್ತಷ್ಟು ಬಲಪಡಿಸಬೇಕು, ಸಮಾಜದ ದೀನ ಅಶಕ್ತರ ಸ್ವಾವಲಂಬನೆಗೆ ಶ್ರಮಿಸಬೇಕು” ಎಂದು ಕರೆ ನೀಡಿದರು.
ಉಭಯ ಶ್ರೀ ಶ್ರೀಗಳವರನ್ನು ನಗರದ ಮಣ್ಣಗುಡ್ಡೆಯಿಂದ ಅಶೋಕನಗರದ ದೈವಜ್ಞ ಕಲ್ಯಾಣ ಮಂಟಪದವರೆಗೆ ಮಂಗಳವಾದ್ಯ, ಭಜನಾ ನೃತ್ಯ, ಟ್ಯಾಬ್ಲೋ ಗಳ ಮೂಲಕ ಪೂರ್ಣ ಕುಂಭ ಸ್ವಾಗತ ದೊಂದಿಗೆ ಬರಮಾಡಿಕೊಳ್ಳಲಾಯಿತು.

ವೇದಿಕೆಯಲ್ಲಿ ದೈವಜ್ಞ ಬ್ರಾಹ್ಮಣ ಶ್ರೀಮಠದ ಟ್ರಸ್ಟಿಗಳಾದ ಶ್ರೀ ಕೆ. ಸುಧಾಕರ್ ಶೇಟ್, ಬೆಂಗಳೂರಿನ ಶ್ರೀ ಗಣಪತಿ ಶೇಟ್, ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಸಂಘದ ರಾಜ್ಯಾಧ್ಯಕ್ಷ ಶ್ರೀ ರವಿ ಗಾವ್ಕರ್ ಹುಬ್ಬಳ್ಳಿ, ಮಂಗಳೂರು ದೈವಜ್ಞ ಬ್ರಾಹ್ಮಣ ಸಂಘದ ಅಧ್ಯಕ್ಷ ಶ್ರೀ ಸುರೇಶ್ ಶೇಟ್, ಕಾರ್ಯದರ್ಶಿ ಶ್ರೀ ಅನಿಲ್ ಡಿ. ರಾವ್, ರಾಜ್ಯ ಸಂಘದ ವಲಯ ಅಧ್ಯಕ್ಷ ಶ್ರೀ ಗಜೇಂದ್ರ ಶೇಟ್, ಸಮಾಜ ಸೇವಕರಾದ ಶ್ರೀ ಬಿ ಎನ್ ರವೀಂದ್ರ ಶೇಟ್, ದೈವಜ್ಞ ಯುವಕ ಮಂಡಳಿ ಅಧ್ಯಕ್ಷ ಶ್ರೀ ಕೆ. ಎನ್. ಮಂಜುನಾಥ ಶೇಟ್, ಮಹಿಳಾ ಮಂಡಳಿ ಅಧ್ಯಕ್ಷೆ ಶ್ರೀಮತಿ ಸಂಧ್ಯಾ ರಾಯ್ಕರ್ , ಮಂಗಳೂರು ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಶ್ರೀ ರವಿ ಗೋಕರ್ಣಕರ್, ದೈವಜ್ಞ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಶ್ರೀ ರಮಾನಂದ ಶೇಟ್, ದೈವಜ್ಞ ಸೌರಭ ಪತ್ರಿಕೆ ಸಂಪಾದಕ ಶ್ರೀ ಎಸ್. ಪ್ರಶಾಂತ ಶೇಟ್ ಮುಂತಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದೈವಜ್ಞ ಸಮಾಜದ ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷರು ಪದಾಧಿಕಾರಿಗಳು ಶ್ರೀ ದೈವಜ್ಞ ಕುಲ ಗುರುಗಳಿಗೆ ಪಾದಪೂಜೆ ಹಾಗೂ “ಗುರುವಂದನೆ” ಸಲ್ಲಿಸಿದರು. ಶ್ರೀ ಎಸ್. ರಾಜೇಂದ್ರಕಾಂತ ಶೇಟ್ ಸಭಾ ಕಾರ್ಯಕ್ರಮವನ್ನು ನಿರ್ವಹಿಸಿ, ವಂದಿಸಿದರು.












