ಮಂಗಳೂರು:  ಹೆಚ್.ಐ.ವಿ ಏಡ್ಸ್ ಬಗ್ಗೆ ಹೆಚ್ಚಿನ ಜಾಗೃತಿ ಅಗತ್ಯ – ಜೈಬುನ್ನಿಸಾ

Spread the love

ಮಂಗಳೂರು:  ಹೆಚ್.ಐ.ವಿ ಏಡ್ಸ್ ಬಗ್ಗೆ ಹೆಚ್ಚಿನ ಜಾಗೃತಿ ಅಗತ್ಯ – ಜೈಬುನ್ನಿಸಾ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು, ಯೆನಪೋಯ ನರ್ಸಿಂಗ್ ಕಾಲೇಜು, ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜು, ಜಿಲ್ಲಾ ವಕೀಲರ ಸಂಘ ದ.ಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕ ದ.ಕ ಮಂಗಳೂರು ಇವರ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ವಿಶ್ವ ಏಡ್ಸ್ ದಿನಾಚರಣೆ ನಗರದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನಿಸಾ ಮಾತನಾಡಿ, ಹೆಚ್.ಐ.ವಿ ಎಂಬುದು ಒಂದು ಸೂಕ್ಷ್ಮರೋಗಾಣುವಾಗಿದ್ದು, ಒಮ್ಮೆ ವ್ಯಕ್ತಿ ಹೆಚ್.ಐ.ವಿ ಸೋಂಕಿಗೆ ಒಳಗಾದಲ್ಲಿ ಸಮಾಜ ಆತನ್ನು ಸೋಂಕಿತನೆಂದು, ಸಮಾಜದಲ್ಲಿ ತಾರತಮ್ಯ ಮಾಡುವುದರಿಂದ ಆತನು ಬದುಕುವ ಹಕ್ಕನ್ನು ಕಳೆದುಕೊಳ್ಳುವಂತಾಗಿದೆ. ಆದ್ದರಿಂದ ಹೆಚ್.ಐ.ವಿ ನಿಯಂತ್ರಣ ಮತ್ತು ತಡೆ ಕಾಯ್ದೆ 2017 ರ ಪ್ರಕಾರ ಸೋಂಕಿತರಾಗಿರುವ ವ್ಯಕ್ತಿಗಳ ಮಾನವೀಯ ಮತ್ತು ಸಂವಿಧಾನಿಕ ಹಕ್ಕುಗಳ ರಕ್ಷಣೆಯನ್ನು ಒದಗಿಸುತ್ತದೆ. ಯಾವುದೇ ವ್ಯಕ್ತಿಯ ಹೆಚ್.ಐ.ವಿ ಪರೀಕ್ಷೆ ವೈದ್ಯಕೀಯ ಚಿಕಿತ್ಸೆ ಅಥವಾ ಸಂಶೋಧನೆಯನ್ನು ಆತನ ಅನುಮತಿ ಇಲ್ಲದೆ ನಡೆಸುವಂತಿಲ್ಲ. ಹೆಚ್.ಐ.ವಿ ಸೋಂಕಿತರು/ ಭಾದಿತರ ಬಗ್ಗೆ ಯಾವುದೇ ತಾರತಾಮ್ಯ, ಕಳಂಕ ಬೇಡ, ಅವರಿಗೂ ಸಮಾಜದಲ್ಲಿ ಎಲ್ಲರೊಂದಿಗೆ ಬಾಳಿ ಬದುಕುವ ಅವಕಾಶವನ್ನು ನೀಡೋಣ ಎಂದರು.

ವೆನ್‍ಲಾಕ್ ಅಧೀಕ್ಷಕ ಡಾ.ಶಿವಪ್ರಕಾಶ್ ಮಾತನಾಡಿ, ಹದಿಹರೆಯದ ಯುವಜನತೆಯಲ್ಲಿ ಮನಸ್ಸಿನಲ್ಲಿ ಅನೇಕ ತಲ್ಲಣ, ಕಾತುರಗಳ ಗೊಂದಲದೊಂದಿಗೆ ಎಡವುದುಂಟು. ಈ ಸಮಯದಲ್ಲಿ ಸೂಕ್ತ ರೀತಿಯ ಮಾರ್ಗದರ್ಶನವು ಸದೃಢ ಆರೋಗ್ಯಕರ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಸುರತ್ಕಲ್ ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ಕಿಶೋರ್ ಕುಮಾರ್ ಎಂ. ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ, ರೆಡ್ ರಿಬ್ಬನ್ ಕಬ್ಲ್‍ಗಳ ಮೂಲಕ ಹೆಚ್.ಐ.ವಿ ಏಡ್ಸ್ ಬಗ್ಗೆ ಹೆಚ್ಚಿನ ಜಾಗೃತಿಯನ್ನು ಮೂಡಿಸಬೇಕಾಗಿದೆ. ವಿದ್ಯಾರ್ಥಿ ಜೀವನದಲ್ಲಿ ರೂಢಿಸಿಕೊಳ್ಳುವ ಮೌಲ್ಯ ಜೀವನದುದ್ದಕ್ಕೂ ಸಹಕಾರಿಯಾಗುತ್ತದೆ. ಜೀವನದಲ್ಲಿ ನಿಗದಿತ ಗುರಿಯನ್ನು ತಲುಪಿ ಯಶಸ್ಸನ್ನು ಸಾಧಿಸಲು ಉನ್ನತ ಧ್ಯೇಯ ಮೌಲ್ಯ ಮತ್ತು ಶಿಸ್ತು ಅತೀ ಮುಖ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಸಭಾಪತಿ ಸಿ.ಎ ಶಾಂತಾರಾಮ್ ಶೆಟ್ಟಿ ವಹಿಸಿದ್ದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಆರ್. ತಿಮ್ಮಯ್ಯ ವಿಶ್ವ ಏಡ್ಸ್ ದಿನ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಖತೀಜಾ ದಿಲ್‍ಷದ್ ಸ್ವಾಗತಿಸಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ. ಕೆ ಉಳೆಪಾಡಿ ನಿರೂಪಿಸಿದರು. ತಾರಾನಾಥ ವಂದಿಸಿದರು.


Spread the love
Subscribe
Notify of

0 Comments
Inline Feedbacks
View all comments