ಮಕ್ಕಳಿಗೆ ಆರೋಗ್ಯಕರ ಪರಿಸರ ನಿರ್ಮಿಸಿ- ಜಿಲ್ಲಾ ನ್ಯಾಯಾಧೀಶರು

Spread the love

ಮಕ್ಕಳಿಗೆ ಆರೋಗ್ಯಕರ ಪರಿಸರ ನಿರ್ಮಿಸಿ- ಜಿಲ್ಲಾ ನ್ಯಾಯಾಧೀಶರು

ಉಡುಪಿ: ಮಕ್ಕಳು ದೇಶದ ಭವಿಷ್ಯದ ಪ್ರಜೆಗಳು, ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯದ ಕುರಿತು ಸಮಾಜದಲ್ಲಿ ಆರೋಗ್ಯಕರ ವಾತಾವರಣ ನಿರ್ಮಿಸುವುದು ಎಲ್ಲಾ ಸರಕಾರಗಳ ಮತ್ತು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೆವೆಗಳ ಪ್ರಾಧಿಕಾರದ ಅಧ್ಯಕ್ಷ ಟಿ.ವೆಂಕಟೇಶ ನಾಯ್ಕ್ ತಿಳಿಸಿದ್ದಾರೆ.

ಅವರು ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ‘ಮಕ್ಕಳ ಹಕ್ಕುಗಳ ಸೂಕ್ಷ್ಮತೆ, ಕಡ್ಡಾಯ ಶಿಕ್ಷಣ ಕಾಯ್ದೆ, ಬಾಲ್ಯವಿವಾಹ ನಿಷೇದs ಕಾಯ್ದೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ, ಬಾಲಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಮತ್ತು ಹಿರಿಯ ನಾಗರಿಕರಿಗೆ ಇಲಾಖಾ ಸವಲತ್ತುಗಳು ವಿಷಯಗಳ ಬಗ್ಗೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಮತ್ತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯಾವುದೇ ಲಿಂಗ, ಜಾತಿ , ವರ್ಗ ಬೇಧವಿಲ್ಲದೆ ಪ್ರತಿಯೊಂದು ಮಗುವಿಗೆ ಸೂಕ್ತ ಪೌಷ್ಠಿಕ ಆಹಾರ, ವಿದ್ಯಾಭ್ಯಾಸ , ರಕ್ಷಣೆ ಮತ್ತು ಆರೋಗ್ಯ ಸೇವೆ, ಪೋಷಣೆ ಒದಗಿಸಿ ಅವರನ್ನು ದೈಹಿಕ ಮತ್ತು ಮಾನಸಿಕವಾಗಿ ಸದೃಡರನ್ನಾಗಿ ಮಾಡಿದರೆ ದೇಶ ಸದೃಢಗೊಳ್ಳಲಿದೆ, ದುರ್ಬಲ ಮಕ್ಕಳಿಂದ ದೇಶ ಮತ್ತು ಸಮಾಜದ ಪ್ರಗತಿಗೆ ಹಿನ್ನಡೆಯಾಗಲಿದೆ, ಪ್ರತಿಯೊಂದು ಮಗುವೂ ದೇಶದ ಆಸ್ತಿ, ಸಂವಿಧಾನದಲ್ಲಿ ಮಕ್ಕಳ ರಕ್ಷಣೆ ಪೋಷಣೆಗಾಗಿಯೇ ಅಗತ್ಯ ಕಾನೂನುಗಳನ್ನು ರೂಪಿಸಲಾಗಿದ್ದು, ಇವುಗಳ ಪಾಲನೆಯಲ್ಲಿ ಯಾವುದೇ ನಿರ್ಲಕ್ಷ ತೋರದೆ, ಮಕ್ಕಳಿಗಾಗಿ ಸ್ವಸ್ಥ ಸಮಾಜದ ನಿರ್ಮಾಣದ ಜವಾಬ್ದಾರಿ ನಿರ್ವಹಿಸುವುದು ಪೋಷಕರಿಗೆ ಮಾತ್ರವಲ್ಲದೇ ಎಲ್ಲಾ ಸರಕಾರಗಳಿಗೂ ಕಡ್ಡಾಯವಾಗಿದೆ ಎಂದು ತಿಳಿಸಿದರು.

ಬಡತನ , ಶಿಕ್ಷಣ ಮತ್ತು ಅರ್ಥಿಕ ಕಾರಣಗಳಿಂದ ಮಕ್ಕಳು ಬಾಲಕಾರ್ಮಿಕರಾಗುತ್ತಿದ್ದಾರೆ, 14 ವರ್ಷಗಳಿಗಿಂತ ಮಕ್ಕಳನ್ನು ಕಾರ್ಮಿಕರನ್ನಾಗಿ ಬಳಸುವುದು ಅಪಾಯಕಾರಿ, ದೇಶದಲ್ಲಿ ಬಾಲ್ಯ ವಿವಾಹ ಪ್ರಮಾಣ ಸಹ ಅಧಿಕವಾಗಿದ್ದು, ಇತ್ತಿಚಿನ ವರದಿಯಂತೆ ದೇಶದ ಶೇ.45 ಬಾಲಕಿಯರು ಮತ್ತು ಶೇ.18 ರಷ್ಟು ಬಾಲಕರು ಬಾಲ್ಯ ವಿವಾಹಕ್ಕೆ ಸಿಲುಕಿದ್ದಾರೆ, ರಾಜ್ಯದಲ್ಲಿ 1333 ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿವೆ , ಇವುಗಳನ್ನು ತಡೆಯುವ ಜವಾಬ್ದಾರಿ ಪ್ರತಿ ಇಲಾಖೆಗೆ ನೀಡಲಾಗಿದೆ , ಎಲ್ಲ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ನ್ಯಾಯಾಧೀಶರು ಹೇಳಿದರು.

ಇದೇ ಸಂದರ್ಭಲ್ಲಿ ಹಿರಿಯ ನಾಗರಿಕರಿಗೆ ಲಭ್ಯವಿರುವ ಸೌಲಭ್ಯಗಳ ಕುರಿತು ಕರಪತ್ರ ಹಾಗೂ ಭಿತ್ತಿಪತ್ರಗಳನ್ನು ನ್ಯಾಯಾಧೀಶರು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಡಾ. ವನಿತಾ ಎನ್.ತೊರವಿ , ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ನಿಷೇಧದಲ್ಲಿ ಉಡುಪಿ ಜಿಲ್ಲೆ ರಾಜ್ಯಕ್ಕೇ ಮಾದರಿಯಾಗಿದೆ, ಜಿಲ್ಲೆಯಲ್ಲಿ ಆಯೋಗದ ವತಿಯಿಂದ ಕೈಗೊಳ್ಳುವ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತದಿಂದ ಉತ್ತಮ ಬೆಂಬಲ ದೊರೆಯುತ್ತಿದೆ, ವಲಸೆ ಮಕ್ಕಳ ಮೆಲೆ ಹೆಚ್ಚಿನ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿದ್ದು, ಸಂಘ ಸಂಸ್ಥೆಗಳು ಹಾಗೂ ಪಾಲಕರು ಈ ಕುರಿತು ಗಮನ ಹರಿಸಬೇಕಿದೆ ಎಂದರು.
ಆಯೋಗ ಮತ್ತು ಕಾನೂನು ಸೇವಾ ಪ್ರಾಧಿಕಾರದ ಮೂಲಕ, ರಾಜ್ಯಾದ್ಯಂತ ಮಕ್ಕಳ ಹಕ್ಕುಗಳ ರಕ್ಷಣೆ, ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ಪದ್ದತಿ ಕುರಿತು ಅರಿವು ಮೂಡಿಸಲು ಪ್ರಚಾರ ವಾಹನಗಳ ಮೂಲಕ ಅರಿವು ಮೂಡಿಸುತ್ತಿದ್ದು, ಉಡುಪಿ ಜಿಲ್ಲೆಯಲ್ಲಿ ಜೂನ್ 8 ರಿಂದ 12 ರ ವರೆಗೆ ಜಿಲ್ಲೆಯಾದ್ಯಂತ ಈ ಅರಿವು ಕಾರ್ಯಕ್ರಮ ನಡೆಯಲಿದೆ ಎಂದು ತೊರವಿ ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ ಮಾತನಾಡಿ, ಮಕ್ಕಳ ರಕ್ಷಣೆಗೆ ಹಲವು ಕಾನೂನುಗಳಿದ್ದರೂ ಸಹ ಪರಿಣಾಮಕಾರಿಯಾಗಿ ಪಾಲನೆಯಾಗುತ್ತಿಲ್ಲ, ಕಾನೂನುಗಳ ಕುರಿತು ಪ್ರತಿಯೊಬ್ಬರಿಗೂ ಅರಿವು ಮೂಡಿಸಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಮಾತನಾಡಿ, ಮಕ್ಕಳ ಮೇಲೆ ಪರಿಚಿತರು ಮತ್ತು ಸಂಬಂದಿಕರಿಂದಲೇ ದೌರ್ಜನ್ಯ ನಡೆಯುತ್ತಿದೆ, ಇದರಿಂದ ಸಮಾಜದ ಬೆಳವಣಿಗೆ ಕುಂಠಿತ ಆಗಲಿದೆ, ಮಕ್ಕಳ ರಕ್ಷಣೆಗೆ ಎಲ್ಲಾ ಇಲಾಖೆಗಳು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಬೇಕು, ಗ್ರಾಮ ಮಟ್ಟದಿಂದ ಅರಿವು ಕಾರ್ಯಕ್ರಮಗಳು ನೆಡೆಯಬೇಕು ಎಂದು ಹೇಳಿದರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಿ.ಕೆ. ನಾರಾಯಣ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕರಿಗಳು ಮತು ಪೊಲೀಸ್ ಸಿಬ್ಬಂದಿ ಹಾಜರಿದ್ದರು.
ವಿವಿಧ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಗ್ರೇಸಿ ಗೋನ್ಸಾಲ್ವಿಸ್ ಸ್ವಾಗತಿಸಿದರು, ವಿಕಲಚೇತನರ ಮತ್ತು ಹಿರಿಯ ನಾಗರೀಕ ಸಬಲೀಕರಣ ಇಲಾಖೆಯ ಉಪ ನಿರ್ದೇಶಕ ನಿರಂಜನ ಭಟ್ ವಂದಿಸಿದರು, ಉಡುಪಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಿವೇಕಾನಂದ ನಿರೂಪಿಸಿದರು.


Spread the love