ಮಣಿಪಾಲ ಮಹಿಳೆಯ ಸರ ಅಪಹರಣ – ಆರೋಪಿಯನ್ನು ಬಂಧಿಸಿದ ಪೊಲೀಸರು

Spread the love

ಮಣಿಪಾಲ ಮಹಿಳೆಯ ಸರ ಅಪಹರಣ – ಆರೋಪಿಯನ್ನು ಬಂಧಿಸಿದ ಪೊಲೀಸರು

ಉಡುಪಿ: ಕ್ಷಿಪ್ರ ಕಾರ್ಯಾಚರಣೆಯೊಂದರಲ್ಲಿ ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯ ಮಂಚಿಕೋಡಿಯಲ್ಲಿ ಸೆಪ್ಟೆಂಬರ್ 12ರಂದು ಬೆಳಿಗ್ಗೆ ಮಹಿಳೆಯ ಚಿನ್ನದ ಸರ ಸುಲಿಗೆ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತನನ್ನು ಮಂಚಿಕುಮೇರಿಯ ಪ್ರವೀಣ್ ನಾಯ್ಕ (32) ಎಂದು ಗುರುತಿಸಲಾಗಿದೆ.

ಸೆಪ್ಟೆಂಬರ್ 12ರಂದು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಂಚಿಕೋಡಿ ನಿವಾಸಿ ಮಾಧು ನಾಯ್ಕರವರ ಮಗಳಾದ ಲಲಿತಾ ನಾಯ್ಕರವರು ಮಣಿಪಾಲ ಪ್ರೆಸ್ಗೆ ಕೆಲಸಕ್ಕೆಂದು ಮನೆಯಿಂದ ನಡೆದುಕೊಂಡು ಹೋಗುತ್ತಿರುವಾಗ ಮಂಚಿಕೋಡಿ ಗದ್ದೆಯ ಬಳಿ ಓರ್ವ ವ್ಯಕ್ತಿಯು ತಲೆಗೆ ಕೆಂಪು ಬಣ್ಣದ ಹೆಲ್ಮೆಟ್ ಹಾಕಿಕೊಂಡು, ರೈನ್ ಕೋಟ್ ಧರಿಸಿಕೊಂಡು ಪಿರ್ಯಾದಿದಾರರ ಬಳಿ ಬಂದು ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸುಲಿಗೆ ಮಾಡಿಕೊಂಡು ಹೋದ ಬಗ್ಗೆ ಲಲಿತಾ ನಾಯ್ಕ ಅವರು ದೂರು ನೀಡಿದ್ದರು. ಅಲ್ಲದೇ ತನ್ನ ದೂರಿನಲ್ಲಿ ತನ್ನದೇ ಊರಿನವನಾದ ಪರಿಚಯವಿರುವ ಪ್ರವೀಣ ನಾಯ್ಕ ಎಂಬಾತನೇ ಈ ಕೃತ್ಯ ಎಸಗಿರುವುದಾಗಿ ತಿಳಿಸಿದ್ದಾರೆ.

ಲಲಿತಾ ನಾಯ್ಕರ ದೂರಿನಂತೆ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಆತನು ಸುಲಿಗೆ ಮಾಡಿದ ರೂಪಾಯಿ 9,000/- ಮೌಲ್ಯದ ಅರ್ಧ ತುಂಡಾದ ಚಿನ್ನದ ಸರವನ್ನು ಆತನಿಂದ ಸ್ವಾಧೀನಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಶಾ ಜೇಮ್ಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಚಂದ್ರ ಹಾಗೂ ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಟಿ. ಜೈಶಂಕರ್ರವರ ಮಾರ್ಗದರ್ಶನದಲ್ಲಿ ಮಣಿಪಾಲ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕರಾದ ಸಂಪತ್ ಕುಮಾರ್.ಎ ಹಾಗೂ ಪೊಲೀಸ್ ಉಪನಿರೀಕ್ಷಕರಾದ ಶ್ರೀಧರ ನಂಬಿಯಾರ್ ಎಂ.ಪಿ. ಹಾಗೂ ಇತರ ಸಿಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು


Spread the love