ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಈಜು ಕೊಳ; ರಿಪೇರಿಗೆ ಆಗ್ರಹಿಸಿ ಹೊಂಡದಲ್ಲಿ ಈಜಿ ಪ್ರತಿಭಟನೆ!

Spread the love

ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಈಜು ಕೊಳ; ರಿಪೇರಿಗೆ ಆಗ್ರಹಿಸಿ ಹೊಂಡದಲ್ಲಿ ಈಜಿ ಪ್ರತಿಭಟನೆ!

ಉಡುಪಿ: ಮಲ್ಪೆ-ತೀರ್ಥಹಳ್ಳೀ ರಾಷ್ಟ್ರೀಯ ಹೆದ್ದಾರಿಯು ಶಿಕ್ಷಣ ನಗರ ಮಣಿಪಾಲದ ಬಳಿ ಸಂಪೂರ್ಣ ಹೊಂಡಮಯವಾಗಿ ಈಜು ಕೊಳದಂತಾಗಿ ಮಾರ್ಪಟ್ಟಿದ್ದು, ಸಮಾಜ ಸೇವಕ ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ ಇಲಾಖೆಯ ಗಮನ ಸೆಳೆಯಲು ವಿನೂತನ ರೀತಿಯ ಪ್ರತಿಭಟನೆ ಮಂಗಳವಾರ ನಡೆಯಿತು.

ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ರಸ್ತೆಯ ಬೃಹತ್ ಹೊಂಡದಲ್ಲಿ ಈಜಾಡಿದರೆ ತಾರನಾಥ ಮೇಸ್ತ ಅವರು ಗಾಳ ಹಾಕಿ ಮೀನು ಹಿಡಿಯುವ ಅಣಕು ಪ್ರದರ್ಶನ ಮಾಡಿದರು. ಈ ಮೂಲಕ ಪ್ರತಿಭಟನಾಕಾರರು ನಿದ್ದೆಯಲ್ಲಿರುವ ಕೇಂದ್ರ ಸರಕಾರವನ್ನು ಎಚ್ಚರಿಸುವ ಪ್ರಯತ್ನ ಮಾಡಿದರು.

ಮಣಿಪಾಲ ಸಿಂಡಿಕೇಟ್ ಸರ್ಕಲ್ ಬಳಿಯಿಂದ ಎಂ ಐ ಟಿ ವರೆಗಿನ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹೊಂಡಗಳಿಂದ ತುಂಬಿದ್ದು ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ. ಹಲವಾರು ಬಾರಿ ಸಂಸದರು ಹಾಗೂ ಇತರ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಕೂಡ ಯಾವುದೇ ರೀತಿಯ ಸ್ಪಂದನ ಕೂಡ ದೊರೆತಿಲ್ಲ ಇದರಿಂದ ಬೇಸತ್ತ ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು ಮತ್ತು ತಾರಾನಾಥ ಮೇಸ್ತ ಅವರು ವಿನೂತನ ಪ್ರತಿಭಟನೆಯ ಮಾರ್ಗವನ್ನು ಹಿಡಿದ್ದಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ನಿತ್ಯಾನಂದ ಒಳಕಾಡು ಅವರು ಮಣಿಪಾಲ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಅಂತರಾಷ್ಟ್ರೀಯ ಖ್ಯಾತಿಯನ್ನು ಹೊಂದಿದೆ ಇದರಿಂದಾಗಿ ಇಲ್ಲಿಗೆ ದೇಶ ವಿದೇಶದಿಂದ ಸಾವಿರಾರು ಮಂದಿ ಬರುತ್ತಿದ್ದಾರೆ. ಈ ವರೆಗೆ ರಾಜ್ಯ ಹೆದ್ದಾರಿಯಾಗಿದ್ದ ಈ ರಸ್ತೆಯನ್ನು ಕೇಂದ್ರ ಸರಕಾರ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಿದೆ. ದೇಶ ವಿದೇಶದ ಜನರು ಬರುವ ರಾಷ್ಟ್ರೀಯ ಹೆದ್ದಾರಿಯು ಗ್ರಾಮ ಪಂಚಾಯತ್ ರಸ್ತೆಗಳಿಗಿಂದ ತೀರ ಹದಗೆಟ್ಟಿದ್ದು ಆಡಳಿತ ವ್ಯವಸ್ಥೆ ಸಂಪೂರ್ಣ ನಿರ್ಲಕ್ಷತೆಯನ್ನು ವಹಿಸಿದೆ. ರಸ್ತೆಯ ಹೊಂಡಗಳಲ್ಲಿ ಮಳೆಯ ನೀರು ತುಂಬಿ ಈಜುಕೊಳವಾಗಿ ಮಾರ್ಪಟ್ಟಿದ್ದು, ಪ್ರತಿನಿತ್ಯ ನೂರಾರು ಅಂಬುಲೆನ್ಸ್ ಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತವೆ. ರೋಗಿಗಳಿಗೆ ಈ ರಸ್ತೆಯಲ್ಲಿ ಸಾಗುವುದು ಕಷ್ಟದ ಕೆಲಸವಾಗಿದ್ದು ಇನ್ನಾದರೂ ಸರಕಾರ ಎಚ್ಚೆತ್ತುಕೊಂಡು ರಸ್ತೆಯನ್ನು ದುರಸ್ತಿಗೊಳಿಸಲಿ ಎಂದು ಸರಕಾರವನ್ನು ಎಚ್ಚರಿಸುವ ಸಲುವಾಗಿ ವಿನೂತನ ಪ್ರತಿಭಟನೆಯನ್ನು ನಡೆಸಲಾಗಿದೆ ಎಂದರು.


Spread the love