ಮನಪಾ: ನೀರಿನ ದರ ಇಳಿಕೆಗೆ ಜೆಡಿಎಸ್ ವಕ್ತಾರ ಸುಶೀಲ್ ನೊರೊನ್ಹ ಆಗ್ರಹ ಮಂಗಳೂರು:

Spread the love

ಮನಪಾ: ನೀರಿನ ದರ ಇಳಿಕೆಗೆ ಜೆಡಿಎಸ್ ವಕ್ತಾರ ಸುಶೀಲ್ ನೊರೊನ್ಹ ಆಗ್ರಹ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಅವಧಿ ಮುಕ್ತಾಯಗೊಂಡ ನಂತರ ಜಿಲ್ಲಾಡಳಿತದ ಅವಧಿಯಲ್ಲಿ ಮಹಾನಗರ ಪಾಲಿಕೆಯ ಆಯುಕ್ತರು ನೀರಿನ ದರವನ್ನು ಗೃಹ ಬಳಕೆ, ವಾಣಿಜ್ಯ ಹಾಗೂ ಕೈಗಾರಿಕೆಗಳಿಗೆ ದರ ಏರಿಸಿದ್ದು, ಹೆಚ್ಚು ಸಮಸ್ಯೆಗಳು ಉದ್ಘವಿಸುತ್ತಿದ್ದು, ಕೂಡಲೇ ನೀರಿನ ದರದಲ್ಲಿ ಇಳಿಕೆ ಮಾಡಬೇಕು ಎಂದು ಜಿಲ್ಲಾ ಜೆಡಿಎಸ್ ವಕ್ತಾರ ಸುಶೀಲ್ ನೊರೊನ್ಹ ಆಗ್ರಹಿಸಿದ್ದಾರೆ.

ಪಾಲಿಕೆಯಿಂದ ಗೃಹ ಬಳಕೆಯ ನೀರಿನ ದರವನ್ನು ಅವೈಜ್ಞಾನಿಕವಾಗಿ ಏರಿಕೆ ಮಾಡಲಾಗಿದೆ. ಕನಿಷ್ಠ ಮಾಸಿಕ ಶುಲ್ಕದೊಂದಿಗೆ 15 ಸಾವಿರ ಲೀಟರ್‌ಗಳ ನೀರಿನ ಬಳಕೆಯನ್ನು ಎಂಟು ಸಾವಿರ ಲೀಟರ್‌ಗೆ ಇಳಿಸಲಾಗಿದೆ. ಆ ನಂತರ ಪ್ರತಿ ಸಾವಿರ ಲೀಟರ್‌ಗಳಿಗೆ ಮೂರು ನಾಲ್ಕು ಪಟ್ಟ ದರವನ್ನು ಏರಿಸಿರುವುದು ಖಂಡನೀಯ ಎಂದು ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.
ಜನಸಾಮಾನ್ಯರಿಗೆ ನೀರಿನ ಬಿಲ್ ನಾಲ್ಕು ಪಟ್ಟು ಜಾಸ್ತಿ ಬರುತ್ತಿದೆ. ಇದರಿಂದ ತೀವ್ರ ಕಂಗಾಲಾಗಿದ್ದಾರೆ. ಮಹಾನಗರ ಪಾಲಿಕೆಯ ಜನಪ್ರತಿನಿಧಿಗಳ ಚುನಾವಣೆ ನಡೆದಿದ್ದು, ಜನರು ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿದ್ದಾರೆ. ಎರಡು ತಿಂಗಳು ಕಳೆದರೂ ಯಾವುದೇ ಅಡೆತಡೆ ಇಲ್ಲದಿದ್ದರೂ ಅಧಿಕಾರ ನಡೆಸಲು ಆಗದಿರುವುದು ಸರಕಾರದ ಕಾರ್ಯ ವೈಖರಿಯ ವೈಫಲ್ಯತೆಗೆ ಸಾಕ್ಷಿಯಾಗಿದೆ ಎಂದರು.

ಅಧಿಕಾರ ನಡೆಸಲಿ ಬಿಡಲಿ ಬಿಜೆಪಿ ತನ್ನ ಚುನಾವಣೆಯ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಂತೆ ಮಹಾನಗರ ಪಾಲಿಕೆಗೆ ಸಂಬಂಧಪಟ್ಟ ಇಬ್ಬರು ಶಾಸಕರು ಲೋಕಸಭಾ ಸದಸ್ಯರು, ಉಸ್ತುವಾರಿ ಸಚಿವರು ತಮ್ಮ ಅಧಿಕಾರ ಬಳಸಿ ಜನಸಾಮಾನ್ಯರಿಗೆ ಆಗುವ ಕಷ್ಟವನ್ನು ದೂರ ಪರಿಹರಿಸಬೇಕು. ಈ ಹಿಂದೆ ಇದ್ದ ನೀರಿನ ದರವನ್ನೇ ಜಾರಿಗೊಳಿಸುವ ಮೂಲಕ ತಮಗೆ ಜನಪರ ಕಾಳಜಿವಿದೆ ಎನ್ನುವುದನ್ನು ತೋರಿಸಲಿ ಎಂದು ಜಿಲ್ಲಾ ಜೆಡಿಎಸ್ ವಕ್ತಾರ ಸುಶೀಲ್ ನೊರೊನ್ಹ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Spread the love