ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಕಬ್ಬಡಿ ಸಹಕಾರಿ : ದಿನೇಶ್ ಪುತ್ರನ್
ಉಡುಪಿ ಜಿಲ್ಲಾ ಅಮೆಚೂರ್ ಕಬ್ಬಡಿ ಅಸೋಸಿಯೇಷನ್ ವಾರ್ಷಿಕ ಮಹಾಸಭೆ
ಬ್ರಹ್ಮಾವರ: ಭಾರತದ ಹೆಮ್ಮೆಯ ಕ್ರೀಡೆಯಾದ ಕಬ್ಬಡಿ ಆಟ ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಅನೇಕ ಕೊಡುಗೆ ನೀಡುತ್ತದೆ ಎಂದು ಉಡುಪಿ ಜಿಲ್ಲಾ ಅಮೆಚೂರ್ ಕಬ್ಬಡಿ ಅಸೋಸಿಯೇಷನ್ ಅಧ್ಯಕ್ಷ ದಿನೇಶ್ ಪುತ್ರನ್ ಹೇಳಿದರು.
ಇಲ್ಲಿನ ರೋಟರಿ ಸಭಾಂಗಣದಲ್ಲಿ ಭಾನುವಾರ ನಡೆದ ಉಡುಪಿ ಜಿಲ್ಲಾ ಅಮೆಚೂರ್ ಕಬ್ಬಡಿ ಅಸೋಸಿಯೇಷನ್ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಮಟ್ಟದಿಂದಲೂ ಪ್ರತಿಭೆಗಳ ಅನ್ವೇಷಣೆ ಆಗಬೇಕು ಎನ್ನುವ ಉದ್ದೇಶದಿಂದ ತಾಲ್ಲೂಕು ಅಸೋಸಿಯೇಷನ್ ಮೂಲಕ ಪಂದ್ಯಾಟ ಹಾಗೂ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗುತ್ತಿದೆ. ಉಡುಪಿಯಲ್ಲಿ ಮಾಜಿ ಕೇಂದ್ರ ಸಚಿವರಾದ ಆಸ್ಕರ್ ಫೆರ್ನಾಂಡಿಸ್ ಅವರ ನೆನಪಿನಲ್ಲಿ ಅಂದಾಜು ₹6.7 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಬ್ಬಡಿ ಒಳಾಂಗಣ ಕ್ರೀಡಾಂಗಣ ಹಾಗೂ ತರಬೇತಿ ಕೇಂದ್ರ ನಿರ್ಮಾಣದ ಗುರಿ ಇರಿಸಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಅಸೋಸಿಯೇಷನ್ ಉಪಾಧ್ಯಕ್ಷ ರಾಜೇಶ್ ಕೆ.ಸಿ ಅಗಲಿದ ಕಬ್ಬಡಿ ಆಟಗಾರರು ಹಾಗೂ ಸಂಘಟಕರಿಗೆ ನುಡಿ-ನಮನ ಸಲ್ಲಿಸಿದರು.
ಜಿಲ್ಲಾ ಚೇರ್ಮನ್ ಆರೂರು ತಿಮ್ಮಪ್ಪ ಶೆಟ್ಟಿ ಅವರು, ತಾಲ್ಲೂಕು ಮಟ್ಟದಲ್ಲಿ ಅಸೋಸಿಯೇಷನ್ ಚಟುವಟಿಕೆಗಳನ್ನು ಸಕ್ರೀಯಗೊಳಿಸುವ ಹಾಗೂ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಪಂದ್ಯಾಟಗಳನ್ನು ಸಂಘಟಿಸುವ ಕುರಿತು ಮಾರ್ಗದರ್ಶನ ನೀಡಿದರು.
ರಾಜ್ಯ ಅಮೆಚೂರ್ ಕಬ್ಬಡಿ ಅಸೋಸಿಯೇಷನ್ ಮಾಜಿ ಉಪಾಧ್ಯಕ್ಷ ರಾಜೇಂದ್ರ ಸುವರ್ಣ ಅವರು ಸಂಪನ್ಮೂಲ ಕ್ರೋಢಿಕರಣ ಹಾಗೂ ಪಂದ್ಯಾಟಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ಹೆಬ್ರಿ ತಾಲ್ಲೂಕು ಅಸೋಸಿಯೇಷನ್ ಸಂಚಾಲಕ ಸೀತಾನದಿ ವಿಠ್ಠಲ್ ಶೆಟ್ಟಿ, ಹರ್ಷ ಶೆಟ್ಟಿ , ಬ್ರಹ್ಮಾವರ ಅಸೋಸಿಯೇಷನ್ ಕಾರ್ಯದರ್ಶಿ ಶ್ರೀಧರ ವಿ ಶೆಟ್ಟಿ, ಜಿಲ್ಲಾ ಜೊತೆ ಕಾರ್ಯದರ್ಶಿ ಸುಧಾಕರ ಕೋಟ್ಯಾನ್,
ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಉಪ್ಪುಂದ, ಕಾರ್ಯದರ್ಶಿ ಕಿಶೋರ್ ಸಸಿಹಿತ್ಲು, ಭರತ್ ಹೆಬ್ರಿ, ಕರುಣಾಕರ ಬ್ರಹ್ಮಾವರ ಸಲಹೆ – ಸೂಚನೆ ನೀಡಿ ಮಾತನಾಡಿದರು.
ಕಬ್ಬಡಿ ಬಾಲಕರ ತಂಡವನ್ನು ಪ್ರತಿನಿಧಿಸಿದ್ದ ಶರಣ್ ಅಜೆಕಾರು, ಬಾಲಕಿಯರ ರಾಜ್ಯ ತಂಡ ಪ್ರತಿನಿಧಿಸಿದ್ದ ಸಾಕ್ಷೀ ಕಾರ್ಕಳ ಅವರನ್ನು ಸನ್ಮಾನಿಸಲಾಯಿತು. ಎಸ್‌ವಿಟಿ ಪದವಿ ಪೂರ್ವ ಕಾಲೇಜಿನ ಕ್ರೀಡಾ ಶಿಕ್ಷಕಿ ಪ್ರಭಾವತಿ ಅವರನ್ನು ಗೌರವಿಸಲಾಯಿತು.
ಜಿಲ್ಲಾ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಪ್ರಾಣೇಶ್ ಎಸ್.ಕೆ ವರದಿ ಮಂಡಿಸಿ, ನಿರೂಪಿಸಿದರು. ಜಿಲ್ಲಾ ರೆಫ್ರಿ ಬೋರ್ಡ್ ಚೇರ್ಮನ್ ಶಶಿಧರ ಶೆಟ್ಟಿ, ಸಂಚಾಲಕ ಅರುಣ್ ಕುಮಾರ ಶೆಟ್ಟಿ, ಶಂಶಾಕ್ ಬೈಂದೂರು ಇದ್ದರು.