ಮರಣ ಹೊಂದಿದವರಿಗೆ ಗೃಹಲಕ್ಷ್ಮಿ ಮೊತ್ತ ಪಾವತಿ: ಹಿಂದಕ್ಕೆ ಪಡೆಯಲು ಸೂಚನೆ

Spread the love

ಮರಣ ಹೊಂದಿದವರಿಗೆ ಗೃಹಲಕ್ಷ್ಮಿ ಮೊತ್ತ ಪಾವತಿ: ಹಿಂದಕ್ಕೆ ಪಡೆಯಲು ಸೂಚನೆ

ಮಂಗಳೂರು : ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿದ ನಂತರ ಮರಣ ಹೊಂದಿದ ಫಲಾನುಭವಿಗಳ ಖಾತೆಗೆ ಜಮೆಯಾದ ಸಹಾಯಧನವನ್ನು ಮರಳಿ ಸರಕಾರಕ್ಕೆ ಹಿಂದಿರುಗಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು, ಆಯಾಯ ತಾಲೂಕು ಗ್ಯಾರಂಟಿ ಅಧ್ಯಕ್ಷರು ಸಮಗ್ರವಾಗಿ ಪರಿಶೀಲನೆ ನಡೆಸಬೇಕು ಎಂದು ದ.ಕ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಭರತ್ ಮುಂಡೋಡಿ ಸೂಚಿಸಿದರು.

ದ.ಕ ಜಿಪಂ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯ ಸರಕಾರದ ಮಹತ್ವದ ಯೋಜನೆಯಾಗಿರುವ ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ ಮರಣ ಹೊಂದಿದ 3,477 ಫಲಾನುಭವಿಗಳಿಗೆ 3.34 ಕೋ.ರೂ. ಜಮೆಯಾಗಿರುವ ಬಗ್ಗೆ ಕೇಂದ್ರ ಕಚೇರಿಯಿಂದ ಮಾಹಿತಿ ಬಂದಿದೆ. ಮರಣ ಹೊಂದಿದ ಫಲಾನುಭವಿಗಳಿಗೆ ಹಣ ಜಮೆಯಾಗುವುದನ್ನು ತಡೆದರೆ ಸರಕಾರದ ಹಣ ಪೋಲಾಗದಂತೆ ಮಾಡಬಹುದು. ಮೃತಪಟ್ಟ ಫಲಾನುಭವಿಗಳನ್ನು ಗೃಹಲಕ್ಷ್ಮಿ ಯೋಜನೆಯ ಪಟ್ಟಿಯಿಂದ ತೆಗೆಯಲು ಇಲಾಖೆಯು ಸೂಕ್ತ ಕ್ರಮವಹಿಸಬೇಕು ಎಂದು ಅವರು ಸೂಚಿಸಿದರು.

ಅನ್ನಭಾಗ್ಯ ಯೋಜನೆಯಡಿ ಅರ್ಕುಳದಲ್ಲಿ ಪಡಿತರ ಅಂಗಡಿ ತೆರೆಯುವ ಬಗ್ಗೆ ಸಮಸ್ಯೆ ಬಗೆಹರಿದಿಲ್ಲ ಎಂದು ಮಂಗಳೂರು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷರು ಹೇಳಿದರು.

ಪಡಿತರ ವಿತರಣೆ ಮಾಡುವಾಗ ಸರಬರಾಜುದಾರರು ಬೇಕಾಬಿಟ್ಟಿಯಾಗಿ ಅಕ್ಕಿಯನ್ನು ವಿತರಣೆ ಮಾಡದೆ ಎಚ್ಚರಿಕೆಯಿಂದ ಅಕ್ಕಿಯನ್ನು ವಿತರಣೆ ಮಾಡುವ ಬಗ್ಗೆ ಸೂಕ್ತ ನಿರ್ದೇಶನ ನೀಡುವಂತೆ ಅಧ್ಯಕ್ಷರು ಸೂಚಿಸಿದರು.

ಸಾರ್ವಜನಿಕರು ಬಸ್ಸಿನಲ್ಲಿ ಪ್ರಯಾಣಿಸುವಾಗ ಅವರಿಗೆ ಗೌರವ ನೀಡುವ ಬಗ್ಗೆ ಚಾಲಕರು/ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಬೇಕು. ಪ್ರಥಮ ಬಾರಿಗೆ ನೇಮಕಾತಿಯಾಗುವ ಚಾಲಕರು/ಸಿಬ್ಬಂದಿಯವರಿಗೆ ಸಾರ್ವಜನಿಕ ಸೇವೆಯ ಬಗ್ಗೆ ತರಬೇತಿ ನೀಡುವ ಅಗತ್ಯವಿದೆ ಎಂದರು.

ಯುವನಿಧಿ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ 7,734 ಮಂದಿ ನೋಂದಣಿ ಮಾಡಿಸಿಕೊಂಡಿದ್ದು, 6179 ಮಂದಿಗೆ ಡಿಬಿಟಿ ಪಾವತಿಯಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಕಳೆದ ಎರಡು ವಷರ್ಗಳಿಂದ ಯುವನಿಧಿಯಡಿ ಸಹಾಯಧನ ಪಡೆದ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಭರತ್ ಮುಂಡೋಡಿ ಸೂಚಿಸಿದರು.

ಸಭೆಯಲ್ಲಿ ಜಿಪಂ ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಸುಷ್ಮಾ ಕೆ.ಎಸ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಜೋಕಿಂ ಡಿಸೋಜ, ಶೇಖರ್ ಕುಕ್ಕೇಡಿ, ಸುರೇಖಾ ಚಂದ್ರಹಾಸ್, ನಾರಾಯಣ ನಾಯಕ್, ಸದಸ್ಯರಾದ ಸುರೇಂದ್ರ ಕಂಬಳಿ, ಆಲಿಸ್ಟನ್ ಕ್ಲೈವ್ ಡಿಕುನ್ಹಾ, ಅರುಣ್ ಕುಮಾರ್ ಶೆಟ್ಟಿ, ಆಲ್ವಿನ್ ಕ್ಲೆಮೆಂಟ್ ಕುಟಿನ್ಹ, ಜಯಂತಿ ಬಿ.ಎ., ಶಾಹುಲ್ ಹಮೀದ್, ಉಮಾನಾಥ್ ಶೆಟ್ಟಿ, ಪದ್ಮನಾಭ ಸಾಲ್ಯಾನ್, ಸುಧೀರ್ ಕುಮಾರ್ ಶೆಟ್ಟಿ, ಎಸ್.ರಫೀಕ್, ಶಾಂತಲಾ ಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.


Spread the love
Subscribe
Notify of

0 Comments