ಮರಳು ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಕಾರ್ಮಿಕ ವೇದಿಕೆ ಉಪವಾಸ ಸತ್ಯಾಗ್ರಹ

Spread the love

ಮರಳು ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಕಾರ್ಮಿಕ ವೇದಿಕೆ ಉಪವಾಸ ಸತ್ಯಾಗ್ರಹ

ಉಡುಪಿ: ಮರಳುಗಾರಿಕೆ ನಿಷೇಧದಿಂದ ಬಡ ಕಾರ್ಮಿಕರಿಗೆ ಆಗುತ್ತಿರುವ ತೊಂದರೆಯ ವಿರುದ್ದ ಕರ್ನಾಟಕ ಕಾರ್ಮಿಕ ವೇದಿಕೆ ಇದರ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ನಗರದ ಕ್ಲಾಕ್ ಟವರ್ ಬಳಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಯಿತು.

ಈ ವೇಳೆ ಮಾತನಾಡಿದ ಕರ್ನಾಟಕ ಕಾರ್ಮಿಕ ವೇದಿಕೆ ಇದರ ಜಿಲ್ಲಾಧ್ಯಕ್ಷರಾದ ರವಿ ಶೆಟ್ಟಿ ಅವರು ಒಂದು ವರುಷದಿಂದ ಜಿಲ್ಲೆಯಲ್ಲಿ ಮರಳು ಅಭಾವ ಸೃಷ್ಟಿಯಾಗಿದ್ದು, ಇದನ್ನೇ ನಂಬಿರುವ ಸಾವಿರಾರು ಕೂಲಿ ಕಾರ್ಮಿಕರು ಅಕ್ಷರಶಃ ಬೀದಿಗೆ ಬಂದಿದ್ದಾರೆ.  ಇತ್ತೀಚಿನ ದಿನಗಳಲ್ಲಿ ಮರಳು ಸಮಸ್ಯೆ ವಿಚಾರ ಹಸಿರು ನ್ಯಾಯಾಧಿಕರಣದಲ್ಲಿದ್ದು, ಅದರಿಂದ ಸಾಕಷ್ಟು ಸಮಸ್ಯೆಯಾಗಿದ್ದು ಕಾರ್ಮಿಕರು ಮತ್ತು ಉಡುಪಿ ಜಿಲ್ಲೆಯ ಜನತೆಗೆ ಸಮಸ್ಯೆ ತಂದೊಡ್ಡಿದೆ. ಫೈನ್ಸಾನ್ಸ್ ಸಾಲ ಮಾಡಿ ಲಾರಿ ಟೆಂಪೊ ಖರೀದಿ ಮಾಡಿದ ಬಡ ಮಾಲಿಕರು ಸಾಲ ತೀರಿಸಲಾಗದೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.  ಮರಳು ಸಮಸ್ಯೆಯಿಂದ ಜಿಲ್ಲೆಯ ವ್ಯಾಪಾರ ವಹಿವಾಟು ತೀರ ಹದಗೆಟ್ಟಿದ್ದು, ಸಾಮಾನ್ಯ ಜನರು ಬದುಕುವುದೇ ದುಸ್ತರವಾಗಿದೆ.  ಟೊಲ್ಗೇಟ್ ಸಮಸ್ಯೆ ಎದುರಾದಾಗ ತಕ್ಷಣ ಎಚ್ಚೆತ್ತುಕೊಂಡು ಜಿಲ್ಲಾಡಳಿತ ತುರ್ತು ಸಭೆ ಕರೆದು ಸಮಸ್ಯೆ ಸ್ಪಂದಿಸಿರುವುದು ಸ್ವಾಗತಾರ್ಹ. ಆದರೆ ಜಿಲ್ಲೆಯ ಮುಖ್ಯ ಜೀವನೋಪಾಯದ ದಾರಿಯಾದ ಕಟ್ಟಡ ಸಾಮಾಗ್ರಿ ಮರಳು ಮತ್ತು ಸರಕಾರದ ಸೌಲಭ್ಯಗಳಲ್ಲಿ ಒಂದಾದ ವಸತಿ ಯೋಜನೆಗಳ ಮನೆಗೆ ಅರ್ಥದಲ್ಲಿಯೇ ನಿಂತಿದ್ದು ಬಡವರು ಕೂಲಿಕಾರ್ಮಿಕರು ಸಮಸ್ಯೆಗೆ ಸರಕಾರ ಸ್ಪಂದಿಸಬೇಕಾಗಿದೆ.

ಸರಕಾರ ಕೂಡಲೇ ಮರಳು ಸಮಸ್ಯೆ ಬಗೆಹರಿಸಿ, ನಾನ್ ಸಿ ಆರ್ ಝಡ್ ವ್ಯಾಪ್ತಿಯಲ್ಲಿ ಮರಳು ತೆಗೆಯಲು ಸಾಂಪ್ರದಾಯಿಕ ಪದ್ದತಿಗೆ ಒತ್ತು ನೀಡುವುದರೊಂದಿಗೆ ಮರಳು ಸಮಸ್ಯೆ ಇತ್ಯರ್ಥ ಆಗುವ ವರೆಗೆ ಜಿಲ್ಲಾಡಳಿತವೇ ಮುಂದೆ ನಿಂತು ಸಮಸ್ಯೆಗೆ ಪರಿಹಾರ ಸೂಚಿಸಬೇಕು ಅಲ್ಲದೆ ಜಿಲ್ಲೆಯಲ್ಲಿ ಇರುವ ಕಲ್ಲುಕೋರೆ ಮತ್ತು ಕ್ರಷರ್ ಘಟಕಗಳಿಗೆ ಪರವಾನಿಗೆ ನೀಡುವಂತೆ ಒತ್ತಾಯಿಸಿದರು.

ಪ್ರತಿಭಟನಾಸ್ಥಳಕ್ಕೆ ಆಗಮಿಸಿದ ಮಾಜಿ ಸಂಸದ ಕೆ ಜಯಪ್ರಕಾಶ್ ಹೆಗ್ಗಡೆ ಮಾತನಾಡಿ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದ್ದು ಮಾತ್ರವಲ್ಲದೆ ಸಂಪುಟ ಉಪಸಮಿತಿ ರಚನೆ ಮಾಡಿ ವರದಿ ನೀಡುವಂತೆ ಕೂಡ ಸೂಚಿಸಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಕರಾವಳಿಗೆ ಪ್ರತ್ಯೇಕ ಮರುಳು ನೀತಿ ಅಗತ್ಯವಿದ್ದು, ಮರುಳುಗಾರಿಕೆ ಕುರಿತು ಅರಿತವರಿಂದ ವರದಿ ಪಡೆಯಬೇಕು. ಸರಕಾರ ಕೂಡಲೇ ಮರಳು ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ತುಳುನಾಡು ರಕ್ಷಣಾ ವೇದಿಕೆಯ ಐಕಳಬಾವ ಚಿತ್ತರಂಜನ್ ದಾಸ್ ಶೆಟ್ಟಿ,ಸಂದೀಪ್, ಹಾಗೂ ಇತರರು ಪಾಲ್ಗೊಂಡಿದ್ದರು.


Spread the love