ಮಲ್ಪೆಯಲ್ಲಿ ಬಂಧಿಸಲ್ಪಟ್ಟ 10 ಬಾಂಗ್ಲಾದೇಶಿ ಅಕ್ರಮ ವಲಸಿಗರಿಗೆ ನ್ಯಾಯಾಲಯದಿಂದ 2 ವರ್ಷ ಜೈಲು ಶಿಕ್ಷೆ
ಉಡುಪಿ: ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಪ್ರವೇಶ ಪ್ರಕರಣ ಪತ್ತೆಯಾಗಿದ್ದು, ಬಾಂಗ್ಲಾದೇಶದಿಂದ ನಕಲಿ ದಾಖಲೆಗಳೊಂದಿಗೆ ಭಾರತಕ್ಕೆ ಬಂದಿದ್ದ 10 ಮಂದಿ ಆರೋಪಿತರಿಗೆ ನ್ಯಾಯಾಲಯವು 2 ವರ್ಷಗಳ ಜೈಲು ಶಿಕ್ಷೆ ಮತ್ತು ತಲಾ ₹10,000 ದಂಡ ವಿಧಿಸಿದೆ.
2024ರ ಅಕ್ಟೋಬರ್ 11ರಂದು ಸಂಜೆ ಸುಮಾರು 7 ಗಂಟೆಯ ಸಮಯಕ್ಕೆ, ಮಲ್ಪೆ ಠಾಣೆಯ PSI ಪ್ರವೀಣ್ ಕುಮಾರ್ ಆರ್. ರವರು ಸಿಬ್ಬಂದಿಯೊಂದಿಗೆ ಪೇಟ್ರೋಲ್ ಕರ್ತವ್ಯದಲ್ಲಿದ್ದಾಗ ವಡಭಾಂಡೇಶ್ವರ ಬಸ್ ನಿಲ್ದಾಣದ ಬಳಿ 7 ಮಂದಿ ಅನುಮಾನಾಸ್ಪದವಾಗಿ ಲಗೇಜ್ಗಳೊಂದಿಗೆ ಅಲೆಮಾರಿ ಸುತ್ತಾಡುತ್ತಿರುವುದು ಗಮನಕ್ಕೆ ಬಂತು. ವಿಚಾರಿಸಿದಾಗ, ಅವರು ಯಾವುದೇ ಮಾನ್ಯ ದಾಖಲೆಗಳಿಲ್ಲದೆ, ನಕಲಿ ಆಧಾರ್ ಕಾರ್ಡ್ಗಳನ್ನು ಸೃಷ್ಟಿಸಿ, ವಂಚನೆ ಮಾಡುವ ಉದ್ದೇಶದಿಂದ ಸುಳ್ಳು ಮಾಹಿತಿಯನ್ನು ನೀಡಿಕೊಂಡು ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿರುವುದು ಬೆಳಕಿಗೆ ಬಂತು.
ಪೊಲೀಸ್ ತನಿಖೆಯ ವೇಳೆ ಉಳಿದ 3 ಮಂದಿ ಸಹಚರರನ್ನು ಪತ್ತೆಹಚ್ಚಿ ಬಂಧಿಸಲಾಗಿದ್ದು, ಒಟ್ಟು 10 ಮಂದಿ ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗರು ಪೊಲೀಸರ ವಶಕ್ಕೆ ಬಿದ್ದಿದ್ದಾರೆ.
ಬಂಧಿತರನ್ನು ಹಕೀಮ್ ಆಲಿ, ಸುಜೋನ್ ಎಸ್.ಕೆ @ ಫಾರೂಕ್, ಇಸ್ಮಾಯಿಲ್ ಎಸ್.ಕೆ @ ಮಹಮದ್ ಇಸ್ಮಾಯಿಲ್ ಹಾಕ್, ಕರೀಮ್ ಎಸ್.ಕೆ @ ಅಬ್ದುಲ್ ಕರೀಮ್, ಸಲಾಂ ಎಸ್.ಕೆ @ ಎಮ್ಡಿ ಅಬ್ದುಲ್ ಅಜೀಜ್, ರಾಜಿಕುಲ್ ಎಸ್.ಕೆ, ಮೊಹಮ್ಮದ್ ಸೋಜಿಬ್ @ ಎಮ್.ಡಿ. ಅಲ್ಲಾಂ ಆಲಿ, ರಿಮೂಲ್ @ ಅಬ್ದುಲ್ ರೆಹಮಾನ್, ಮೊಹಮ್ಮದ್ ಇಮಾಮ್ ಶೇಖ್, ಮೊಹಮ್ಮದ್ ಜಹಾಂಗಿರ್ ಆಲಂ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 138/2025ರಂತೆ, BNS ಕಲಂ 336(2), 336(3), 340(2), 319(2), 318(4), 3(5) ಜೊತೆಗೆ Foreigners Act 14(A) ಹಾಗೂ Aadhaar Act ಕಲಂ 34, 42 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖಾಧಿಕಾರಿಯಾದ ಮಲ್ಪೆ ಸರ್ಕಲ್ ಇನ್ಸ್ಪೆಕ್ಟರ್ ಪ್ರಕರಣದ ಚಾರ್ಜ್ಶೀಟ್ ಅನ್ನು ಉಡುಪಿ ಪ್ರಥಮ ದರ್ಜೆ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ JMFC ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ಪೂರ್ಣಗೊಂಡ ನಂತರ, 2025 ಡಿಸೆಂಬರ್ 8ರಂದು ನ್ಯಾಯಾಲಯವು ಎಲ್ಲಾ 10 ಮಂದಿ ಆರೋಪಿಗಳಿಗೆ 2 ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ ₹10,000 ದಂಡ ವಿಧಿಸಿ ಆದೇಶ ಹೊರಡಿಸಿದೆ.
ಈ ಕಾರ್ಯಾಚರಣೆಯಿಂದ ಮಲ್ಪೆ ಪೊಲೀಸರು ಅಕ್ರಮ ವಲಸಿಗರ ಪ್ರವೇಶವನ್ನು ತಡೆಗಟ್ಟುವಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ ಎಂದು ಪೊಲೀಸ್ ವಲಯದಿಂದ ತಿಳಿಸಲಾಗಿದೆ.













