ಮಳೆ: ಅಪಾಯಕಾರಿ ಸ್ಥಳಗಳಲ್ಲಿ ನಿರಂತರ ನಿಗಾವಹಿಸಲು ಪ್ರಭಾರ ಜಿಲ್ಲಾಧಿಕಾರಿ ಡಾ.ಕೆ. ಆನಂದ್ ಸೂಚನೆ
ಮಂಗಳೂರು: ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಸಂಭಾವ್ಯ ನೆರೆ ಹಾಗೂ ಮುಳುಗಡೆ ಪ್ರದೇಶಗಳಲ್ಲಿ ನಿರಂತರ ನಿಗಾ ವಹಿಸುವಂತೆ ಪ್ರಭಾರ ಜಿಲ್ಲಾಧಿಕಾರಿ ಡಾ.ಕೆ. ಆನಂದ್ ಸೂಚಿಸಿದ್ದಾರೆ.
ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿಂದಿನ ಮಳೆಗಾಲದಲ್ಲಿ ಮುಳುಗಡೆಯಾದ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅಂತಹ ಪ್ರದೇಶಗಳಿಗೆ ನಿರಂತರ ಭೇಟಿ ನೀಡಿ ನೀರಿನ ಹರಿವಿಗೆ ತಡೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ಸೂಚಿಸಿದರು.
ಮಾನವನ ನಿರ್ಲಕ್ಷದಿಂದ ಯಾವುದೇ ಪ್ರಾಣ ಹಾನಿ ಆಗದಂತೆ ಎಚ್ಚರಿಕೆ ವಹಿಸಬೇಕು. ಭೂಕುಸಿತ,ನೆರೆ ಸೇರಿದಂತೆ ಅಪಾಯಕಾರಿ ಸ್ಥಳಗಳನ್ನು ಮೊದಲೇ ಗುರುತಿಸಿ ರೆಡ್ ಅಲರ್ಟ್ ಸಮಯದಲ್ಲಿ ಅಲ್ಲಿನ ನಿವಾಸಿಗಳನ್ನು ತೆರವುಗೊಳಿಸಬೇಕು. ಪ್ರಾಕೃತಿಕ ದುರಂತ ನಡೆದರೆ ತಕ್ಷಣವೇ ಅಧಿಕಾರಿಗಳು ಸ್ಪಂದಿಸಬೇಕು. ವಿಪತ್ತು ನಿರ್ವಹಣೆ ಕಾರ್ಯದಲ್ಲಿ ನಿರ್ಲಕ್ಷ್ಯವನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು. ನಿರ್ಲಕ್ಷ ತೋರುವ ಅಧಿಕಾರಿ ಸಿಬ್ಬಂದಿ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಎಚ್ಚರಿಸಿದರು.
ಗ್ರಾಮಕರಣಿಕರು, ಪಿಡಿಒ, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಬೇಕು. ಕಂಟ್ರೋಲ್ ರೂಂ 24 ಗಂಟೆಯೂ ಚಾಲನೆಯಲ್ಲಿರಬೇಕು ಎಂದು ಡಾ. ಆನಂದ್ ಕೆ ಸೂಚಿಸಿದರು.
ಮಳೆಗಾಲದಲ್ಲಿ ಮರ ಹಾಗೂ ವಿದ್ಯುತ್ ಲೈನ್ ಗಳಿಂದ ಯಾವುದೇ ಸಮಸ್ಯೆ ಅಥವಾ ಪ್ರಾಣ ಹಾನಿ ಆಗದಂತೆ ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಕೂಡಲೇ ಕ್ರಮ ಕೈಗೊಳ್ಳಬೇಕು. ಅಪಾಯಕಾರಿ ಮರಗಳನ್ನು ತೆರವುಗೊಳಿಸಿ ವಿದ್ಯುತ್ ಲೈನ್ ಗಳನ್ನು ತೆರವುಗೊಳಿಸಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಾರ್ಡ್ವಾರು ವಿಪತ್ತು ಸಮಿತಿಗಳನ್ನು ಸಕ್ರಿಯಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಅಗ್ನಿಶಾಮಕ ಮತ್ತು ಮೆಸ್ಕಾಂ ಇಲಾಖೆಗಳು ಅಗತ್ಯ ಬಿದ್ದರೆ ಹೆಚ್ಚುವರಿ ವಾಹನ ಬಳಸಿಕೊಳ್ಳಬೇಕು. ಹೆದ್ದಾರಿಗಳಲ್ಲಿ ನೀರು ನಿಲ್ಲದಂತೆ ಎರಡು ಬದಿಗಳಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಶಾಲೆ ಮತ್ತು ಅಂಗನವಾಡಿಗಳ ಶಿಥಿಲಗೊಂಡಿರುವ ಕಟ್ಟಡಗಳನ್ನು ಕೂಡಲೇ ತೆರವುಗೊಳಿಸಬೇಕು. ಶಾಲೆಗಳಲ್ಲಿ ಮಕ್ಕಳು ವಿದ್ಯುತ್ ಸ್ವಿಚ್, ಕೇಬಲ್ಗಳನ್ನು ಮುಟ್ಟದಂತೆ ಶಿಕ್ಷಕರು ನಿಗಾ ವಹಿಸಲು ಅವರು ಅಧಿಕಾರಿಗಳಿಗೆ ಸೂಚಿಸಿದರು. ಶಿಥಿಲಗೊಂಡಿರುವ ಕೊಠಡಿಗಳಲ್ಲಿ ಯಾವುದೇ ಕಾರಣಕ್ಕೂ ಪಠ್ಯ ಪ್ರವಚನ ಮಾಡಬಾರದು ಎಂದು ತಿಳಿಸಿದರು.
ಏರ್ ರ್ಪೋರ್ಟ್ ನೀರು
ಮಂಗಳೂರು ವಿಮಾನ ನಿಲ್ದಾಣದ ರನ್ ವೇಯಿಂದ ಮಳೆ ನೀರು ತಗ್ಗು ಪ್ರದೇಶದ ಬಂದು ತೊಂದರೆಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಈ ಬಗ್ಗೆ ಅಗತ್ಯ ಕ್ರಮವಹಿಸಿ ಸ್ಥಳೀಯರೊಂದಿಗೆ ವಿಶ್ವಾಸ ಮೂಡಿಸುವಂತೆ ಜಿಲ್ಲಾಧಿಕಾರಿಗಳು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಸೂಚಿಸಿದರು.
ಇದಕ್ಕೆ ಉತ್ತರಿಸಿದ ಏರ್ಪೋರ್ಟ್ ಅಧಿಕಾರಿಗಳು, ರನ್ ವೇಯಲ್ಲಿ ಮಳೆ ನೀರು ಸಂಗ್ರಹವಾಗುತ್ತಿಲ್ಲ. ಈ ಸಮಸ್ಯೆ ಬಗ್ಗೆ ಎನ್.ಐ.ಟಿ.ಕೆ ಯೊಂದಿಗೆ ತಾಂತ್ರಿಕ ಅಧ್ಯಯನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕುಡಿಯುವ ನೀರು : ಪರೀಕ್ಷೆಗೊಳಪಡಿಸಲು ಡಿಸಿ ಸೂಚನೆ
ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತ್ ಸರಬರಾಜು ಮಾಡುವ ಕುಡಿಯುವ ನೀರನ್ನು 15 ದಿವಸಕ್ಕೊಮ್ಮೆ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು. ಕುಡಿಯುವ ನೀರಿನ ಪೈಪ್ ಹಾಗೂ ಚರಂಡಿ ನೀರು ಸಂಪರ್ಕವಾಗದಂತೆ ಗಮನಹರಿಸಬೇಕು. ನೀರು ಸರಬರಾಜಿಗೆ ಯಾವುದೇ ವಸ್ತು ಸೇರದಂತೆ ಎಲ್ಲ ಗ್ರಾಮ ಪಂಚಾಯತ್ ಹಾಗೂ ನಗರ ಸಂಸ್ಥೆಗಳು ನಿಗಾವಹಿಸಲು ಅವರು ತಿಳಿಸಿದರು.
ಸಾಂಕ್ರಾಮಿಕ ರೋಗಗಳು ಹರಡದಂತೆ ಕುಡಿಯುವ ನೀರು ಬಿಸಿ ಮಾಡಿ ಸೇವಿಸಲು ಆರೋಗ್ಯ ಇಲಾಖೆ ಜಾಗೃತಿ ಮೂಡಿಸಬೇಕು. ತಮ್ಮದೇ ಬಾವಿ ನೀರನ್ನು ಕೂಡ ಸಾರ್ವಜನಿಕರು ಬಿಸಿ ಮಾಡಿದ ನಂತರ ಕುಡಿಯುವುದು ಆರೋಗ್ಯದ ಹಿತದೃಷ್ಟಿಯಿಂದ ಉತ್ತಮವಾಗಿರುತ್ತದೆ ಎಂದು ಅವರು ತಿಳಿಸಿದರು.
ತೀವ್ರ ಮಳೆ ಸಂದರ್ಭದಲ್ಲಿ ಮಲೆನಾಡಿನ ಜಲಪಾತಗಳಿಗೆ ಹಾಗೂ ಸಮುದ್ರ ಕಿನಾರೆಗೆ ಪ್ರವಾಸಿಗರು, ಸಾರ್ವಜನಿಕರು ತೆರಳದಂತೆ ನಿಬರ್ಂಧ ವಹಿಸಬೇಕು. ಅಗತ್ಯವಿದ್ದರೆ ಹೋಂ ಗಾರ್ಡ್ ಅಥವಾ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಮೀನುಗಾರಿಕಾ ದೋಣಿಗಳು ನದಿಗಿಳಿಯದಂತೆ ಈಗಾಗಲೇ ಸೂಚಿಸಲಾಗಿದೆ. ಮೀನುಗಾರಿಕಾ ರಜಾ ಅವಧಿಯಲ್ಲಿ ಬೋಟ್ನಲ್ಲಿ ಕಾರ್ಮಿಕರು ಮಲಗದಂತೆ ಸೂಚಿಸಬೇಕು. ಸಣ್ಣ ನೀರಾವರಿ ಇಲಾಖೆಯ ಅಧೀನದ ಡ್ಯಾಮ್, ಕಿರು ಅಣೆಕಟ್ಟುಗಳ ಹೂಳೆತ್ತಲು ಕ್ರಮ ಕೈಗೊಳ್ಳಬೇಕು. ಮರಳು ಹಳ್ಳಗಳಲ್ಲಿ ಮಳೆ ನೀರು ನಿಲ್ಲುವುದರಿಂದ ಮಕ್ಕಳು ಈಜಾಡಲು ಹೋಗಿ ಪ್ರಾಣ ಕಳೆದುಕೊಂಡಿರುವ ಹಲವಾರು ಘಟನೆ ನಡೆದಿದೆ. ಗಣಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕಾರ್ಯ ಪ್ರವೃತ್ತರಾಗಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಜಿ ಸಂತೋμï, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಸಹಾಯಕ ಪೆÇಲೀಸ್ ಆಯುಕ್ತರು ಗೀತಾ ಕುಲಕರ್ಣಿ, ವಿವಿಧ ಇಲಾಖೆ ಅಧಿಕಾರಿಗಳು, ತಾಲೂಕು ತಹಶೀಲ್ದಾರರು ಉಪಸ್ಥಿತರಿದ್ದರು.
ನೂತನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೊದಲ ಸಭೆ
ದಕ್ಷಿಣ ಕನ್ನಡ ಜಿಲ್ಲೆಯ ನೂತನ ಕಟ್ಟಡ ’ಪ್ರಜಾ ಸೌಧ’ ಶುಕ್ರವಾರ ಉದ್ಘಾಟನೆಗೊಂಡಿದ್ದು, ಬುಧವಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯುವುದರೊಂದಿಗೆ ನೂತನ ಕಟ್ಟಡದಲ್ಲಿ ಮೊದಲ ಸಭೆ ನಡೆಯಿತು.
ನೂತನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಮೊದಲ ಸಭೆಗೆ ಆಗಮಿಸಿದ ಅಧಿಕಾರಿಗಳಲ್ಲಿ ಸಂಭ್ರಮ ಮನೆ ಮಾಡಿತು. ಬಹಳ ಉತ್ಸಾಹದಿಂದ ಸಭೆಯಲ್ಲಿ ಭಾಗವಹಿಸಿದ ಅಧಿಕಾರಿಗಳು, ಪರಸ್ಪರ ಸಂತೋಷದಿಂದ ಹಸ್ತಲಾಘವ ಮಾಡಿ ಸಂತೋಷ ಹಂಚಿಕೊಂಡರು.
ಅಧಿಕಾರಿಗಳ ವಾಹನಗಳನ್ನು ಜಿಲ್ಲಾಧಿಕಾರಿ ಕಚೇರಿ ಆವರಣದ ವಿಶಾಲ ಆವರಣದಲ್ಲಿ ಚಾಲಕರು ಪಾಕಿರ್ಂಗ್ ಮಾಡಿದ್ದು, ಸರ್ಕಾರಿ ವಾಹನ ಚಾಲಕರಿಗೆ ಸಂತೋಷ ಮೂಡಿಸಿತು.