ಮಹಾತ್ಮಾ ಗಾಂಧಿ ಹೆಸರಿನ ಉದ್ಯೋಗ ಖಾತರಿ ಯೋಜನೆ ಕೈಬಿಟ್ಟಿರುವುದು ಖಂಡನೀಯ
ಉಡುಪಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹೆಸರಲ್ಲಿರುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಕೈಬಿಟ್ಟಿರುವುದು ಅತ್ಯಂತ ಖಂಡನೀಯ ಕ್ರಮವಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ ಹಾಗೂ ಜಿಲ್ಲಾ ಮುಖ್ಯ ಸಂಯೋಜಕ ಶ್ರೀಧರ್ ಪಿ.ಎಸ್. ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಾಂಧೀಜಿ ಅವರ ಹೆಸರನ್ನು ದೇಶದಿಂದ ಶಾಶ್ವತವಾಗಿ ಅಳಿಸಬೇಕೆಂಬ ಉದ್ದೇಶವೇ ಈ ನಿರ್ಧಾರದ ಹಿಂದೆ ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಗ್ರಾಮೀಣ ಜನರು ಹಾಗೂ ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಗಾಂಧೀಜಿ ಬಡತನ ನಿರ್ಮೂಲನೆಯ ಕುರಿತ ಮಹಾನ್ ಚಿಂತನೆಗಳನ್ನು ಹೊಂದಿದ್ದವರು. ಅವರು ಕೇವಲ ದೇಶದ ನಾಯಕ ಮಾತ್ರವಲ್ಲದೆ, ವಿಶ್ವವೇ ಪೂಜಿಸಿದ ಮಹಾನ್ ವ್ಯಕ್ತಿಯಾಗಿದ್ದರು ಎಂದು ಅವರು ಸ್ಮರಿಸಿದರು.
ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದೆ, ಕೇವಲ ಯೋಜನೆಗಳ ಹೆಸರು ಬದಲಿಸುವ ಮೂಲಕ ಸರ್ಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಜನರೇ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಅವರು ಎಚ್ಚರಿಸಿದರು. ಈ ದೇಶಕ್ಕೆ ಗಾಂಧೀಜಿ ನೀಡಿದ ಕೊಡುಗೆಗಳ ಬಗ್ಗೆ ಪ್ರತಿಯೊಬ್ಬ ಭಾರತೀಯನಿಗೂ ಅರಿವಿದೆ. ಇತಿಹಾಸ ತಿಳಿಯದ ಹಾಗೂ ದೇಶ ನಿರ್ಮಿಸಿದ ಮಹಾನ್ ನಾಯಕರಿಗೆ ಗೌರವ ನೀಡದ ಬಿಜೆಪಿ ಸರ್ಕಾರದ ನಡೆಗೆ ತೀವ್ರ ಧಿಕ್ಕಾರವಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













