ಮಹಿಳೆಯ ಸರಗಳ್ಳತನ: ಬಟ್ಟೆ ಬದಲಿಸಿ ಎಸ್ಕೇಪ್ ಆದ ಕಳ್ಳ, ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಮಂಗಳೂರು: ನಗರದ ಕೊಂಚಾಡಿ ಸಮೀಪದ ಕೊಪ್ಪಲಕಾಡು ಪ್ರದೇಶದಲ್ಲಿ ಮಹಿಳೆಯೊಬ್ಬರ ಸರಗಳ್ಳತನ ನಡೆಸಿ, ಬಟ್ಟೆ ಬದಲಿಸಿ ಪರಾರಿಯಾದ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ.
ನಿನ್ನೆ ಸಂಜೆ ಸುಮಾರು 6.30ರ ವೇಳೆಗೆ ಕೆಲಸ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ಮಹಿಳೆಯೊಬ್ಬರ ಬಳಿ ಇದ್ದ ಸುಮಾರು ಮೂರುವರೆ ಪವನ್ ತೂಕದ ಚಿನ್ನದ ಸರವನ್ನು ಕಳ್ಳ ಕಸಿದುಕೊಂಡು ಪರಾರಿಯಾಗಿದ್ದಾನೆ. ಸರ ಕದ್ದ ತಕ್ಷಣ ಮನೆ ಕಾಂಪೌಂಡ್ ಒಳಗೆ ನುಗ್ಗಿ ಗೋಡೆ ಹಾರಿ ಓಡಿ ಹೋಗಿರುವುದು ತಿಳಿದುಬಂದಿದೆ.
ಘಟನೆಯ ಬಳಿಕ ಸ್ವಲ್ಪ ದೂರ ತೆರಳಿ ಬಟ್ಟೆ ಬದಲಿಸಿಕೊಂಡು ಕಳ್ಳ ಕಣ್ಮರೆಯಾಗಿರುವುದು ಸ್ಥಳೀಯ ಸಿಸಿಟಿವಿ ಕ್ಯಾಮರಾ ದೃಶ್ಯಗಳಲ್ಲಿ ದಾಖಲಾಗಿದೆ. ಸರಗಳ್ಳತನ ಮಾಡಿ ಪರಾರಿಯಾಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಸೆರೆ ಹಿಡಿದಿವೆ.
ಘಟನೆಯ ಮಾಹಿತಿ ಪಡೆದ ತಕ್ಷಣ ಉರ್ವಾ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಆರೋಪಿಯ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.













