ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಂಧನ

Spread the love

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಂಧನ

ಬೆಂಗಳೂರು: ಆ್ಯಂಬಿಡೆಂಟ್​ ಚಿಟ್​ಫಂಡ್​ ಜತೆ ಡೀಲ್​ ಪ್ರಕರಣದಡಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಶನಿವಾರ ರಾತ್ರಿಯೆಲ್ಲ ಜನಾರ್ದನ ರೆಡ್ಡಿ, ಆ್ಯಂಬಿಡೆಂಟ್​ ಮಾಲೀಕ ಫರೀದ್​ನನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಫರೀದ್​ ಕೂಡ ಜನಾರ್ದನ ರೆಡ್ಡಿ ವಿರುದ್ಧ ಹೇಳಿಕೆಗಳನ್ನು ನೀಡಿದ್ದರು.

ಭಾನುವಾರ ಬೆಳಗ್ಗೆಯೂ ವಿಚಾರಣೆ ಮುಂದುವರಿದಿತ್ತು. ಫರೀಧ್, ಅಲಿಖಾನ್, ಜನಾರ್ದನ ರೆಡ್ಡಿ, ಜಯರಾಮ್, ಫೈಸಲ್ ಸೇರಿ ಎಲ್ಲ ಆರೋಪಿಗಳನ್ನೂ ಮುಖಾಮುಖಿ ಕೂರಿಸಿ ಡಿಸಿಪಿ ಗಿರೀಶ್​, ಎಸಿಪಿ ವೆಂಕಟೇಶ್​ ವಿಚಾರಣೆ ನಡೆಸಿದ್ದರು.

ಜನಾರ್ದನ ರೆಡ್ಡಿಯನ್ನು ಬಂಧಿಸಿರುವ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಿದ್ದಾರೆ. ಇಂದು ಕೋರ್ಟ್​ ರಜೆ ಇರುವ ಕಾರಣ ಜನಾರ್ದನ್​ ರೆಡ್ಡಿಯನ್ನು ಕೋರಮಂಗಲದಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಕರೆದೊಯ್ಯಲಾಗುವುದು ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅಲೋಕ್​ ಕುಮಾರ್​ ಅವರು, ನಾವು ಕಾನೂನು ಪ್ರಕಾರ ಮುಂದುವರಿಯುತ್ತೇವೆ. ಹಣವನ್ನು ವಶಪಡಿಸಿಕೊಳ್ಳಲಾಗುವುದು ಎಂದು ಹೇಳಿದರು. ಆದರೆ ಮತ್ತೆ ಕಸ್ಟಡಿಗೆ ಪಡೆಯುತ್ತೀರಾ ಎಂಬ ಪ್ರಶ್ನೆಗೆ ಏನೂ ಉತ್ತರಿಸದೆ, ಅದೆಲ್ಲ ನಂತರದ ವಿಚಾರ ಎಂದು ತಿಳಿಸಿದರು.


Spread the love