ಮೀನುಗಾರರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಕರೆ:  ಸಂಸದೆ ಶೋಭಾ ಕರಂದ್ಲಾಜೆ

Spread the love

ಮೀನುಗಾರರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಕರೆ:  ಸಂಸದೆ ಶೋಭಾ ಕರಂದ್ಲಾಜೆ

ಉಡುಪಿ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಮೀನು ಕೃಷಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಮೀನುಗಾರರು ಇದರ ಪ್ರಯೋಜನ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಿ ಸ್ವಾವಲಂಬಿಗಳಾಗಬೇಕು ಎಂದು ಉಡುಪಿ, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಅವರು ಮಂಗಳವಾರ ನಗರದ ಪುರಭವನದಲ್ಲಿ ಮೀನುಗಾರಿಕೆ ಇಲಾಖೆಯಿಂದ ಆಯೋಜಿಸಿದ ಪಂಜರ ಮೀನು ಕೃಷಿ ತರಭೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು

ಪ್ರಧಾನಿ ನರೇಂದ್ರ ಮೋದಿಯವರು ಆತ್ಮ ನಿರ್ಭರ ಯೋಜನೆಯಡಿ ಕೊರೋನಾ ಸೋಂಕಿನ ಸಂಕಷ್ಟಕ್ಕೆ ಒಳಗಾದ ಜನರಿಗೆ ಸ್ವ ಉದ್ಯೋಗ ಕೈಗೊಂಡು ಸ್ವಾವಲಂಬಿ ಆಗುವುದರೊಂದಿಗೆ ಅವರನ್ನು ಸದೃಢವಾಗಿಸುವ ಉದ್ದೇಶದಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಯಡಿ ದೇಶದ್ಯಾದಂತ ಮೀನುಗಾರಿಕೆ ಚಟುವಟಿಕೆಗಳನ್ನು ಕೈಗೊಳ್ಳಲು 20 ಸಾವಿರ ಕೋಟಿ ರೂ.ಗಳ ಮೊತ್ತದಡಿ ಅನುಷ್ಠಾನ ಮಾಡಲು ಮುಂದಾಗಿದ್ದು, ರಾಜ್ಯಕ್ಕೆ 3 ಸಾವಿರ ಕೋಟಿ ರೂಪಾಯಿ ಬರಲಿದೆ ಎಂದರು.

ಕರಾವಳಿ ಭಾಗದಲ್ಲಿ ಮೀನುಕೃಷಿ ಉದ್ಯಮವಾಗಿದ್ದು ಜನರಿಗೆ ಪೌಷ್ಟಿಕ ಆಹಾರ ಒದಗಿಸುವುದರ ಜೊತೆಗೆ ಇವುಗಳ ರಫ್ತುವಿನಿಂದಾಗಿ ವಿದೇಶಿ ವಿನಿಮಯ ಸಹ ಆಗುತ್ತದೆ ಎಂದರು.

ಪ್ರಸ್ತುತ ದಿನಗಳಲ್ಲಿಯೂ ಮೀನಿಗೆ ಎಲ್ಲೆಡೆ ಬೇಡಿಕೆ ಹೆಚ್ಚಿದೆ, ಅಲ್ಲದೇ ಮೀನು ಎಣ್ಣೆಯನ್ನು ತಯಾರಿಸಿ ರಫ್ತು ಸಹ ಮಾಡಲಾಗುತ್ತಿದ್ದು ಕಡೆಯದಾಗಿ ಮೀನಿನ ಗೊಬ್ಬರವನ್ನು ಸಹ ಮಾಡಲಾಗುತ್ತದೆ. ಯಾವುದೇ ರೀತಿಯಲ್ಲಿ ನಿರುಪಯುಕ್ತವಿಲ್ಲ ಎಂದರು.

ಕಡಲ ಮೀನುಗಾರಿಕೆ ಜೊತೆಯಲ್ಲಿ ಒಳನಾಡಿನಲ್ಲಿ ಮೀನುಗಾರಿಕೆ ಕೈಗೊಳ್ಳಲು ಸರಕಾರ ಉತ್ತೇಜನ ನೀಡುತ್ತಿದೆ. ಈ ಹಿಂದೆ ಈ ಭಾಗದ ಪಂಜರಕೃಷಿಯಲ್ಲಿ ಸಿಗಡಿ ಕೃಷಿಯನ್ನು ಮಾತ್ರ ಮಾಡಲಾಗುತ್ತಿದ್ದು, ಅದರ ಜೊತೆಯಲ್ಲಿ ಇತರ ಮೀನುಗಳಾದ ಕುರುಡಿ, ಕಾಂಬೇರಿ, ಪೋಬಿಯಾ ಮೀನುಗಳು ಸೇರಿದಂತೆ ಮತ್ತಿತರ ಮೀನುಗಳನ್ನು ಪಂಜರ ಮೀನುಗಾರಿಕೆ ಕೃಷಿಯಲ್ಲಿ ಮಾಡಬಹುದಾಗಿದೆ. ಅದರಿಂದ ಹೆಚ್ಚಿನ ಆದಾಯ ಪಡೆಯಬಹುದಾಗಿದೆ ಎಂದರು.

ಪಂಜರ ಮೀನುಕೃಷಿ ತರಬೇತಿಗೆ ಇಂದು ನಾಲ್ಕು ನೂರಕ್ಕೂ ಹೆಚ್ಚು ಜನ ಆಸಕ್ತಿ ತೋರಿಸಿ ಮುಂದೆ ಬಂದಿದ್ದಾರೆ. ಈ ಕಾರ್ಯಾಗಾರದಲ್ಲಿ ಮೀನುಗಾರಿಕೆ ಇಲಾಖೆಯು ವೈಜ್ಞಾನಿಕವಾಗಿ ಮೀನುಕೃಷಿ ಕೈಗೊಳ್ಳಲು ನೀಡುವ ಸಲಹೆಗಳನ್ನು ಅರಿತುಕೊಂಡು ಲಾಭ ಪಡೆದುಕೊಳ್ಳಬೇಕು ಎಂದರು.

ಕೊರೋನಾ ಬಿಕ್ಕಟ್ಟಿನಿಂದಾಗಿ ವಿಶ್ವದಾದ್ಯಂತ ಎಲ್ಲರೂ ಒಂದಲ್ಲ ಒಂದು ರೀತಿ ಸಂಕಷ್ಟ ಎದುರಿಸುತ್ತಿದ್ದು ಕೆಲವು ದೇಶಗಳಲ್ಲಿ ಆಹಾರದ ಕೊರತೆ ಉಂಟಾಗಿದ್ದು, ಆದರೆ ನಮ್ಮ ದೇಶದಲ್ಲಿ ಈ ರೀತಿಯ ಕೊರತೆ ಎಲ್ಲಿಯೂ ಆಗಲಿಲ್ಲ, ಕಾರಣ ಕೃಷಿಕರು, ಮೀನುಗಾರರು, ನೇಕಾರರ ಶ್ರಮದಿಂದ ಎಂದರು.

ಇತ್ತೀಚಿನ ದಿನಗಳಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿದ್ದು, ಬಹು ಅಂಗಾAಗ ವೈಫಲ್ಯ ಮತ್ತಿತ್ತರ ರೋಗಗಳು ಕಾಯಿಲೆ ಹೊಂದಿರುವವರ ಸಾವಿನ ಸಂಖ್ಯೆ ಹೆಚ್ಚು ಕಂಡುಬರುತ್ತಿದೆ.

ಸಾರ್ವಜನಿಕರು ಅನಾವಶ್ಯಕವಾಗಿ ಓಡಾಡುವುದನ್ನು ತಪ್ಪಿಸಬೇಕು, ಅಗತ್ಯವಿದ್ದಲ್ಲಿ ಮಾತ್ರ ಹೊರ ಹೋಗಬೇಕು, ಅಲ್ಲದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರ ಜೊತೆಗೆ ಮಾಸ್ಕ್ನ್ನು ತಪ್ಪದೇ ಧರಿಸಬೇಕು. ರೋಗದ ಲಕ್ಷಣ ಕಂಡು ಬಂದಲ್ಲಿ ನಿರ್ಲಕ್ಷಿಸದೇ ತಕ್ಷಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ಕೊನೆಯ ಕ್ಷಣದಲ್ಲಿ ರೋಗ ಉಲ್ಬಣಗೊಂಡಾಗ ಚಿಕಿತ್ಸೆ ಪಡೆಯಲು ಮುಂದಾಗಬಾರದು ಎಂದರು.

ಮೀನುಗಾರಿಕೆ ಮತ್ತು ಬಂದರು ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೀನುಗಾರಿಕೆ ಇಲಾಖೆಯ ಕಾರ್ಯಕ್ರಮಗಳ ಕೈಪಿಡಿಯನ್ನು ಬಿಡುಗಡೆ ಮಾಡಿ ಮಾತನಾಡಿ, ಪಂಜರ ಮೀನುಕೃಷಿಗೆ ಉತ್ತೇಜನ ನೀಡಿ ಹತ್ತು ಸಾವಿರಕ್ಕೂ ಹೆಚ್ಚು ಜನ ಸ್ವ ಉದ್ಯೋಗ ಕೈಗೊಳ್ಳುವ ಉದ್ದೇಶದಿಂದ ರಾಜ್ಯದ 30 ಜಿಲ್ಲೆಗಳಲ್ಲಿಯೂ ಪಂಜರ ಕೃಷಿ ಕಾರ್ಯಾಗಾರ ನಡೆಸಿ ತರಬೇತಿ ನೀಡಲಾಗುತ್ತಿದೆ ಎಂದರು.

ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ತಕ್ಷಣ ಪಂಜರ ಕೃಷಿಯಲ್ಲಿ ಯಶಸ್ಸುಗೊಳ್ಳಲು ಸಾಧ್ಯವಿಲ್ಲ ಸಮರ್ಪಣ ಮನೋಭಾವದಿಂದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಮಾತ್ರ ಯಶಸ್ಸುಗೊಳಿಸಲು ಸಾಧ್ಯ ಎಂದ ಅವರು ಈ ಕರ‍್ಯಾಗಾರದ ಪ್ರಯೋಜನ ಪಡೆಯುವುದರ ಜೊತೆಗೆ ಇಲ್ಲಿ ಚರ್ಚಿಸಿ ಯೋಜನೆಯನ್ನಾಗಿಸಿಕೊಳ್ಳಬೇಕು ಎಂದರು.

ಮೀನುಗಾರರ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಬದ್ಧವಿದೆ ಎಂದ ಅವರು ಮರವಂತೆ ಜಟ್ಟಿ ನಿರ್ಮಾಣಕ್ಕೆ ತೆರಿಗೆ ರಹಿತ ಸಬ್ಸಿಡಿ, ಡಿಸೇಲ್ ವಿತರಣೆ ಸೇರಿದಂತೆ ಮತ್ತಿತರ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಿದೆ ಎಂದರು.

ಪಂಜರ ಮೀನುಕೃಷಿಯಲ್ಲಿ ಯಾವ ರೀತಿಯ ಬೆಳವಣಿಗೆಗಳನ್ನು ಮಾಡಿದರೆ ಲಾಭ ಗಳಿಸಲು ಸಾಧ್ಯ ಎಂಬುದನ್ನು ಅಲೋಚಿಸಿ ಮೀನುಗಾರಿಕೆ ಮಾಡಬೇಕು ಎಂದ ಅವರು ರಾಜ್ಯದಲ್ಲಿ 5.7 ಲಕ್ಷ ಹೆಕ್ಟೇರ್ ಜಲಾಶಯ ಇದ್ದು ಅದರಲ್ಲಿ ಶೇ.12 ರಷ್ಟು ಮಾತ್ರ ಮೀನು ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇದನ್ನು ಮುಂದಿನ ದಿನಗಳಲ್ಲಿ ಪೂರ್ತಿ ಪ್ರಮಾಣದ ಮೀನುಗಾರಿಕಾ ಚಟುವಟಿಕೆಗಳಿಗೆ ಬಳಸಿಕೊಂಡು ರಾಜ್ಯವು ಮೀನುಗಾರಿಕೆಯಲ್ಲಿ ದೇಶದಲ್ಲೇ ಪ್ರಥಮ ಸ್ಥಾನ ಪಡೆಯಬೇಕು ಎಂದರು.

ಮೀನುಗಾರಿಕೆಯಲ್ಲಿ ಬದಲಾವಣೆ ತರಬೇಕೆಂಬ ಉದ್ದೇಶದಿಂದ ಮೀನು ಚಿಪ್ಸ್ಗಳನ್ನು ಇತರೆ ಆಲೂಗಡ್ಡೆ, ಬಾಳೆಚಿಪ್ಸ್ಗಳಂತೆ ಗುಣಮಟ್ಟದೊಂದಿಗೆ ದಿನಕ್ಕೆ ಎರಡು ಲಕ್ಷಕ್ಕೂ ಹೆಚ್ಚು ಪ್ಯಾಕ್ ಉತ್ಪಾದಿಸಿ ಮಾರುಕಟ್ಟೆಗೆ ಬಿಡಲಾಗುತ್ತದೆ. ಆದರೆ ಇದಕ್ಕೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ ಎಂದರು.

ಮೀನುಗಾರಿಕೆ ಜಂಟಿ ನಿರ್ದೇಶಕ ದಿನೇಶ್ ಕುಮಾರ್ ಹೆಚ್.ಕೆ ಪ್ರಾಸ್ತವಿಕ ಮಾತುಗಳನ್ನಾಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಶಾಸಕ ರಘುಪತಿ ಭಟ್, ಕಾಪು ವಿಧಾನಸಭಾ ಕ್ಷೇತ್ರ ಶಾಸಕ ಲಾಲಾಜಿ ಆರ್.ಮೆಂಡನ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ತಾಲೂಕು ಪಂಚಾಯತ್ ಅಧ್ಯಕ್ಷೆ ಸಂಧ್ಯಾ ಕಾಮತ್, ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಮೀನುಗಾರಿಕೆ ಜಂಟಿ ನಿರ್ದೇಶಕ ತಿಪ್ಪೇಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.


Spread the love