ಮೀನುಗಾರರ ಪತ್ತೆಗೆ ಆಗ್ರಹಿಸಿ ಉಡುಪಿಯಲ್ಲಿ ಬೃಹತ್ ಪ್ರತಿಭಟನೆ ; 4 ಗಂಟೆಗಳ ಕಾಲ ರಾಹೆ. 66 ಸಂಪೂರ್ಣ ಬಂದ್
ಉಡುಪಿ: ಮಲ್ಪೆಯಲ್ಲಿ 7 ಮೀನುಗಾರರು ನಾಪತ್ತೆ ಹಿನ್ನೆಲೆಯಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಮೀನುಗಾರರ ಪತ್ತೆಗೆ ಆಗ್ರಹಿಸಿ ಪ್ರತಿಭಟನೆ ಕೈಗೊಂಡಿರುವ ಮೀನುಗಾರರು ರಾಷ್ಟ್ರೀಯ ಹೆದ್ದಾರಿ 66ನ್ನು ಸಂಪೂರ್ಣ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
 
  
  
  
  
  
  
  
  
  
  
  
  
  
  
  
  
  
  
 
ಅಂಬಲಪಾಡಿ ಬೈಪಾಸ್ ಬಳಿ ಜನರು ಜಮಾಯಿಸಿರುವ ಜನರು ರಾಷ್ಟ್ರೀಯ ಹೆದ್ದಾರಿಯನ್ನು ಒಂದು ಗಂಟೆಗೂ ಹೆಚ್ಚು ಕಾಲ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಪರ್ಯಾಯ ರಸ್ತೆ ಮೂಲಕ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪ್ರತಿಭಟನಾ ಸಭೆ ನಡೆಸಿ ಮೀನುಗಾರರ ಸುರಕ್ಷಿತ ವಾಪಸಾತಿಗೆ ಪ್ರಾರ್ಥನೆ ಸಲ್ಲಿಸಿದರು.
ಪತ್ತೆ ಕಾರ್ಯಾಚರಣೆ ಚುರುಕುಗೊಳಿಸುವಂತೆ ಒತ್ತಾಯಿಸಿ ಉಡುಪಿಯ ಮಲ್ಪೆಯಿಂದ ಮೀನುಗಾರರು ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಉಡುಪಿ, ದಕ್ಷಿಣ ಕನ್ನಡ, ಉತ್ತರಕನ್ನಡ ಜಿಲ್ಲೆಯ ಇಪ್ಪತ್ತು ಸಾವಿರಕ್ಕೂ ಅಧಿಕ ಮೀನುಗಾರರು, ಮೀನುಗಾರ ಮಹಿಳೆಯರು ಉಡುಪಿಯ ಮಲ್ಪೆಯಿಂದ ಅಂಬಲಪಾಡಿವರೆಗೆ ಪ್ರತಿಭಟನಾ ಮೆರವಣಿಗೆ ಕೈಗೊಂಡರು.
ಡಿಸೆಂಬರ್ 13 ರಂದು ಮಲ್ಪೆಯಿಂದ ತೆರಳಿದ್ದ ಮೀನುಗಾರಿಕಾ ಬೋಟ್ ಮಹಾರಾಷ್ಟ್ರ- ಗೋವಾ ಗಡಿಯಲ್ಲಿ ನಾಪತ್ತೆಯಾಗಿತ್ತು. ಅದರಲ್ಲಿ 7 ಜನ ಮೀನುಗಾರರಿದ್ದರು. ಅಂದಿನಿಂದ ಇಂದಿನವರೆಗೂ ನಾಪತ್ತೆಯಾದವರ ಬಗ್ಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ.
ಎಸ್ಪಿ ಲಕ್ಷ್ಮಣ ನಿಂಬರಗಿ, ಡಿವೈಎಸ್ಪಿ ಟಿ. ಆರ್. ಜೈಶಂಕರ್, ದಿನೇಶ್ ಕುಮಾರ್ ಸ್ಥಳದಲ್ಲಿ ಹಾಜರಿದ್ದು ಭದ್ರತೆ ನೋಡಿಕೊಂಡರು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್ ಮೆಂಡನ್, ದಿನಕರ್ ಶೆಟ್ಟಿ, ಭರತ್ ಶೆಟ್ಟಿ, ಪ್ರತಿಭಟನೆಗೆ ಸಾಥ್ ನೀಡಿದ್ದು, 400ಕ್ಕೂ ಅಧಿಕ ಪೊಲೀಸ್ ಸ್ಥಳದಲ್ಲಿ ಹಾಜರಿದ್ದರು.
ಮಹಿಳಾ ಮೀನು ಮಾರಾಟಗಾರರ ಸಂಘ ಹಾಗೂ ಮಹಿಳಾ ಸಂಘ-ಸಂಸ್ಥೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಮಹಿಳಾ ಮೀನುಗಾರರು ಧರಣಿಯಲ್ಲಿ ಭಾಗವಹಿಸಿದ್ದಾರೆ. ‘ಮೀನುಗಾರರ ಜೀವಕ್ಕೆ ಬೆಲೆ ಇಲ್ಲವೇ?’ ‘ದೇಶ, ರಾಜ್ಯವನ್ನು ಆಳುವವರೇ ಮೀನುಗಾರರ ಸಂಕಷ್ಟ ಅರಿಯಿರಿ’ ‘ನಾಪತ್ತೆಯಾಗಿರುವ ಮೀನುಗಾರರನ್ನು ಹುಡುಕಿಕೊಡಿ’ ಎಂಬ ಘೋಷಣಾ ಫಲಕಗಳನ್ನು ಹಿಡಿದು ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆ ಸಾಗುವ ದಾರಿಯುದ್ದಕ್ಕೂ ಪ್ರತಿಭಟನಾಕಾರರಿಗೆ ತಂಪು ಪಾನೀಯವನ್ನು ವಿತರಿಸಲಾಯಿತು.
ಪ್ರತಿಭಟನೆಯ ಕೊನೆಯಲ್ಲಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವೆ ಡಾ ಜಯಮಾಲಾ ಅವರು ಪ್ರತಿಭಟನಾಕಾರರಿಂದ ಮನವಿಯನ್ನು ಸ್ವೀಕರಿಸಿದರು ಮತ್ತು ಸರಕಾರ ಮೀನುಗಾರರ ಪತ್ತೆಗಾಗಿ ಎಲ್ಲಾ ರೀತಿಯ ತಂತ್ರಜ್ಞಾನಗಳನ್ನು ಬಳಸಿ ಹುಡುಕಾಟ ನಡೆಸಲಿದೆ ಎಂದರು.
 
            
