ಮುಂಬೈ: ನಿರ್ಮಾಣ ಹಂತದ ಕಟ್ಟಡದಿಂದ ಸಿಮೆಂಟ್ ಬ್ಲಾಕ್ ಬಿದ್ದು ಮಂಗಳೂರು ಮೂಲದ ಯುವತಿ ಸಾವು
ಮುಂಬೈ: ನಿರ್ಮಾಣ ಹಂತದ ಕಟ್ಟಡದಿಂದ ಸಿಮೆಂಟ್ ಬ್ಲಾಕ್ ಒಂದು ತಲೆ ಮೇಲೆ ಬಿದ್ದ ಪರಿಣಾಮ ಮಂಗಳೂರು ಮೂಲದ ಯುವತಿ ಸಾವನಪ್ಪಿದ ಘಟನೆ ಮುಂಬೈನ ಜೋಗೇಶ್ವರಿ ಪೂರ್ವದ ಠಾಕೂರ್ ರಸ್ತೆಯ ಸಮೀಪದಲ್ಲಿ ನಡೆದಿದೆ.
ಮೃತರನ್ನು ಕಿನ್ನಿಗೋಳಿ ಮೂಲದ ಸದ್ಯ ಮುಂಬೈನಲ್ಲಿ ಬ್ಯಾಂಕ್ ಉದ್ಯೋಗಿಯಾಗಿರುವ 22 ವರ್ಷದ ಸಂಸ್ಕೃತಿ ಅಮೀನ್ ಎಂದು ಗುರುತಿಸಲಾಗಿದೆ.
ಸಂಸ್ಕೃತಿ ಅಮೀನ್ ಮುಂಬೈನ ಕೋಟ್ಯಾನ್ ಕ್ಯಾಟರರ್ಸ್‌ನ ಮಾಲೀಕರಾದ ಅನಿಲ್ ಮತ್ತು ಪದ್ಮಾವತಿ ಅಮೀನ್ ಅವರ ಏಕೈಕ ಪುತ್ರಿ. ಸಂಸ್ಕೃತಿ ಎಂದಿನಂತೆ ಬೆಳಿಗ್ಗೆ 9.30 ರ ಸುಮಾರಿಗೆ ಕೆಲಸಕ್ಕೆ ಹೋಗಲು ಮನೆಯಿಂದ ಹೊರಟಿದ್ದರು. ಅವರು ತಮ್ಮ ನಿವಾಸದಿಂದ ಕೆಲವೇ ಮೀಟರ್ ದೂರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹತ್ತಿರದ ನಿರ್ಮಾಣ ಹಂತದ ಕಟ್ಟಡದಿಂದ ಸಿಮೆಂಟ್ ಬ್ಲಾಕ್ ಅವರ ತಲೆಯ ಮೇಲೆ ಬಿದ್ದಿದೆ. ತೀವ್ರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಅವರ ತಂದೆ ಅನಿಲ್ ಅಮೀನ್ ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರಲ್ಲಿ ಮೃತಪಟ್ಟಿದ್ದಳು.
ಶದ್ದಾ ಲೈಫ್ ಡೆವಲಪರ್ಸ್ ಎಂಬ ಕಂಪೆನಿ ಶಿವಕುಂಜ್‌ನ ಈ ಕಟ್ಟಡ ನಿರ್ಮಾಣ ಕಾರ್ಯ ನಡೆಸುತ್ತಿದ್ದು, ಸ್ಥಳೀಯರ ಪ್ರಕಾರ ಈ ಘಟನೆಗೂ ಮೊದಲು ಹಲವು ಸಲ ಕಟ್ಟಡದಿಂದ ಕಲ್ಲುಗಳು ಬಿದ್ದಿದ್ದವು, ಆದರೆ ಇಲ್ಲಿವರೆಗೂ ಯಾವುದೇ ಅಪಾಯ ಸಂಭವಿಸಿರಲಿಲ್ಲ, ಕಟ್ಟಡದ ನಿರ್ಮಾಣದ ವೇಳೆ ಯಾವುದೇ ಸುರಕ್ಷತೆಯನ್ನು ಅವರು ಮಾಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.