ಮುದ್ರಾ ಯೋಜನೆ: ಅ.16ರಂದು ವಿಶೇಷ ಅಭಿಯಾನ

Spread the love

ಮುದ್ರಾ ಯೋಜನೆ: ಅ.16ರಂದು ವಿಶೇಷ ಅಭಿಯಾನ

ಮಂಗಳೂರು: ಪ್ರಧಾನ ಮಂತ್ರಿಯವರ ಮುದ್ರಾ ಯೋಜನೆಯು ಸಣ್ಣ ಉದ್ದಿಮೆಗಳಿಗೆ ಆರ್ಥಿಕ ಸಹಾಯ ಮತ್ತು ಸ್ವ ಉದ್ಯೋಗ ಕಲ್ಪಿಸುವ ಉದ್ದೇಶವನ್ನು ಹೊಂದಿದ್ದು, ಇದರ ಕುರಿತು ಅರಿವನ್ನು ಮೂಡಿಸಲು ಮಂಗಳೂರಿನ ಪುರಭವನದಲ್ಲಿ ಅ.16ರಂದು ರಂದು ಮುದ್ರಾ ಪ್ರಚಾರ ಅಭಿಯಾನ ನಡೆಯಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ಕೆ ಜಿ ಜಗದೀಶ ಹೇಳಿದ್ದಾರೆ.

ಅವರು ಸೋಮವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಈ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇಂದ್ರ ಸರ್ಕಾರದ ಈ ಯೋಜನೆಯು ಅತ್ಯಂತ ಮಹತ್ವಪೂರ್ಣ ಯೋಜನೆಯಾಗಿದ್ದು ಇದರ ಕುರಿತು ಜನಸಾಮಾನ್ಯರಿಗೂ ಅರಿವನ್ನು ಮೂಡಿಸಬೇಕಾದ ಅಗತ್ಯವಿದೆ ಜಿಲ್ಲೆಯ ಎಲ್ಲಾ ಬ್ಯಾಂಕ್‍ಗಳು ಈ ಅಭಿಯಾನದ ಯಶಸ್ಸಿಗೆ ಸಹಕರಿಸಬೇಕೆಂದು ಅವರು ತಿಳಿಸಿದರು.

ಮುದ್ರಾ ಯೋಜನೆಯ ಅರ್ಜಿ ಫಾರಂಗಳನ್ನು ಅಭಿಯಾನದಲ್ಲಿ ಸಾರ್ವಜನಿಕರಿಗೆ ವಿತರಿಸಲಾಗುವುದು. ಅಲ್ಲದೇ ಮುದ್ರಾ ಯೋಜನೆಯಲ್ಲಿ ಲಭ್ಯವಾಗುವ ಆರ್ಥಿಕ ನೆರವಿನ ಬಗ್ಗೆ ವಿವರಣೆ ನೀಡಲಾಗುವುದು. ಮುದ್ರಾ ಯೋಜನೆಯ ಅರ್ಜಿಯನ್ನು ಸ್ಥಳದಲ್ಲೇ ವಿವಿಧ ಬ್ಯಾಂಕುಗಳು ಸ್ವೀಕರಿಸಲಿವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಇದಲ್ಲದೇ ಬ್ಯಾಂಕುಗಳಲ್ಲಿ ದೊರಕುವ ಶೈಕ್ಷಣಿಕ ಸಾಲ ಹಾಗೂ ಮನೆ ನಿರ್ಮಾಣ ಸಾಲಕ್ಕೆ ದೊರಕುವ ಪ್ರಧಾನಮಂತ್ರಿ ಆವಾಸ್ ಯೋಜನೆ ಸಬ್ಸಿಡಿ ಅರ್ಜಿಗಳನ್ನೂ ಸ್ಥಳದಲ್ಲೇ ವಿತರಿಸಲಾಗುವುದು. ಜಿಲ್ಲೆಯ ಎಲ್ಲಾ ಬ್ಯಾಂಕುಗಳು ಅ.16ರಂದು ಪುರಭವನ ಆವರಣದಲ್ಲಿ ತಮ್ಮ ಸ್ಟಾಲ್‍ಗಳನ್ನು ತೆರೆದು ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳು ಸಭೆಯಲ್ಲಿದ್ದೆ ಎಲ್ಲಾ ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಅ.16ರಂದು ಬ್ಯಾಂಕ್ ಖಾತೆದಾರರಿಗೆ ಆಧಾರ್ ಸೀಡಿಂಗ್ ಹಾಗೂ ಮೊಬೈಲ್ ಸಂಖ್ಯೆ ಜೋಡಣೆಯ ಸೌಲಭ್ಯವನ್ನೂ ಮುದ್ರಾ ಅಭಿಯಾನದಲ್ಲಿ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಅ.16ರಂದು ನಡೆಯುವ ಮುದ್ರಾ ಅಭಿಯಾನಕ್ಕೆ ಎಲ್ಲಾ ಅಗತ್ಯ ಮೂಲಸೌಲಭ್ಯ ಒದಗಿಸಲು ಅವರು ಲೀಡ್‍ಬ್ಯಾಂಕ್ ಅಧಿಕಾರಿಗೆ ಸೂಚಿಸಿದರು. ಅಭಿಯಾನದ ಯಶಸ್ವಿಗಾಗಿ ವಿವಿಧ ಸಂಸ್ಥೆಗಳಿಗೆ ಅಭಿಯಾನ ನಿರ್ವಹಣೆಯ ಜವಾಬ್ಬಾರಿಯನ್ನು ಅವರು ನೀಡಿದರು.

ಸಭೆಯಲ್ಲಿ ಜಿ.ಪಂ. ಉಪಕಾರ್ಯದರ್ಶಿ ಎನ್.ಆರ್. ಉಮೇಶ್, ಲೀಡ್ ಬ್ಯಾಂಕ್ ಜಿಲ್ಲಾ ಮುಖ್ಯ ವ್ಯವಸ್ಥಾಪಕರಾದ ರಾಘವ ವಿ ಯಜಮಾನ್ಯ, ವಿವಿಧ ಬ್ಯಾಂಕ್ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love